ಕಲಬುರಗಿ: ‘ತಂಬಾಕು ಮತ್ತು ಧೂಮಪಾನ ಸೇವನೆಯಿಂದ ಸಮಾಜದಲ್ಲಿ ಹೆಚ್ಚಿನ ಯುವಕರು ಕ್ಯಾನ್ಸರ್ ರೋಗಗಳಿಗೆ ಬಲಿಯಾಗುತ್ತಿರುವುದು ವಿಷಾದದ ಸಂಗತಿ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಹೇಳಿದರು.
ನಗರದ ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ ಮತ್ತು ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯ ಎನ್‌ಎಸ್‌ಎಸ್ ಘಟಕ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಬೆಳೆದ ಮಕ್ಕಳು ದುಶ್ಚಟಗಳಿಗೆ ಬಲಿಯಾದಾಗ ಕುಟುಂಬಗಳು ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅನೇಕ ನೋವುಗಳನ್ನು ಅನುಭವಿಸುತ್ತಿರುವುದು ಕಣ್ಣಾರೆ ಕಂಡರು ಸಹ ಉಳಿದ ಯುವ ಸಮೂಹ ಎಚ್ಚರಗೊಳ್ಳದಿರುವುದು ದುರದೃಷ್ಟಕರ’ ಎಂದರು.
‘ತಂಬಾಕಿನಲ್ಲಿ ಹೆಚ್ಚಿನ ಪ್ರಮಾಣದ ನಿಕೋಟಿನ್ ಅಂಶವಿರುವುದರಿಂದ ಸುಪ್ರೀಂ ಕೋರ್ಟ್ ತಂಬಾಕು, ಸಿಗರೇಟಿನ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅವುಗಳ ಪೊಟ್ಟಣದ ಮೇಲೆ ಮುದ್ರಿಸಬೇಕೆಂದು ಆದೇಶ ನೀಡಿದೆ’ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಖ್ಯಾತನಾಳ, ಅಧ್ಯಕ್ಷತೆ ವಹಿಸಿದ್ದ ಕೆಪಿಇ ಸೊಸೈಟಿ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ್ ಮಾತನಾಡಿದರು. ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ. ರಾಕೇಶ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ಧನಶ್ರೀ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಾಂಶುಪಾಲ ಚಂದ್ರಶೇಖರ ಶೀಲವಂತ ಸ್ವಾಗತಿಸಿದರು.
ಅಲ್-ಬದರ್, ಎಚ್.ಕೆ.ಇ, ಇ.ಎಸ್.ಐ. ದಂತ ಮಹಾವಿದ್ಯಾಲಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಸೈಯದ್ ಥೈಹೆರ್ ಫಾತಿಮಾ(ಪ್ರಥಮ), ಪ್ರಶಾಂತ ಎಸ್. (ದ್ವಿತೀಯ), ಸುಷ್ಮಾ ಬಿ.ಎಂ. (ತೃತೀಯ) ಮತ್ತು ಘೋಷಣೆಗಳ ಸ್ಪರ್ಧೆಯಲ್ಲಿ ವಿಜೇತ ಎನ್.ವಿ.ನೂತನ ವಿದ್ಯಾಲಯಕ್ಕೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಸ್.ವಿ. ಪಸಾರ್, ತಂಬಾಕು ನಿಯಂತ್ರಣ ಸಲಹೆಗಾರ್ತಿ ಸುಜಾತಾ ಪಾಟೀಲ, ವಕೀಲ ಅಲ್ಲಾವುದ್ದೀನ್ ಸಗರ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.