ADVERTISEMENT

ಮಡಿಕೇರಿ: ದಸರೆ ಮುಗಿದ ಮೇಲೆ ಕಸದ ರಾಶಿ

ಅಲ್ಲಲ್ಲಿ ಬಿದ್ದಿವೆ ಮದ್ಯದ ಬಾಟಲಿ, ಮಳೆಗೆ ಚರಂಡಿ ಸೇರಿದ ತ್ಯಾಜ್ಯ

ವಿಕಾಸ್ ಬಿ.ಪೂಜಾರಿ
Published 9 ಅಕ್ಟೋಬರ್ 2019, 19:45 IST
Last Updated 9 ಅಕ್ಟೋಬರ್ 2019, 19:45 IST
ಮಡಿಕೇರಿಯ ಚೌಕಿ ರಸ್ತೆಯುದ್ದಕ್ಕೂ ಬುಧವಾರ ಕಂಡು ಬಂದ ಕಸ
ಮಡಿಕೇರಿಯ ಚೌಕಿ ರಸ್ತೆಯುದ್ದಕ್ಕೂ ಬುಧವಾರ ಕಂಡು ಬಂದ ಕಸ   

ಮಡಿಕೇರಿ: ಐತಿಹಾಸಿಕ ದಸರಾ ಮಹೋತ್ಸವಕ್ಕೆ ಬುಧವಾರ ಮುಂಜಾನೆ ತೆರೆ ಬೀಳುತ್ತಿದ್ದಂತೆ ಮಂಜಿನ ನಗರಿ ಅಶುಚಿತ್ವದ ತಾಣವಾಗಿ ಮಾರ್ಪಟ್ಟಿದೆ. ರಾಜಮಾರ್ಗಗಳೂ ಸೇರಿದಂತೆ ನಗರದ ಗಲ್ಲಿ ಗಲ್ಲಿಗಳಲ್ಲಿ ಕಸದ ರಾಶಿಯೇ ರಾರಾಜಿಸುತ್ತಿದೆ.

ನಿರೀಕ್ಷೆಯಂತೆ ಸಹಸ್ರಾರು ಜನರು ನಗರಕ್ಕೆ ದಸರಾ ವೀಕ್ಷಣೆಗೆಂದು ಬಂದಿದ್ದರು. ಈ ವರ್ಷ ಪ್ಲಾಸ್ಟಿಕ್ ಮುಕ್ತ ದಸರಾ ಆಚರಣೆಗೆ ಆದ್ಯತೆ ನೀಡಲಾಗುವುದು, ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಕೂಡ ನಗರಸಭೆ ಅಗತ್ಯ ಕ್ರಮ ವಹಿಸಿತ್ತು. ಇದೀಗ ಎಲ್ಲೆಡೆ ಹರಡಿರುವ ಕಸ ವಿಲೇವಾರಿಯೇ ನಗರಸಭೆಗೆ ತಲೆನೋವಾಗಿದೆ.

ಮಂಗಳವಾರ ಸಂಜೆಯವರೆಗೂ ನಗರಸಭೆ ಸಿಬ್ಬಂದಿ ಟ್ರಾಕ್ಟರ್‌ ಬಳಸಿ ಕಸ ವಿಲೇವಾರಿ ಮಾಡಿದ್ದರು. ಆದರೆ, ಬುಧವಾರ ಬೆಳಿಗ್ಗೆಯ ವೇಳೆ ದಶಮಂಟಪಗಳು ಸಾಗಿದ ಮಾರ್ಗದಲ್ಲಿ ಕಸದ ರಾಶಿಯೇ ಬಿದ್ದಿದೆ. ಮಧ್ಯಾಹ್ನ ಸುರಿದ ಮಳೆಯಿಂದ ಎಲ್ಲ ಕಸವೂ ಚರಂಡಿ ಪಾಲಾಗಿದೆ.

