ADVERTISEMENT

ಜೇವರ್ಗಿ | ಹೊಲಗಳಿಗೆ ನುಗ್ಗಿದ ಕಾಲುವೆ ನೀರು: ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2025, 14:37 IST
Last Updated 2 ಮಾರ್ಚ್ 2025, 14:37 IST
ಜೇವರ್ಗಿ ತಾಲ್ಲೂಕಿನ ಕೋನಾಹಿಪ್ಪರಗಾ ಗ್ರಾಮದ ಹತ್ತಿರ ಜೇವರ್ಗಿ ಶಾಖಾ ಕಾಲುವೆಯ ವಿತರಣಾ ಕಾಲುವೆ-18ರ ಅಡಿಯಲ್ಲಿ ಬರುವ ಸೀಳು ಕಾಲುವೆ-24 ಒಡೆದಿದ್ದರಿಂದ ಪರಿಣಾಮ ನೂರಾರು ಎಕರೆ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿರುವುದು
ಜೇವರ್ಗಿ ತಾಲ್ಲೂಕಿನ ಕೋನಾಹಿಪ್ಪರಗಾ ಗ್ರಾಮದ ಹತ್ತಿರ ಜೇವರ್ಗಿ ಶಾಖಾ ಕಾಲುವೆಯ ವಿತರಣಾ ಕಾಲುವೆ-18ರ ಅಡಿಯಲ್ಲಿ ಬರುವ ಸೀಳು ಕಾಲುವೆ-24 ಒಡೆದಿದ್ದರಿಂದ ಪರಿಣಾಮ ನೂರಾರು ಎಕರೆ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿರುವುದು   

ಜೇವರ್ಗಿ: ನಾರಾಯಣಪುರ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಹರಿಸಿದ್ದು, ರೈತರಿಗೆ ಒಂದೆಡೆ ಸಂತಸವಾದರೆ ಇನ್ನೊಂದೆಡೆ ಕಾಲುವೆ ದುರಸ್ತಿಯಾಗದ ಹಿನ್ನೆಲೆಯಲ್ಲಿ ನೀರು ಹೊಲಗಳಿಗೆ ನುಗ್ಗಿ ರೈತರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ತಾಲ್ಲೂಕಿನ ಕೋನಾಹಿಪ್ಪರಗಾ ಗ್ರಾಮದ ಹತ್ತಿರ ಜೇವರ್ಗಿ ಶಾಖಾ ಕಾಲುವೆಯ ವಿತರಣಾ ಕಾಲುವೆ-18ರ ಅಡಿಯಲ್ಲಿ ಬರುವ ಸೀಳು ಕಾಲುವೆ-24 ಒಡೆದ ಪರಿಣಾಮ ನೂರಾರು ಎಕರೆ ಹೊಲಗಳಿಗೆ ನೀರು ನುಗ್ಗಿದೆ.

ಕೆಬಿಜೆಎನ್‌ಎಲ್‌ನವರು ಏಕಾಏಕಿ ಕಾಲುವೆಗೆ ನೀರು ಹರಿಸಿದ ಪರಿಣಾಮ ನೀರು ಕಾಲುವೆಯಲ್ಲಿ ತುಂಬಿ ಮುಂದೆ ಹರಿಯುತ್ತಿದೆ. ಕಾಲುವೆ ಪಕ್ಕದ ರೈತರ ಹೊಲ-ತೋಟಗಳಿಗೆ ನುಗ್ಗಿ, ಇನ್ನೇನು ಜೋಳ ರಾಶಿ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ರೈತರ ಹೊಲಗಳು ಜಲಾವೃತಗೊಂಡಿವೆ. ಅಧಿಕಾರಿಗಳು ಕಾಲುವೆಗಳನ್ನು ದುರಸ್ತಿ ಮಾಡಿಲ್ಲ. ಈ ಕುರಿತು ಹಲವಾರು ಬಾರಿ ಅಧಿಕಾರಗಳಿಗೆ ತಿಳಿಸಿದರೂ ಗಮನಹರಿಸಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ADVERTISEMENT

