ADVERTISEMENT

ಕೊಡಗು: ಕೋವಿಡ್‌ ನಕಲಿ ನೆಗೆಟಿವ್‌ ವರದಿ ತಯಾರಿಕೆ, ಪತ್ರಕರ್ತನ ಬಂಧನ

​ಪ್ರಜಾವಾಣಿ ವಾರ್ತೆ
Published 25 ಮೇ 2021, 9:40 IST
Last Updated 25 ಮೇ 2021, 9:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಡಿಕೇರಿ: ಕೇರಳಕ್ಕೆ ಹೋಗಿ ಬರುವವರಿಗೆ ಕೋವಿಡ್‌ನ ನಕಲಿ ನೆಗೆಟಿವ್ ವರದಿ ತಯಾರಿಸಿ, ಕೊಡುತ್ತಿದ್ದ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಡಗು ಜಿಲ್ಲೆ ಸಿದ್ದಾಪುರ ಭಾಗದ ವಿಜಯವಾಣಿ ಪತ್ರಿಕೆ ವರದಿಗಾರ ಅಬ್ದುಲ್ ಅಜೀಜ್ ಬಂಧಿತ ಆರೋಪಿ.

‘ಕರ್ನಾಟಕ- ಕೇರಳ ರಾಜ್ಯಗಳ ನಡುವೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಹಾಗೂ ಕಾಲ್ನಡಿಗೆಯಲ್ಲಿ ಸಂಚರಿಸುವವರು ಕಡ್ಡಾಯವಾಗಿ 72 ಗಂಟೆಗಳ ಒಳಗೆ ಪಡೆದಿರುವ ಕೊರೊನಾ ನೆಗೆಟಿವ್‌ ವರದಿ ತೋರಿಸಬೇಕು ಎಂಬ ನಿಯಮವಿದೆ. ಮೇ 24ರಂದು ಕುಟ್ಟ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಬಿ.ವಿ.ಹರೀಶ್ ಕುಮಾರ್ ಹಾಗೂ ಆರೋಗ್ಯ ಇಲಾಖೆ ನಾಗೇಂದ್ರ ಅವರು, ವಾಹನ ತಪಾಸಣೆ ಮಾಡುತ್ತಿದ್ದರು. ಅಂದು ಸಂಜೆ 4.45ರ ಸುಮಾರಿಗೆ ಕೇರಳ ಕಡೆಯಿಂದ ಬಂದ ಕೆಎ 12 ಬಿ 4623 ನೋಂದಣಿಯ ಸರಕು ಸಾಗಣೆಯ ವಾಹನ ತಡೆದು, ಪರಿಶೀಲನೆ ನಡೆಸಲಾಯಿತು. ವಾಹನ ಚಾಲಕ ಸಿದ್ದಾಪುರ ಬಳಿಯ ನೆಲ್ಯಹುದಿಕೇರಿಯ ಜಂಶೀರ್ ತೋರಿಸಿದ ವರದಿ ಪರಿಶೀಲಿಸಿ, ಅದರ ಕ್ಯೂಆರ್ ಕೋಡ್ ಸ್ಕ್ಯಾನಿಂಗ್‌ ಮಾಡಿದಾಗ ವರದಿ ನಕಲಿ ಎಂಬುದು ದೃಢಪಟ್ಟಿತ್ತು’ ಎಂದು ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ತಿಳಿಸಿದ್ದಾರೆ.

ADVERTISEMENT

ಅಂದು ಜಂಶೀರ್‌ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಸಿದ್ದಾಪುರದ ಪತ್ರಕರ್ತ ಅಬ್ದುಲ್ ಅಜೀಜ್ ಎಂಬಾತ ಕೇರಳಕ್ಕೆ ಪ್ರಯಾಣಿಸುವವರಿಗೆ ತಮ್ಮ ಸ್ಟುಡಿಯೊದಲ್ಲಿಯೇ ನೆಗೆಟಿವ್‌ ವರದಿ ತಯಾರಿಸಿ ಕೊಡುತ್ತಾನೆ ಎಂದು ತಿಳಿಸಿದ್ದ. ಈ ಮಾಹಿತಿ ಆಧರಿಸಿ ನಗರ ವೃತ್ತ ನಿರೀಕ್ಷಕ ಅನೂಪ್‌ ಮಾದಪ್ಪ ಹಾಗೂ ಸಿಬ್ಬಂದಿ, ಅಬ್ದುಲ್ ಅಜೀಜ್‌ನನ್ನು ಸೋಮವಾರ ರಾತ್ರಿ ಬಂಧಿಸಿದ್ದಾರೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

ಕುಟ್ಟ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.