
ಮಡಿಕೇರಿಯ ಗಾಂಧಿ ಭವನದಲ್ಲಿ ಗುರುವಾರ ಅಲ್ಲಾರಂಡ ವಿಠಲ ನಂಜಪ್ಪ ಅವರ ‘ಬಹುರೂಪಿ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಟಿ.ರಂಗಪ್ಪ, ವಕೀಲರಾದ ಬಿ.ಆರ್.ರಂಗಸ್ವಾಮಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಮನೆಯಪಂಡ ಎ.ಪೊನ್ನಪ್ಪ, ಹಿರಿಯ ಸಾಹಿತಿ ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ ಭಾಗವಹಿಸಿದ್ದರು
ಮಡಿಕೇರಿ: ಇಲ್ಲಿನ ಗಾಂಧಿ ಭವನದಲ್ಲಿ ಅಲ್ಲಾರಂಡ ವಿಠಲ ನಂಜಪ್ಪ ಅವರ ಕೃತಿ ‘ಬಹುರೂಪಿ’ ಓದುಗರ ಕೈ ಸೇರಿತು. ಕಾರ್ಯಕ್ರಮಕ್ಕೆಂದೆ ಹೆಸರಿಸಲಾಗಿದ್ದ ಎ.ಕೆ.ಸುಬ್ಬಯ್ಯ ವೇದಿಕೆಯಲ್ಲಿ ಹಿರಿಯ ಸಾಹಿತಿಗಳು, ಕಲಾವಿದರು, ಸಾಹಿತ್ಯಾಭಿಮಾನಿಗಳ ಸಮ್ಮುಖದಲ್ಲಿ ಈ ಪುಸ್ತಕ ಗುರುವಾರ ಲೋಕಾರ್ಪಣೆಗೊಂಡಿತು.
ಅಲ್ಲಾರಂಡ ರಂಗಚಾವಡಿ, ಸಿರಿಗನ್ನಡ ವೇದಿಕೆ, ಚಕೋರ ಕೊಡಗು ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ರಂಗಭೂಮಿ ಕಲಾವಿದ ಭರಮಣ್ಣ ಬೆಟ್ಟಗೇರಿ ಅವರು ಚಂದ್ರಶೇಖರ ಕಂಬಾರ ಅವರ ಜೋಕುಮಾರಸ್ವಾಮಿ ನಾಟಕದ ‘ಶರಣು ಹೇಳೇನ್ರಿ ಸ್ವಾಮಿ ನಾವು ನಿಮಗ ಸದ್ದು ಗದ್ದಲ ಮಾಡಬ್ಯಾಡ್ರಿ ಆಟದೊಳಗ...’ ರಂಗಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೊಂದು ಮುನ್ನುಡಿ ಬರೆದರು.
ಚಿಂತಕ ಎ.ಕೆ.ಸುಬ್ಬಯ್ಯ ಅವರಿಗೆ ಪುಸ್ತಕವನ್ನು ಸಮರ್ಪಿಸಲಾಗುತ್ತಿದೆ ಎಂದು ಹೇಳುತ್ತಲೇ ಮೈಕ್ ಹಿಡಿದು ಲೇಖಕ ಅಲ್ಲಾರಂಡ ವಿಠಲ ನಂಜಪ್ಪ ನಿಲ್ಲುತ್ತಿದ್ದಂತೆ ವೇದಿಕೆಯಲ್ಲಿದ್ದ ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಮನೆಯಪಂಡ ಎ.ಪೊನ್ನಪ್ಪ, ಸಾಹಿತಿ ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ, ವಕೀಲರಾದ ಬಿ.ಆರ್.ರಂಗಸ್ವಾಮಿ, ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಟಿ.ರಂಗಪ್ಪ ಹಾಗೂ ಶಿಕ್ಷಣ ತಜ್ಞರಾದ ಕಲ್ಲುಮಾಡಂಡ ಸರಸ್ವತಿ ಅವರು ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅಷ್ಟೂ ಮಂದಿ ಪುಸ್ತಕದಲ್ಲಿರುವ ವಿವಿಧ ಲೇಖನಗಳನ್ನು ಕುರಿತು ಮೆಚ್ಚುಗೆಯ ನುಡಿಗಳನ್ನಾಡಿದರು. ಕೆಲವರು ಕೆಲವೊಂದು ಲೇಖನಗಳ ಮಹತ್ವ ಕುರಿತೂ ಹೇಳಿದರು.
ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅವರು, ‘ಈಗ ನಾವು ವ್ಯತಿರಿಕ್ತವಾದ, ವ್ಯತ್ಯಸ್ಥವಾದ, ವಿರೋಧಾಭಾಸಗಳಿಂದ ಕೂಡಿದ ಪ್ರಪಂಚದಲ್ಲಿ ಇದ್ದೇವೆ’ ಎನ್ನುತ್ತಾ ಸಮಕಾಲೀನ ಸಂದರ್ಭದ ತವಕ, ತಲ್ಲಣಗಳನ್ನು ಸಾಹಿತ್ಯಾಸಕ್ತರ ಮುಂದಿಟ್ಟರು.