ADVERTISEMENT

ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ನಡೆದ ಗಾಂಧಿ ಮೈದಾನ, ವಸ್ತು ಪ್ರದರ್ಶನ, ರಾಜಾಸೀಟ್‌ ಉದ್ಯಾನ ಸೇರಿದಂತೆ ನಗರದ ಕೆಎಸ್‌ಆರ್‌ಟಿಸಿ ಡಿಪೊ ಬಳಿಯಿಂದ ಹಳೇ ಖಾಸಗಿ ಬಸ್‌ ನಿಲ್ದಾಣದವರೆಗಿನ ರಸ್ತೆಗಳಲ್ಲಿ ತ್ಯಾಜ್ಯದ ರಾಶಿ ಬಿದ್ದಿತ್ತು.

ಕಸದ ಬುಟ್ಟಿಯೇ ಇಲ್ಲ: ದಸರಾ ಆಚರಣೆ ಇದ್ದರೂ ನಗರದ ಬಹುತೇಕ ಕಡೆ ಕಸದ ಬುಟ್ಟಿಗಳನ್ನು ಇಟ್ಟಿಲ್ಲ. ಹೀಗಾಗಿ, ಇಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿದೆ. ಇನ್ನು ಕಸದ ಬುಟ್ಟಿ ಇದ್ದ ಕಡೆ ಕಸ ಬುಟ್ಟಿಯಲ್ಲಿ ಭರ್ತಿಯಾಗಿ ನೆಲಕ್ಕೆ ಬಿದ್ದು ಗಬ್ಬು ನಾರುತ್ತಿದೆ.

ಎಲ್ಲೆಲ್ಲೂ ಬಣ್ಣದ ಪೇಪರ್: ಚುರುಮುರಿ, ಕಡಲೆಕಾಯಿ, ಸೌತೆಕಾಯಿ, ಐಸ್‌ ಕ್ರೀಂ ಮೊದಲಾದ ತಿನಿಸುಗಳನ್ನು ಖರೀದಿಸಿ ತಿನ್ನುವ ಸಾರ್ವಜನಿಕರು ಕಸವನ್ನು ಎಲ್ಲಿ ಹಾಕಬೇಕು ಎಂದು ಹುಡುಕಾಡಿ ಕೊನೆಗೆ ನಡುರಸ್ತೆಯಲ್ಲಿಯೇ ಹಾಕಿದ್ದಾರೆ.

ಶೋಭಾಯಾತ್ರೆ ಹಿನ್ನೆಲೆಯಲ್ಲಿ ಮಡಿಕೇರಿ ಸುತ್ತಮುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಆದರೂ, ರಸ್ತೆಗಳ ಬದಿಯಲ್ಲಿ, ವಿವಿಧ ಗಲ್ಲಿ, ಚರಂಡಿಗಳಲ್ಲಿ ಮದ್ಯದ ಬಾಟಲಿಗಳು ಕಾಣುತ್ತಿವೆ. ಪ್ರವಾಸಿಗರು ಅಲ್ಲಲ್ಲಿ ಮದ್ಯ ಸೇವಿಸಿ ಬಾಟಲಿ ಎಸೆದು ಹೋಗಿದ್ದಾರೆ.

ಮೊಬೈಲ್ ಶೌಚಾಲಯವೇ ಇಲ್ಲ: ದಸರಾಕ್ಕೆ ಮೊಬೈಲ್ ಶೌಚಾಲಯ ಕಲ್ಪಿಸುವ ಬಗ್ಗೆ ದಸರಾ ಪೂರ್ವಭಾವಿ ಸಭೆಯಲ್ಲಿ ಚರ್ಚೆಗಳಾಗಿತ್ತು. ಆದರೆ, ಇದ್ಯಾವುದು ಕಾರ್ಯರೂಪಕ್ಕೆ ಬರಲೇ ಇಲ್ಲ. ಶೌಚಾಲಯಕ್ಕಾಗಿನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಜನ ಸಾಲುಗಟ್ಟಿ ನಿಂತಿದ್ದರು.

ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯೆಂದರೆ ಶೋಭಾಯಾತ್ರೆ. ಪ್ರದರ್ಶನದ ಬಳಿಕ ಮಂಟಪಗಳು ಮಧ್ಯಾಹ್ನ ತನಕವೂ ರಸ್ತೆಯ ಇಕ್ಕೆಲಗಳಿಗೆ ಬಿದ್ದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.