ADVERTISEMENT

ಕೊಡಗು– ‘ಫ್ರೂಟ್ಸ್’ ತಂತ್ರಾಂಶ: 40 ದಿನಗಳಲ್ಲಿ 44 ಸಾವಿರ ಸರ್ವೆ ನಂಬರ್‌ ಸೇರ್ಪಡೆ

ಕೆ.ಎಸ್.ಗಿರೀಶ್
Published 2 ಜನವರಿ 2024, 6:40 IST
Last Updated 2 ಜನವರಿ 2024, 6:40 IST
 ಪೊನ್ನಂಪೇಟೆ ತಾಲ್ಲೂಕಿನ ಕಿರುಗೂರಿನಲ್ಲಿ ಈಚೆಗೆ ಕಂಡು ಬಂದ ಒಣಗಿರುವ ಗದ್ದೆ
 ಪೊನ್ನಂಪೇಟೆ ತಾಲ್ಲೂಕಿನ ಕಿರುಗೂರಿನಲ್ಲಿ ಈಚೆಗೆ ಕಂಡು ಬಂದ ಒಣಗಿರುವ ಗದ್ದೆ   

ಮಡಿಕೇರಿ: ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ‘ಫ್ರೂಟ್ಸ್’ ತಂತ್ರಾಂಶಕ್ಕೆ ಕೊಡಗು ಜಿಲ್ಲೆಯಲ್ಲಿ ಕೇವಲ 40 ದಿನಗಳಲ್ಲಿ 44,487 ಸರ್ವೇನಂಬರ್‌ಗಳು ನೋಂದಣಿಯಾಗಿವೆ. ಇನ್ನೂ 86,807 ಸರ್ವೇನಂಬರ್‌ಗಳು ನೋಂದಣಿಯಾಗಬೇಕಿವೆ.

‘ಫ್ರೂಟ್ಸ್’ ತಂತ್ರಾಂಶದಲ್ಲಿ ರೈತರ ಸಂಪೂರ್ಣ ಮಾಹಿತಿಯನ್ನು ಡಿ.31ರ ಒಳಗಾಗಿ ಒದಗಿಸಬೇಕು. ಬೆಳೆ ನಷ್ಟ ಪರಿಹಾರದ ಮೊದಲ ಕಂತನ್ನು ಹೊಸ ವರ್ಷದ ಮೊದಲ ವಾರದಲ್ಲಿ ರೈತರ ಖಾತೆಗೆ ಫ್ರೂಟ್ಸ್ ಮೂಲಕ ಪಾವತಿಸಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೊಸಪೇಟೆಯಲ್ಲಿ ಮಂಗಳವಾರ ತಿಳಿಸಿದ್ದಾರೆ. ಜೊತೆಗೆ, ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಸಂಪೂರ್ಣ ಜಮೀನಿನ ಒಟ್ಟು ವಿಸ್ತೀರ್ಣ ನಮೂದಿಸಿದರೆ ಮಾತ್ರ ಅವರಿಗೆ ನ್ಯಾಯಯುತ ಪರಿಹಾರ ತಲುಪಲು ಸಾಧ್ಯವಾಗಲಿದೆ ಎಂದೂ ಅವರು ಹೇಳಿದ್ದಾರೆ. ಹೀಗಾಗಿ, ಬಾಕಿ ಉಳಿದಿರುವ 86,807 ಸರ್ವೇನಂಬರ್‌ಗಳನ್ನು ರೈತರು ಶೀಘ್ರದಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ.

ಒಂದು ವೇಳೆ ಇವುಗಳು ಬರ ಪರಿಹಾರ ಹಣ ಬಿಡುಗಡೆಗೂ ಮುನ್ನ ದಾಖಲಾಗದೇ ಹೋದರೆ ನೋಂದಣಿಯಾಗದ ಸರ್ವೇ ನಂಬರ್‌ಗಳ ಮಾಲೀಕರಿಗೆ ಪ‍ರಿಹಾರ ಸಿಗುವುದಿಲ್ಲ.

