ADVERTISEMENT

ವಾಡಿ | ಒಂದೆಡೆ ಶಿಕ್ಷಕರ ಕೊರತೆ; ಮತ್ತೊಂದೆಡೆ ಮಕ್ಕಳ ಬರ

ಕೊಲ್ಲೂರು ಪ್ರೌಢಶಾಲೆಗೆ ಅತಿಥಿ ಶಿಕ್ಷಕರೇ ಗತಿ, ಮಕ್ಕಳಿಲ್ಲದೇ ಮುಚ್ಚುವ ಹಂತಕ್ಕೆ ವಾಡಿ ಪ್ರೌಢಶಾಲೆ

ಸಿದ್ದರಾಜ ಎಸ್.ಮಲಕಂಡಿ
Published 5 ಜುಲೈ 2025, 5:58 IST
Last Updated 5 ಜುಲೈ 2025, 5:58 IST
ವಾಡಿ ಪಟ್ಟಣದ ಬಳಿರಾಮ ಚೌಕ್‌ನಲ್ಲಿ ನಿರ್ಮಿಸಲಾಗುತ್ತಿರುವ ಪ್ರೌಢಶಾಲೆ ಕಟ್ಟಡ ಅರ್ಧಕ್ಕೆ ನಿಂತಿರುವುದು
ವಾಡಿ ಪಟ್ಟಣದ ಬಳಿರಾಮ ಚೌಕ್‌ನಲ್ಲಿ ನಿರ್ಮಿಸಲಾಗುತ್ತಿರುವ ಪ್ರೌಢಶಾಲೆ ಕಟ್ಟಡ ಅರ್ಧಕ್ಕೆ ನಿಂತಿರುವುದು   

ವಾಡಿ: ಮಕ್ಕಳ ತೀವ್ರ ಕೊರತೆಯಿಂದ ಒಂದೆಡೆ ವಾಡಿ ಪಟ್ಟಣದ ಏಕೈಕ ಸರ್ಕಾರಿ ಪ್ರೌಢಶಾಲೆ ಮುಚ್ಚುವ ಹಂತಕ್ಕೆ ತಲುಪಿದ್ದರೆ, ಮತ್ತೊಂದೆಡೆ ಮಕ್ಕಳಿದ್ದರೂ ಶಿಕ್ಷಕರ ತೀವ್ರ ಕೊರತೆಯಿಂದ ಕೊಲ್ಲೂರು ಗ್ರಾಮಸ್ಥರೇ ಶಾಲೆಗೆ ಬೀಗ ಹಾಕಿ ಪ್ರತಿಭಟನೆಗಿಳಿಯುವ ಎಚ್ಚರಿಕೆ ನೀಡುವ ವೈರುಧ್ಯವೂ ಕಂಡು ಬರುತ್ತಿದೆ.‌

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ತೀವ್ರ ಕೊರತೆ ಕಂಡುಬರುತ್ತಿದೆ ಎನ್ನುವುದಕ್ಕೆ ಪುಷ್ಟಿ ನೀಡುವಂತೆ 50 ಸಾವಿರ ಜನಸಂಖ್ಯೆ ಹೊಂದಿರುವ ಸಿಮೆಂಟ್ ನಗರಿ ಖ್ಯಾತಿಯ ವಾಡಿ ಪಟ್ಟಣದಲ್ಲಿನ ಏಕೈಕ ಸರ್ಕಾರಿ ಪ್ರೌಢಶಾಲೆ ಮಕ್ಕಳ ತೀವ್ರ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿದೆ.

ಈ ಶಾಲೆಯಲ್ಲಿ 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು  ಕಲಿಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಕುಸಿತ ಕಾಣುತ್ತಿದೆ. ಬೋಧಕ ಮತ್ತು ಬೋಧಕೇತರ ಸೇರಿ ಒಟ್ಟು 13 ಜನ ಕಾಯಂ ಶಿಕ್ಷಕರು ಇದ್ದಾರೆ. ಕಳೆದ ವರ್ಷ 73 ಇದ್ದ ದಾಖಲಾತಿ ಈ ವರ್ಷ 53ಕ್ಕೆ ಕುಸಿದಿದೆ. ಖಾಸಗಿ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ವ್ಯಾಮೋಹವೇ ದಾಖಲಾತಿ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ADVERTISEMENT

ಇಲ್ಲಿನ ಕೋಣೆಗಳು ಮಳೆ ಬಂದರೆ ಸೋರುತ್ತವೆ. ಕಂಪ್ಯೂಟರ್ ಮತ್ತು ಕಚೇರಿ ಕಡತಗಳಿಗೆ ರಕ್ಷಣೆ ಇಲ್ಲದಂತಾಗಿದೆ. ₹1.40 ಕೋಟಿ ವೆಚ್ಚದಲ್ಲಿ 8 ಸುಸುಜ್ಜಿತ ಕೋಣೆಗಳ ನಿರ್ಮಾಣ 2023ರಲ್ಲಿ ಆರಂಭಿಸಲಾಗಿದೆ. ಆದರೆ ಜಮೀನು ವಿವಾದದಿಂದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದ್ದು ಪೋಷಕರ ಅತೃಪ್ತಿಗೆ ಕಾರಣವಾಗಿದೆ.

