
ಕಲಬುರಗಿ: ನಗರದ ಪಂಚಶೀಲ ನಗರ, ಮಹಾವೀರ ನಗರ, ಗೋದುತಾಯಿ ನಗರ ಸೇರಿದಂತೆ 9 ಬಡಾವಣೆಗಳಿಗೆ ಕಳೆದ 12ರಿಂದ 15 ದಿನಗಳಿಂದ ಪಾಲಿಕೆಯಿಂದ ಕುಡಿಯುವ ನೀರು ಸರಬರಾಜು ಆಗಿಲ್ಲ. ಇದರಿಂದ ನಿವಾಸಿಗಳು ನೀರಿಗಾಗಿ ಪರದಾಡುವಂತಾಗಿದೆ.
ನಗರದ ಹೊಸ ಜೇವರ್ಗಿ ರಸ್ತೆಯ ಎಸ್.ಕೆ.ಯಾತ್ರಿಕ್ ನಿವಾಸ ಎದುರಿನ ಖಾಸಗಿ ಬಸ್ ನಿಲುಗಡೆ ಸ್ಥಳ, ಇಂಡಿಯನ್ ಆದಿತ್ಯ ಪೆಟ್ರೋಲ್ ಪಂಪ್ ಹತ್ತಿರ ನೀರಿನ ಪೈಪ್‌ಲೈನ್ ಒಡೆದಿದೆ. ಜೊತೆಗೆ ವಿಜಯ ಮೆಡಿಕೇರ್ ಆಸ್ಪತ್ರೆ ಹತ್ತಿರ (ಆಟೊ ನಿಲ್ದಾಣ) ಸಣ್ಣಪ್ರಮಾಣದಲ್ಲಿ ಪೈಪ್‌ಲೈನ್ ಒಡೆದಿದೆ. ಇದರಿಂದ ಮಹಾವೀರ ನಗರದ ಕೊಠಾರಿ ಭವನ ಹಿಂದುಗಡೆಯ ಓವರ್‌ಹೆಡ್ ಟ್ಯಾಂಕ್‌ಗೆ ನೀರು ಸರಬರಾಜು ಸ್ಥಗಿತವಾಗಿದೆ.
ಕೊಠಾರಿ ಭವನ ಹಿಂದಿನ ಓವರ್‌ಹೆಡ್ ಟ್ಯಾಂಕ್ ವ್ಯಾಪ್ತಿಯ ಪಂಚಶೀಲ ನಗರ, ಹನುಮಾನ ನಗರ, ಮಹಾವೀರ ನಗರ, ಶಾಸ್ತ್ರೀ ನಗರ, ವೆಂಕಟೇಶ ನಗರ, ಗೋದುತಾಯಿ ಕಾಲೊನಿ, ಕೊತ್ತಂಬರಿ ಲೇಔಟ್, ಭಗವತಿ ನಗರದ ಅರ್ಧ ಏರಿಯಾ, ಹೊಸ ಜೇವರ್ಗಿ ರಸ್ತೆಯಲ್ಲಿರುವ ಇಂಡಸ್ಟ್ರಿಯಲ್ ಏರಿಯಾ ಸೇರಿ ಒಟ್ಟು 9 ಕಾಲೊನಿಗಳಿಗೆ ನೀರು ವ್ಯತ್ಯಯ ಉಂಟಾಗಿದೆ. ಗೋದುತಾಯಿ ಕಾಲೊನಿಗೆ ನೀರು ಸರಬರಾಜು ಬಳಿಕ ಪೈಪ್‌ಲೈನ್ ಹಾಳಾಗಿದೆ. ಈವರೆಗೂ ದುರಸ್ತಿ ಆಗಿಲ್ಲ.
‘ಪಂಚಶೀಲ ನಗರದಲ್ಲಿ ಕಳೆದ ಫೆ.3ರಂದು ಪಾಲಿಕೆ ನೀರು ಬಂದಿತ್ತು. ಕುಡಿಯುವ ನೀರು ಎಲ್ಲಿಂದಲಾದರೂ ತರುತ್ತೇವೆ. ಬಳಕೆಗೆ ಎಲ್ಲಿಂದ ತರಬೇಕು? ಮನುಷ್ಯನ ಅಗತ್ಯ ಮೂಲಸೌಕರ್ಯವಾದ ನೀರೇ ಕೊಡದಿದ್ದರೆ ಹೇಗೆ?’ ಎಂದು ನಿವಾಸಿ ಮಾಣಿಕ್ ದೊಡ್ಡಮನಿ ಅಸಮಾಧಾನ ವ್ಯಕ್ತಪಡಿಸಿದರು.
‘ಪಂಚಶೀಲ ನಗರದ ಎರಡು ಬೋರ್‌ವೆಲ್ ಕೆಟ್ಟು ಹೋಗಿವೆ. ಏರಿಯಾದ ನಿವಾಸಿ ಮೆಕ್ಯಾನಿಕ್‌ಗಳೇ ಹಲವು ಬಾರಿ ದುರಸ್ತಿ ಮಾಡುತ್ತಾರೆ. ಆದರೂ ಅವು ಪದೇಪದೆ ಹಾಳಾಗುತ್ತಿವೆ’ ಎಂದು ಯುವಕ ಹಾಜಿ ಆಕ್ರೋಶ ವ್ಯಕ್ತಪಡಿಸಿದರು.
‘ಮನೆಯಲ್ಲಿ ಬಟ್ಟೆ, ಬಾಂಡೆ ತೊಳೆಯಲು ಕೂಡ ನೀರಿಲ್ಲ. ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡಿದರೂ ಎಲ್ಲರೂ 4–5 ಕೊಡ ಹಿಡಿದುಕೊಳ್ಳುವಷ್ಟರಲ್ಲಿ ಖಾಲಿಯಾಗುತ್ತಿದೆ’ ಎಂದು ಮಹಿಳೆಯರು ಅಳಲು ತೋಡಿಕೊಂಡರು.
ಭಾನುವಾರ ಟ್ಯಾಂಕರ್ ನೀರು ಹಿಡಿಯಲು 40ಕ್ಕೂ ಹೆಚ್ಚು ಖಾಲಿ ಕೊಡಗಳನ್ನು ಪಾಳಿ ಇಟ್ಟಿರುವಾಗಲೇ ಟ್ಯಾಂಕರ್ ಖಾಲಿ ಆಗಿದ್ದು ಸ್ಥಳಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ಗೆ ಕಂಡುಬಂತು. ಇದರಿಂದ ಮಹಿಳೆಯರು ಮತ್ತಷ್ಟು ಆಕ್ರೋಶ ಹೊರಹಾಕಿದರು. ಮಧ್ಯಾಹ್ನ ಮತ್ತೆ 3 ಟ್ಯಾಂಕರ್ ನೀರು ತರುವುದಾಗಿ ಅಲ್ಲಿದ್ದ ವಾಲ್ವ್‌ಮೆನ್ ಶಬ್ಬೀರ್ ಐಮದ್ ಸಮಾಧಾನ ಪಡಿಸಿದರು.
ಪೈಪ್‌ಲೈನ್ ಬಹಳಷ್ಟು ಹಾಳಾಗಿದ್ದು 2 ದಿನಗಳಲ್ಲಿ ದುರಸ್ತಿ ಆಗಲಿದೆ. ಸಮಸ್ಯೆ ಇರುವ ಬಡಾವಣೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದುಕುಮಾರೇಶ ಎಲ್ ಅಂಡ್ ಟಿ ಕಂಪನಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.