ADVERTISEMENT

‘ಫ್ರೂಟ್ಸ್’ ತಂತ್ರಾಂಶವನ್ನು ಸರ್ಕಾರ ಪರಿಚಯಿಸಿ ಸುಮಾರು 6 ವರ್ಷ ಕಳೆದಿದೆ. ಆದರೂ ಇದು ಜನಪ್ರಿಯಗೊಂಡಿರಲಿಲ್ಲ. ಜಿಲ್ಲೆಯಲ್ಲಿರುವ ಒಟ್ಟು 2,53,581 ಸರ್ವೇ ನಂಬರ್‌ಗಳ ಪೈಕಿ ನವೆಂಬರ್ 18ರ ಹೊತ್ತಿಗೆ 1,38,607 ಸರ್ವೆ ನಂಬರ್‌ಗಳು ಮಾತ್ರವೇ ‘ಫ್ರೂಟ್ಸ್’ ತಂತ್ರಾಂಶದಲ್ಲಿ ನೋಂದಣಿಯಾಗಿದ್ದವು. ಜಾಗೃತಿ ಕೊರತೆಯಿಂದ ರೈತರು ನೋಂದಣಿಗೆ ಹಿಂದೇಟು ಹಾಕಿದ್ದರು.

ನೋಂದಣಿಯಾಗಿದ್ದ ಬಹಳಷ್ಟು ರೈತರು ತಮ್ಮ 1 ಅಥವಾ 2 ಸರ್ವೆನಂಬರ್‌ಗಳನ್ನು ಮಾತ್ರವೇ ಸೇರಿಸಿದ್ದು, ತಮಗೆ ಸೇರಿದ ಭೂಮಿಯ ಇತರೆ ಸರ್ವೆ ನಂಬರ್‌ಗಳನ್ನು ಸೇರಿಸಿರಲಿಲ್ಲ. ಒಂದು ವೇಳೆ ಇವುಗಳನ್ನೆಲ್ಲ ಸೇರಿಸಿದರೆ ದೊಡ್ಡ ರೈತ ಎಂದು ಪರಿಗಣಿಸಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಿಗುವ ಸೌಲಭ್ಯಗಳು ಸಿಗುವುದಿಲ್ಲ ಎಂಬ ಭೀತಿ ಅವರನ್ನು ಕಾಡುತ್ತಿತ್ತು.

ಎಲ್ಲ ಸರ್ವೇನಂಬರ್‌ಗಳನ್ನೂ ಸೇರಿಸಿದರೆ ಎಲ್ಲ ಆಸ್ತಿ ವಿವರಗಳನ್ನೂ ತಾನಾಗಿಯೇ ಘೋಷಿಸಿಕೊಂಡಂತಾಗುತ್ತದೆ. ಇದರಿಂದ ಮುಂದೆ ಬೇರೆ ಏನಾದರೂ ತೊಂದರೆಯಾಗಬಹುದು ಎಂಬ ಹೆದರಿಕೆಯೂ ಬಹಳಷ್ಟು ಜನರಲ್ಲಿತ್ತು.

ಸರ್ಕಾರವು ಎಲ್ಲ ಸರ್ವೇ ನಂಬರ್‌ಗಳನ್ನು ‘ಫ್ರೂಟ್ಸ್‌’ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಒಂದು ವೇಳೆ ನೋಂದಣಿಯಾಗದೇ ಇದ್ದರೆ ಬರ ಪರಿಹಾರ ನೀಡುವುದಿಲ್ಲ ಎಂದು ಹೇಳುತ್ತಿದ್ದಂತೆ ಎಚ್ಚೆತ್ತ ಕೃಷಿ ಇಲಾಖೆಯ ಅಧಿಕಾರಿಗಳು ಈ ಕುರಿತು ವ್ಯಾಪಕ ಜಾಗೃತಿ ಮೂಡಿಸಿದರು. ಅಲ್ಲಲ್ಲಿ ವಿಶೇಷ ಅಭಿಯಾನಗಳನ್ನು ನಡೆಸಿದರು. ಇದರ ಪರಿಣಾಮವಾಗಿ ಕೇವಲ 40 ದಿನಗಳಲ್ಲಿ 44,487 ಸರ್ವೇನಂಬರ್‌ಗಳು ನೋಂದಣಿಯಾಗಿವೆ.

