ಮಡಿಕೇರಿ: ಒಂದೆಡೆ ರಾಟ್ ವಿಲ್ಲರ್ ಮತ್ತೊಂದೆಡೆ ಗ್ರೇಟ್‌ಡೇನ್, ಮೊಗದೊಂದು ಕಡೆ ಗೋಲ್ಡನ್ ರೆಟ್ರೀವರ್... ಹೀಗೆ ಅನೇಕ ಶ್ವಾನಗಳು ಕಣ್ಣಿಗೆ ಸಿಕ್ಕಿದ್ದು ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವ ಮುದ್ದಂಡ ಕಪ್‌ನಲ್ಲಿ.
ಇಲ್ಲಿ ಮ್ಯಾಸ್ಟಿಫ್, ಸೈಬೀರಿಯನ್ ಹಸ್ಕಿ, ಪಗ್, ಬುಲ್‌ಡಾಗ್, ಬೀಗಲ್, ಲ್ಯಾರ್ಬಡರ್, ಜರ್ಮನ್ ಶಫರ್ಡ್, ಮುಧೋಳ್ ಹೌಂಡ್ ಸೇರಿದಂತೆ 17 ವಿವಿಧ ತಳಿಯ ಶ್ವಾನಗಳು ಸೂಜಿಗಲ್ಲಿನಂತೆ ಸೆಳೆದವು.
ಟೂರ್ನಿಯ ಆಯೋಜಕರು ಪಶುವೈದ್ಯಕೀಯ ಇಲಾಖೆಯ ಸಹಯೋಗದಲ್ಲಿ ಗುರುವಾರ ಇಲ್ಲಿ ಶ್ವಾನ ಪ್ರದರ್ಶನ ಏರ್ಪಡಿಸಿದ್ದರು.
ಶ್ವಾನ ಪ್ರದರ್ಶನದಲ್ಲಿ ಕೇಚೇಟಿರ ಮದನ್ ಅವರ ಗ್ರೇಟ್ ಡೇನ್ ತಳಿ ಪ್ರಥಮ, ಕುಶಾಲನಗರದ ಶರಣ್ ಕುಮಾರ್ ಅವರ ರಾಟ್ ವಿಲ್ಲರ್ ದ್ವಿತೀಯ, ಅರೆಕಾಡು ಎ.ಕೆ.ಸೋಮಣ್ಣ ಅವರ ಮಿನಿ ಪಿಚ್ಛರ್ ತೃತೀಯ, ಮಡಿಕೇರಿಯ ಎಂ.ಐ.ರಾಹುಲ್ ಅವರ ಜರ್ಮನ್ ಶಫರ್ಡ್ 4ನೇ ಸ್ಥಾನ ಹಾಗೂ ತಾನ್ಯ ತಂಗಮ್ಮ ಅವರ ಸೈಬೀರಿಯನ್ ಹಸ್ಕಿ 5ನೇ ಸ್ಥಾನ ಪಡೆದುಕೊಂಡವು. ವಿಜೇತರ ಶ್ವಾನಗಳಿಗೆ ಆಕರ್ಷಕ ಟ್ರೋಫಿ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಅಲ್ಲದೇ ಭಾಗವಹಿಸಿದ್ದ ಎಲ್ಲಾ ಶ್ವಾನಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಎಲ್ಲಾ ಶ್ವಾನಗಳಿಗೆ ಜಿಲ್ಲಾ ಪಶುವೈದ್ಯಕೀಯ ಇಲಾಖೆಯಿಂದ ಉಚಿತ ರೇಬಿಸ್ ಲಸಿಕೆ ಹಾಗೂ ಔಷಧಿ, ಪಾಲಿಕ್ಲಿನಿಕ್‌ನಿಂದ ಜಂತು ನಾಶಕ ಲಸಿಕೆ ಹಾಕಲಾಯಿತು.
ಶ್ವಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ‘ವಿಶ್ವಾಸಾರ್ಹ ಹಾಗೂ ನಿಷ್ಠಾವಂತ ಸಾಕು ಪ್ರಾಣಿ ಶ್ವಾನ. ಮನೆಯಲ್ಲಿ ಪ್ರಾಣಿಗಳನ್ನು ಸಾಕುವುದರಿಂದ ನಿಷ್ಕಲ್ಮಶವಾದ ಪ್ರೀತಿ ಬೆಳೆಯುತ್ತದೆ’ ಎಂದರು.
ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಲಿಂಗರಾಜು ಹಾ.ದೊಡ್ಡಮನಿ ಮಾತನಾಡಿ, ‘ರೇಬಿಸ್ ಕಾಯಿಲೆಯು ಪ್ರಾಣಿಗಳಿಗೆ ಬಾರದಂತೆ ತಡೆಗಟ್ಟಬೇಕಾದರೆ ಲಸಿಕೆ ಒಂದೇ ಮಾರ್ಗ. ಜಿಲ್ಲೆಯಲ್ಲಿರುವ ಎಲ್ಲ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಉಚಿತ ರೇಬಿಸ್ ಲಸಿಕೆ ನೀಡಲಾಗುತ್ತಿದೆ’ ಎಂದು ಹೇಳಿದರು.
ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಮಾತನಾಡಿ, ‘ಈ ಬಗೆಯ ಶ್ವಾನ ಪ್ರದರ್ಶನದಿಂದ ವೈವಿಧ್ಯಮಯ ತಳಿಗಳ ಶ್ವಾನಗಳನ್ನು ಒಂದೇ ಕಡೆ ನೋಡುವಂತಹ ಅವಕಾಶ ಸಿಕ್ಕಿದೆ. ಶ್ವಾನಪ್ರಿಯರಿಗೆ ಪ್ರೋತ್ಸಾಹ ನೀಡಲೆಂದೇ ಇಂತಹ ಅಪರೂಪದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ’ ಎಂದರು.
ಪಾಲಿಕ್ಲಿನಿಕ್ ಜಿಲ್ಲಾ ಉಪನಿರ್ದೇಶಕ ಕ್ಯಾಪ್ಟನ್ ಡಾ.ಸಿ.ಪಿ.ತಿಮ್ಮಯ್ಯ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಶ್ವಾನಗಳನ್ನು ಸಾಕುವವರ ಸಂಖ್ಯೆ ಹೆಚ್ಚಾಗಿದೆ. ಶ್ವಾನಗಳನ್ನು ಸಾಕುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ’ ಎಂದು ಹೇಳಿದರು.
ಪಶುಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನ, ನಿವೃತ್ತ ಉಪನಿರ್ದೇಶಕ ಡಾ.ಕೆ.ಪಿ.ಅಯ್ಯಪ್ಪ, ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಕಾರ್ಯದರ್ಶಿ ಮುದ್ದಂಡ ಆದ್ಯ ಪೂವಣ್ಣ, ಉಪಾಧ್ಯಕ್ಷ ಡೀನ್ ಬೋಪಣ್ಣ ಭಾಗವಹಿಸಿದ್ದರು.
ಮಡಿಕೇರಿಯಲ್ಲೊಂದು ಅಪರೂಪದ ಕಾರ್ಯಕ್ರಮ ಶ್ವಾನಗಳಿಗೆ ಹಾಕಲಾಯಿತು ಉಚಿತ ರೇಬಿಸ್ ಲಸಿಕೆ ಶ್ವಾನಗಳಿಗೆ ಮನಸ್ಸಿಗೆ ನೆಮ್ಮದಿ ಎಂದ ವೈದ್ಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.