ಶಾಲಾ ಕೋಣೆಗಳು ಮಳೆ ನೀರಿನಿಂದ ತೊಪ್ಪೆಯಾಗಿರುವುದು.
ಕೊಲ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅತಿಥಿ ಶಿಕ್ಷಕರೊಬ್ಬರು ಪಾಠ ಮಾಡುತ್ತಿರುವುದು

ಕೊಲ್ಲೂರು ಅತಿಥಿ ಶಿಕ್ಷಕರೇ ಆಸರೆ

9 ಮತ್ತು 10ನೇ ತರಗತಿ ಸೇರಿ ಒಟ್ಟು 255 ವಿದ್ಯಾರ್ಥಿಗಳಿರುವ ಕೊಲ್ಲೂರು ಸರ್ಕಾರಿ ಪ್ರೌಢಶಾಲೆಗೆ ಮುಖ್ಯ ಶಿಕ್ಷಕ ಹೊರತುಪಡಿಸಿ ಒಬ್ಬರೂ ಕಾಯಂ ಶಿಕ್ಷಕರು ಇಲ್ಲದ ಕಾರಣ ಅತಿಥಿ ಶಿಕ್ಷಕರನ್ನೇ ನೆಚ್ಚಿಕೊಳ್ಳುವಂತಾಗಿದೆ. ಶಿಕ್ಷಕರ ಕೊರತೆ ನೀಗಿಸಲು ಪ್ರಸಕ್ತ ವರ್ಷ ಇಲ್ಲಿ ವಿಷಯವಾರು ಇಬ್ಬರಂತೆ ಒಟ್ಟು ಒಂಬತ್ತು ಜನ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಸನ್ನತಿ ಹೋತಿನಮಡು ರಾಂಪುರಹಳ್ಳಿ ಶಾಂಪುರಹಳ್ಳಿ ಉಳಂಡಿಗೇರ ಗ್ರಾಮಗಳಿಂದ ವಿದ್ಯಾರ್ಥಿಗಳು ಕಲಿಕೆಗೆ ಬರುತ್ತಿದ್ದು ಶಿಕ್ಷಕರ ಕೊರತೆ ಎದುರಾಗಿದೆ. ಕಾಯಂ ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಕೂಡಲೇ ಶಿಕ್ಷಕರ ನೇಮಕ ಮಾಡಬೇಕು ಎಂದು ಆಗ್ರಹಿಸಿದ ಪೋಷಕರು ಕಾಯಂ ಶಿಕ್ಷಕರು ಒದಗಿಸದಿದ್ದರೆ ಮಕ್ಕಳ ಸಮೇತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಯಂ ಶಿಕ್ಷಕರು ಕಳೆದ ವರ್ಷ ವರ್ಗವಾಗಿ ಹೋಗಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಇಲಾಖೆ ನಿಯಮದ ಪ್ರಕಾರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ
-ಶರಣಪ್ಪ ಹೊಸಮನಿ, ಮುಖ್ಯಶಿಕ್ಷಕ ಕೊಲ್ಲೂರು
ಅನುಭವಿ ಶಿಕ್ಷಕರು ಇಲ್ಲಿದ್ದು ಪೋಷಕರ ಮನವೊಲಿಸಿ ಮಕ್ಕಳನ್ನು ಕರೆತರುವ ಪ್ರಯತ್ನ ನಡೆದಿದೆ. 8 ಸುಸುಜ್ಜಿತ ಕೋಣೆಗಳ ಕಾಮಗಾರಿ ಜಮೀನು ವ್ಯಾಜ್ಯದಿಂದ ಅರ್ಧಕ್ಕೆ ಸ್ಥಗಿತಗೊಂಡಿದ್ದು ಇಲಾಖೆ ಗಮನಕ್ಕೆ ತರಲಾಗಿದೆ
-ರಾಮಕಿಶನರಾವ್ ಪವಾರ, ವಾಡಿ ಪ್ರೌಢಶಾಲೆ ಮುಖ್ಯಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.