ಕೃಷ್ಣಾ ಕಾಲುವೆ ನೀರು ಹರಿಸುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ, ತಾಲ್ಲೂಕಿನ ಕೋನಾಹಿಪ್ಪರಗಾ ಗ್ರಾಮದ ರೈತರನ್ನು ಕಂಗಾಲಾಗುವಂತೆ ಮಾಡಿದೆ. ಕೋನಾಹಿಪ್ಪರಗಾ ಗ್ರಾಮದ ರೈತರಾದ ಶರಣಪ್ಪ ವಾಲೀಕಾರ, ಅಮೀನಪ್ಪ, ಈರಣ್ಣಗೌಡ ಪಾಳ್ಯಾ, ದೇವಣ್ಣ ಜಾಜಿ, ಬೀರಪ್ಪ ಪೂಜಾರಿ, ರಜಾಕಸಾಬ ಮುಜಾವರ, ಸುಂದರ ಪೂಜಾರಿ, ಅಭಿ ಧರ್ಮರಾಯಗೌಡ, ಮಶಾಕಸಾಬ ಸೇರಿದಂತೆ ಹಲವಾರು ರೈತರ ಹೊಲಗಳಿಗೆ ನೀರು ಹರಿದು ತೋಟಗಾರಿಗೆ ಬೆಳೆಗಳು ಸೇರಿಂತೆ ಕಟಾವಿಗೆ ಬಂದ ಜೋಳ ನೆಲದ ಪಾಲಾಗಿದೆ.

ಮಳೆ ಕೊರತೆಯಿಂದ ಬೆಳೆ ಒಣಗುವ ಸ್ಥಿತಿಯಲ್ಲಿದ್ದವು. ಇಂತಹ ಹೊತ್ತಿನಲ್ಲಿ ನೀರಿ ಹರಿಸಿದ್ದು ಒಳ್ಳೆಯದಾಗಿದೆ. ಆದರೆ ಈ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಿ ಕಾಲುವೆಗಳು ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳದೆ, ಹರಿಸಿದ್ದು ಬೆಳೆ ಹಾನಿಯಾಗಲು ಕಾರಣವಾಗಿದೆ. ನೀರು ಹೊಲಕ್ಕೆ ನುಗ್ಗಿದ್ದರಿಂದ ಬಿತ್ತನೆಯಾದ ಬೀಜ ಮತ್ತು ಜೋಳದ ದಂಟು ಕೊಚ್ಚಿಕೊಂಡು ಹೋಗಿದೆ ಎಂದು ಗ್ರಾ.ಪಂ ಸದಸ್ಯರ ಹಣಮಂತ್ರಾಯ ಹಾಲಕಾಯಿ ಬೇಸರ ವ್ಯಕ್ತಪಡಿಸಿದರು.

ರಾಶಿಗಾಗಿ ಜೋಳ ಕಟಾವು ಮಾಡಿದ್ದೇವು. ಕಾಲುವೆ ನೀರು ಬಂದು ಜೋಳದ ದಂಟಿನ ಸಮೇತ ಕೊಚ್ಚಿಕೊಂಡು ಹೋಗಿದೆ. ಈಗ ಹೊಟ್ಟೆಗೆ ಹಿಟ್ಟಿಲ್ಲದಂತಾಗಿದ್ದು ಏನು ಮಾಡಬೇಕೆಂದು ತೋಚುತ್ತಿಲ್ಲ. ಸಂಬಂಧಪಟ್ಟವರು ನೆರವಿಗೆ ಬರಬೇಕು
ಶರಣಪ್ಪ ವಾಲಿಕಾರ ರೈತ
ಜೇವರ್ಗಿ ಶಾಖಾ ಕಾಲುವೆಯ ವಿತರಣಾ ಕಾಲುವೆ-18 ರ ಅಡಿಯಲ್ಲಿ ಬರುವ ಸೀಳು ಕಾಲುವೆ-24 ದುರಸ್ತಿಗಾಗಿ ಎಸ್ಟಿಮೇಟ್ ಮಾಡಿ ಕಳುಹಿಸಲಾಗಿದ್ದು ಮಂಜೂರು ದೊರಕಿದ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು
ಚಂದ್ರಕಾಂತ ಸಹಾಯಕ ಎಂಜಿನೀಯರ್ ಜೆಬಿಸಿ ಉಪವಿಭಾಗ ಸಂಖ್ಯೆ-15 ಅವರಾದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.