2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಂಭವಿಸಿರುವ ಬರ ಪರಿಸ್ಥಿತಿಯಲ್ಲಿ ಕೊಡಗು ಜಿಲ್ಲೆಯ ಎಲ್ಲಾ 5 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಸರ್ಕಾರ ಘೋಷಣೆ ಮಾಡಿದೆ. ಈ ಸಂಬಂಧ ಸರ್ಕಾರದಿಂದ ಪರಿಹಾರ ಧನ ಬಿಡುಗಡೆಯಾದ ಸಂದರ್ಭದಲ್ಲಿ ರೈತರಿಗೆ ಅವರ ಫ್ರೂಟ್ಸ್ ಐಡಿ ಗೆ ಸೇರಿಸಿರುವ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ಪರಿಹಾರ ಧನವನ್ನು ನೇರವಾಗಿ ‘ಡಿಬಿಟಿ’ ಮೂಲಕ ವರ್ಗಾಯಿಸಲಾಗುತ್ತದೆ. ಈ ವೇಳೆ ‘ಫ್ರೂಟ್ಸ್’ ತಂತ್ರಾಂಶದಲ್ಲಿ ನೋಂದಣಿಯಾಗಿರುವ ಸರ್ವೇನಂಬರ್‌ಗಳನ್ನಷ್ಟೇ ಸರ್ಕಾರ ಪರಿಗಣಿಸಲಿದೆ. ನೋಂದಣಿಯಾಗದ ಸರ್ವೆನಂಬರ್‌ಗಳಲ್ಲಿ ಬರದಿಂದ ಬೆಳೆ ನಾಶವಾಗಿದ್ದರೂ ಪರಿಹಾರ ದೊರೆಯದಿರುವ ಸಾಧ್ಯತೆಗಳಿವೆ.

ಎಲ್ಲಿ ಸೇರ್ಪಡೆ ಮಾಡಬೇಕು?

ಸಮೀಪದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ಪಶು ಸಂಗೋಪನಾ ಇಲಾಖೆ, ರೇಷ್ಮೆ ಇಲಾಖೆಯಲ್ಲಿ ಸೇರ್ಪಡೆಗೆ ಅವಕಾಶ ಇದೆ.

ಬೇಕಾಗುವ ದಾಖಲಾತಿಗಳು

ನ. 20ರಂದು ಪ್ರಜಾವಾಣಿಯಲ್ಲಿ ಫ್ರೂಟ್ಸ್ ತಂತ್ರಾಂಶ ಕುರಿತು ಪ್ರಕಟವಾಗಿದ್ದ ವಿಶೇಷ ವರದಿ

‘ಎಫ್‍ಐಡಿ’ಯನ್ನು ಮಾಡಿಸಲು ರೈತರು ತಮ್ಮ ಹೆಸರಿನಲ್ಲಿರುವ ಎಲ್ಲಾ ಜಮೀನುಗಳ ಪಹಣಿ ಪ್ರತಿಗಳು, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ಮೊಬೈಲ್ ಸಂಖ್ಯೆ, ಜಾತಿ ಪ್ರಮಾಣ ಪತ್ರದ ಪ್ರತಿ (ಪರಿಶಿಷ್ಟ ವರ್ಗದ ರೈತರಿಗೆ ಕಡ್ಡಾಯ) ಹಾಗೂ ಪಾಸ್‍ಪೋರ್ಟ್ ಅಳತೆಯ ಒಂದು ಭಾವಚಿತ್ರ.