ಇಂತಹ ಹೊತ್ತಿನಲ್ಲಿ ಈ ಕೃತಿಯಲ್ಲಿನ ಹಲವು ವಿಚಾರಗಳು ಚಿಂತನೆಗೆ ಹಚ್ಚುತ್ತವೆ. ಅನೇಕ ಧ್ವನಿಪೂರ್ಣ ಮಾತುಗಳನ್ನು ಬಳಸಿದ್ದಾರೆ. ಪುಸ್ತಕದ ಭಾಷೆ ಕಾವ್ಯಭಾಷೆಯಂತಿದೆ. ಈ ಪುಸ್ತಕ ಓದಿದರೆ ಲೇಖಕ ಅಲ್ಲಾರಂಡ ವಿಠಲ ನಂಜಪ್ಪ ಅವರ ಪ್ರಖರ ಚಿಂತನೆಗಳ ಅರಿವು ದಕ್ಕುತ್ತದೆ ಎಂದು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಮನೆಯಪಂಡ ಎ. ಪೊನ್ನಪ್ಪ ಮಾತನಾಡಿ, ‘ನಿತ್ಯವೂ ಪುಸ್ತಕ ಓದಿದರೆ ಆರೋಗ್ಯ ಚೆನ್ನಾಗಿರುತ್ತದೆ’ ಎಂದು ತಿಳಿಸಿದರು.
‘ಈಗ ಬಹುರೂಪಿ ಪುಸ್ತಕ ನನ್ನ ಮನೆಯ ಅತಿಥಿ’ ಎಂದು ಖುಷಿಪಟ್ಟ ಅವರು ‘ಈ ಪುಸ್ತಕದಲ್ಲಿ 20 ಲೇಖನಗಳು ಚರ್ಚೆಯಾಗಬೇಕು’ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ಅವುಗಳು ಜನರಿಗೆ ತಲುಪುವಂತಹ ವ್ಯವಸ್ಥೆ ಮಾಡಬೇಕು ಎಂದರು.
ಪ್ರೊ.ಟಿ.ರಂಗಪ್ಪ ಅವರು ಪುಸ್ತಕದಲ್ಲಿರುವ ಲೇಖನಗಳು ಕ್ಷೇತ್ರ ಅಧ್ಯಯನದ ಮೂಲಕ ಬರೆದವುಗಳಾಗಿವೆ. ವಾಸ್ತವಕ್ಕೆ ಹತ್ತಿರದಲ್ಲಿವೆ ಎಂದು ಸವಿಸ್ತಾರವಾಗಿ ಪುಸ್ತಕ ಕುರಿತು ಮಾತನಾಡಿದರು.
ವಕೀಲರಾದ ಬಿ.ಆರ್.ರಂಗಸ್ವಾಮಿ ಅವರು ಅಲ್ಲಾರಂಡ ವಿಠಲ ನಂಜಪ್ಪ ಅವರದ್ದು ‘ತೀಕ್ಷ್ಣವಾದ ಬರವಣಿಗೆ, ಎಲ್ಲರಿಗೂ ದಕ್ಕುವ ವ್ಯಕ್ತಿ ಅವರು’ ಎಂದು ಶ್ಲಾಘಿಸಿದರು.
ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಅವರು ಹಾಡನ್ನು ಹಾಡಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಉದಿಯಂಡ ಜಯಂತಿ ಮಂದಣ್ಣ ಹಾಗೂ ಬೊಟ್ಟೋಳಂಡ ನಿವ್ಯ ಸಾಧಕರನ್ನು ಪರಿಚಯಿಸಿದರು. ರಂಜಿತ್ ಕವಲಪಾರ ಭಾಗವಹಿಸಿದ್ದರು.
ಕಾರ್ಯಕ್ರಮದ ಮೆರುಗು ಹೆಚ್ಚಿಸಿದ ರಂಗಗೀತೆ, ಹಾಡುಗಳು ಹಲವು ಸಾಧಕರಿಗೆ ಸನ್ಮಾನ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗಿ
ಸಾಧಕರಿಗೆ ಸನ್ಮಾನ ಸಾಹಿತಿಗಳಾದ ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಾಗೇಶ ಕಾಲೂರು ಕಲ್ಲುಮಾಡಂಡ ಸರಸ್ವತಿ ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ ಸ್ಥಾಪಕ ಅಧ್ಯಕ್ಷ ಚೆಂಬಾಂಡ ಶಿವಿ ಭೀಮಯ್ಯ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿ ಅಯ್ಯಪ್ಪ ಹಾಗೂ ಕೃಷ್ಣ ಕಂಪ್ಯೂಟರ್ಸ್‌ನ ಉಣ್ಣಿಕೃಷ್ಣ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಪುಸ್ತಕದ ಹೆಸರು: ಬಹುರೂಪಿ ಲೇಖಕ: ಅಲ್ಲಾರಂಡ ವಿಠಲ ನಂಜಪ್ಪ ಪ್ರಕಾಶನ: ಚಾಮುಂಡೇಶ್ವರಿ ಎಂಟರ್‌ಪ್ರೈಸಸ್ ವೀರಶೈವ ಅನಾಥಾಲಯ ರಾಮಾನುಜಾ ರಸ್ತೆ ಮೈಸೂರು. ಪುಟಗಳು: 294 ಬೆಲೆ: ₹320