
ಮಡಿಕೇರಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಿ 32 ದಿನಗಳು ಕಳೆದಿವೆ. ಇಲ್ಲಿಯವರೆಗೆ ಶೇ 88ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನು ಉಳಿದಿರುವ 8 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳಬೇಕಿದೆ. ಇದಕ್ಕಾಗಿ ಬಿರುಸಿನಿಂದ ಸಮೀಕ್ಷಾ ಕಾರ್ಯ ನಡೆಯುತ್ತಿದೆ.
ಕುಶಾಲನಗರದಲ್ಲಿ ನಿರೀಕ್ಷೆಗೂ ಮೀರಿದ ಸಮೀಕ್ಷೆ ನಡೆದಿದೆ. 88,835 ಮಂದಿಯ ಸಮೀಕ್ಷೆ ಮಾಡುವ ಗುರಿಯನ್ನು ನಿಗದಿಪಡಿಸಿಕೊಳ್ಳಲಾಗಿತ್ತು. ಆದರೆ, ಸಮೀಕ್ಷೆದಾರರು ಇದುವರೆಗೆ 1,08,597 ಮಂದಿಯನ್ನು ಸಮೀಕ್ಷೆ ಮಾಡಿದ್ದು, ಒಟ್ಟಾರೆ ಶೇ 122.25ರಷ್ಟು ಪ್ರಗತಿ ಸಾಧಿಸಲಾಗಿದೆ.
ಸಮೀಕ್ಷೆದಾರರು ಮನೆಮನೆಗೆ ಭೇಟಿ ಕೊಟ್ಟಾಗ ಈ ಮೊದಲು ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ಮಂದಿ ಇರುವುದು ಗೊತ್ತಾಯಿತು. ನಂತರ, ಎಲ್ಲರನ್ನೂ ಸಮೀಕ್ಷೆ ಮಾಡುತ್ತಾ ಹೋದಂತೆ ಸಂಖ್ಯೆ ಬೆಳೆಯುತ್ತಾ ಹೋಯಿತು ಎಂದು ಅಧಿಕಾರಿಗಳು ಹೇಳುತ್ತಾರೆ.
ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಪ್ರಗತಿ ಪೊನ್ನಂಪೇಟೆ ತಾಲ್ಲೂಕಿನಲ್ಲಾಗಿದೆ. ಇಲ್ಲಿ 94,266 ಮಂದಿಯನ್ನು ಸಮೀಕ್ಷೆ ಮಾಡುವ ಗುರಿ ನಿಗದಿ ಮಾಡಲಾಗಿತ್ತು. ಆದರೆ, ಇದುವರೆಗೂ ಆಗಿರುವುದು ಕೇವಲ 64,110 ಮಂದಿ ಮಾತ್ರ. ಕೇವಲ ಶೇ 68.01ರಷ್ಟು ಮಾತ್ರ ಪ್ರಗತಿ ಪೊನ್ನಂಪೇಟೆಯಲ್ಲಿ ಸಾಧಿತವಾಗಿದೆ.
ಶೇಕಡಾವಾರು ಪ್ರಗತಿಯಲ್ಲಿ 2ನೇ ಸ್ಥಾನದಲ್ಲಿರುವ ಮಡಿಕೇರಿ ತಾಲ್ಲೂಕಿನಲ್ಲಿ ಶೇ 85.08ರಷ್ಟು ಪ್ರಗತಿ ಸಾಧಿತವಾಗಿದೆ. ಇನ್ನು 20,861 ಮಂದಿಯನ್ನು ಸಮೀಕ್ಷೆ ಮಾಡಬೇಕಿದೆ.
3ನೇ ಸ್ಥಾನ ಪಡೆದಿರುವ ವಿರಾಜಪೇಟೆ ತಾಲ್ಲೂಕಿನಲ್ಲಿ ಶೇ 84.57ರಷ್ಟು ಪ್ರಗತಿ ಸಾಧಿತವಾಗಿದೆ. ಇಲ್ಲಿ ಇನ್ನೂ 17,014 ಮಂದಿ ಸಮೀಕ್ಷೆಗೆ ಬಾಕಿ ಉಳಿದಿದ್ದಾರೆ.
4ನೇ ಸ್ಥಾನ ಪಡೆದಿರುವ ಸೋಮವಾರಪೇಟೆ ತಾಲ್ಲೂಕಿನಲ್ಲಿ ಶೇ 81.64ರಷ್ಟು ಪ್ರಗತಿ ಸಾಧ್ಯವಾಗಿದೆ. ಇಲ್ಲಿ ಇನ್ನೂ 22,178 ಮಂದಿಯನ್ನು ಸಮೀಕ್ಷೆ ಮಾಡಬೇಕಿದೆ.
ಈಗ ಜಿಲ್ಲೆಯಲ್ಲಿ ಶಿಕ್ಷಕರ ಬದಲಿಗೆ ಕಂದಾಯ ಇಲಾಖೆ, ಪಂಚಾಯತ್ ರಾಜ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರ ಇಲಾಖೆಗಳ ಸಿಬ್ಬಂದಿಯನ್ನು ಸಮೀಕ್ಷಾ ಕಾರ್ಯಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.