‘ಫ್ರೂಟ್ಸ್’ ತಂತ್ರಾಂಶಕ್ಕೆ ಸರ್ವೇ ನಂಬರ್‌ಗಳನ್ನು ನೋಂದಣಿ ಮಾಡುವ ಪ್ರಕ್ರಿಯೆಯಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ. ನೋಂದಣಿ ಮಾಡಿಕೊಳ್ಳದ ರೈತರು ಅತಿ ಶೀಘ್ರದಲ್ಲಿ ನೋಂದಣಿ ಮಾಡಿಕೊಳ್ಳಬೇಕು
- ಸೋಮಸುಂದರ್ ಕೃಷಿ ಇಲಾಖೆಯ ಜಂಟಿ ನಿರ್ದೇಶಕ.

‘ಫ್ರೂಟ್ಸ್’ ತಂತ್ರಾಂಶಕ್ಕೆ ಸೇರ್ಪಡೆ ಮಾಡುವುದರಿಂದ ಆಗುವ ಲಾಭವೇನು?

  • ಸರ್ಕಾರದಿಂದ ಸವಲತ್ತುಗಳನ್ನು ಪಡೆಯಲು ಬಯಸುವ ಎಲ್ಲಾ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಅತ್ಯಗತ್ಯ

  • ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡು ಗುರುತಿನ ಸಂಖ್ಯೆ (ಎಫ್‍ಐಡಿ) ಪಡೆಯಬೇಕು.

  • ಕೃಷಿ ತೋಟಗಾರಿಕೆ ರೇಷ್ಮೆ ಪಶುಸಂಗೋಪನೆ ಕಂದಾಯ ಇಲಾಖೆ ಮತ್ತು ಇತರೆ ಸಂಬಂಧಿಸಿದ ಇಲಾಖೆಗಳಿಂದ ದೊರೆಯುವ ಸಹಾಯಧನ ಸೌಲಭ್ಯ ಪಡೆಯಲು ಮತ್ತು ಬೆಂಬಲ ಬೆಲೆ ಬೆಳೆ ವಿಮೆ ಬೆಳೆ ಸಾಲ ಬೆಳೆಹಾನಿ ಪರಿಹಾರ ಬ್ಯಾಂಕ್ ಸಾಲ ಪಡೆಯಲು ಹಾಗೂ ಯೋಜನೆಗಳಿಗೆ ಫ್ರೂಟ್ಸ್ ಸಂಖ್ಯೆ ಬಳಸಲಾಗುತ್ತಿದೆ. ಒಂದು ವೇಳೆ ಪಡೆಯದೇ ಹೋದರೆ ಇವುಗಳು ಕೈತಪ್ಪಲಿದೆ.

ಜಾಗೃತಿ ಲೇಖನ ಪ್ರಕಟಿಸಿದ್ದ ‘ಪ್ರಜಾವಾಣಿ’ ‘ಮೂಡದ ಜಾಗೃತಿ; ಫ್ರೂಟ್ಸ್‌ನತ್ತ ಬಾರದ ರೈತರು’ ಶೀರ್ಷಿಕೆಯಡಿ ‘ಪ್ರಜಾವಾಣಿ’ ‘ನಮ್ಮ ಜನ ನಮ್ಮ ಧ್ವನಿ’ ಅಂಕಣದಲ್ಲಿ ನ.20ರಂದು ವಿಶೇಷ ಲೇಖನ ಪ್ರಕಟಿಸಿತ್ತು. ಈ ಮೂಲಕ ‘ಫ್ರೂಟ್ಸ್‌’ ತಂತ್ರಾಂಶದಲ್ಲಿ ನೋಂದಣಿಯಾಗದೇ ಇದ್ದರೆ ಬರ ಪರಿಹಾರ ಸೇರಿದಂತೆ ಬಹಳಷ್ಟು ಸರ್ಕಾರಿ ಸೌಲಭ್ಯಗಳು ದೊರೆಯದೇ ಇರುವ ಕುರಿತು ಗಮನ ಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.