ಮಡಿಕೇರಿ: ಮುಂದೆ ಬರುವ ಸವಾಲುಗಳನ್ನೆದುರಿಸಲು ಜೇನು ಕೃಷಿ ಕಾಫಿ ಬೆಳೆಗಾರರಿಗೆ ಒಂದು ಉತ್ತಮ ಉಪಕಸುಬು ಎಂದು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಪ್ರತಿಪಾದಿಸಿದರು.
ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯ, ನೆಸ್ಲೆ ಇಂಡಿಯ ಕಂಪನಿ ವತಿಯಿಂದ ಕುಶಾಲನಗರ ತಾಲ್ಲೂಕಿನ ಏಳನೇ ಹೊಸಕೋಟೆ ಸಮೀಪದ ನೆಸ್ಲೆ ಇಂಡಿಯಾದ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಕಾಫಿ ಬೆಳೆ ಪದ್ಧತಿಯಲ್ಲಿ ಜೇನು ಕೃಷಿಯನ್ನು ಒಂದು ಭಾಗವಾಗಿ ಅಳವಡಿಸಿಕೊಳ್ಳುವ ಕುರಿತ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೇನು ಕೃಷಿಯು ರೈತರಿಗೆ ಆದಾಯ ಕೊಡುವುದು ಮಾತ್ರವಲ್ಲ, ಕಾಫಿ ಬೆಳೆಯ ಇಳುವರಿ ಹೆಚ್ಚಾಗುವುದಕ್ಕೂ ಪೂರಕವಾಗಿದೆ ಎಂದು ಹೇಳಿದರು.
ಬಹಳಷ್ಟು ರೈತರು ಜೇನು ಪೆಟ್ಟಿಗೆ ತೆಗೆದುಕೊಂಡರೂ ಅವುಗಳನ್ನು ಸೂಕ್ತವಾಗಿ ನಿರ್ವಹಿಸುತ್ತಿಲ್ಲ. ಹಾಗಾಗಿ, ಜೇನು ಕುಟುಂಬಗಳು ಹೊರಟು ಹೋಗುತ್ತಿವೆ. ಜೇನು ಪೆಟ್ಟಿಗೆ ತೆಗೆದುಕೊಳ್ಳುವುದು ಎಷ್ಟು ಮುಖ್ಯವೋ, ಅವುಗಳ ನಿರ್ವಹಣಾ ಕ್ರಮಗಳ ಕುರಿತು ತಿಳಿದು ಕೊಳ್ಳುವುದೂ ಅಷ್ಟೇ ಮುಖ್ಯ ಎಂದರು.
ಕೆಲವು ಋತುಮಾನಗಳಲ್ಲಿ ಆಹಾರ ಇಲ್ಲದೇ ಜೇನು ನೊಣಗಳು ಪೆಟ್ಟಿಗೆಯನ್ನು ತೊರೆದು ಹೋಗುತ್ತವೆ. ಅದಕ್ಕಾಗಿ ಹೂ ಬಿಡುವ ಸಸ್ಯಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.
ಕಾಫಿ ತೋಟದಲ್ಲಿರುವ ಗಿಡ, ಮರಗಳು ಕಡಿಮೆಯಾದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಖರೀದಿಸದಿರುವಂತಹ ನಿಯಮಗಳು ಬರುವುದರಲ್ಲಿವೆ. ಹಾಗಾಗಿ, ಗಿಡ, ಮರಗಳನ್ನು ತೋಟಗಳಲ್ಲಿ ಉಳಿಸಿಕೊಳ್ಳುವುದು ಮಾತ್ರವಲ್ಲ, ಬೆಳೆಸಲೇಬೇಕಿದೆ. ಆಗ ಜೇನುಹುಳಗಳಿಗೆ ಆಹಾರ ಒದಗಿಸುವಂತಹ ಮರ, ಗಿಡಗಳನ್ನು ಬೆಳೆಸಿದರೆ ಜೇನೂ ಉಳಿಯುತ್ತದೆ, ಕಾಫಿಗೂ ಮಾರುಕಟ್ಟೆ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಿಕೊಂಡರೆ ಅದರ ಮೂಲಕ ಕಾಫಿ ಮಂಡಳಿಯ ಸೌಲಭ್ಯಗಳನ್ನೂ ಪಡೆಯಬಹುದು ಎಂದರು.
ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಕೆ.ಎಂ.ಹರಿಣಿಕುಮಾರ್ ಮಾತನಾಡಿ, ‘ಎಲ್ಲ ಜೇನುತುಪ್ಪಗಳು ಒಂದೇ ರೀತಿ ಇರುವುದಿಲ್ಲ. ಬೇರೆ ಬೇರೆ ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಎಲ್ಲ ತರಹದ ಜೇನುಗಳನ್ನು ಸಾಕಾಣೆ ಮಾಡಿ, ಅವುಗಳ ಮೌಲ್ಯವರ್ಧನೆ ಮಾಡಿಕೊಂಡರೆ ಆದಾಯ ಪಡೆಯಲು ಸಾಧ್ಯವಿದೆ. ಜೈವಿಕ ನಿಯಂತ್ರಣ ಕ್ರಮಗಳಲ್ಲಿ ಬಳಸುವ ಸಸ್ಯಜನ್ಯ ಕೀಟನಾಶಕಗಳೂ, ಜೈವಿಕ ಗೊಬ್ಬರಗಳನ್ನೂ ಕಾಫಿಯಲ್ಲಿ ಬಳಕೆ ಮಾಡಿಕೊಂಡರೆ ಆದಾಯ ಹೆಚ್ಚಳ ಮಾಡಿಕೊಳ್ಳಬಹುದು’ ಎಂದು ತಿಳಿಸಿದರು.
ಜೇನು ಕೃಷಿ ಮಾತ್ರವಲ್ಲ ಕೃಷಿ ಸಂಬಂಧಿತ ಇತರೆ ಚಟುವಟಿಕೆಗಳಿಗೆ ನೆಸ್ಲೆ ಸೇರಿದಂತೆ ಬೇರೆ ಬೇರೆ ಕಂಪನಿಗಳು ಸಹಭಾಗಿತ್ವ ನೀಡಿದರೆ ವಿಶ್ವವಿದ್ಯಾಲಯ ಅದಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ನೆಸ್ಲೆ ಇಂಡಿಯಾ ಕಂಪನಿಯ ಸುಕುಮಾರ್ ಅವರು, ನೆಸ್ಲೆ ಇಂಡಿಯಾದ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಜಿ.ಎಂ.ದೇವಗಿರಿ ಮಾತನಾಡಿ, ‘ಇಳುವರಿ ಹೆಚ್ಚಿಸಲು ಜೇನು ಸಾಕಾಣಿಕೆ ಮಹತ್ವದ ಪಾತ್ರ ವಹಿಸುತ್ತವೆ. ಮುಂದಿನ ದಿನಗಳಲ್ಲಿ ಅರಣ್ಯ ಮಹಾವಿದ್ಯಾಲಯವು ನೆಸ್ಲೆ ಕಂಪನಿ ಸಹಭಾಗತ್ವದಲ್ಲಿ ಈ ಯೋಜನೆಯ ಜೊತೆಗೆ ಕೊಡಗಿನ ಜೇನಿನ ವಿಭಿನ್ನತೆ ಸೇರಿದಂತೆ ಇನ್ನಿತರ ವಿಷಯ ಕುರಿತು ಕಾರ್ಯಾಗಾರಗಳನ್ನು ಆಯೋಜಿಸಲಿದೆ’ ಎಂದು ಹೇಳಿದರು.
ಅರಣ್ಯ ಮಹಾವಿದ್ಯಾಲಯದಿಂದ ಮಾಡಲಾಗುತ್ತಿರುವ ಜೇನು ಸಂಬಂಧಿತ ಕಾರ್ಯಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು.
ನೆಸ್ಲೆ ಕಂಪನಿಯ ಅಧಿಕಾರಿ ಮೇಘನಾ ಇದ್ದರು.
1 ಸಾವಿರ ರೈತರಿಗೆ ತರಬೇತಿ; ಕೆಂಚಾರೆಡ್ಡಿ
ಕಾಫಿ ಬೆಳೆ ಪದ್ಧತಿಯಲ್ಲಿ ಜೇನು ಕೃಷಿಯನ್ನು ಒಂದು ಭಾಗವಾಗಿ ಅಳವಡಿಸಿಕೊಳ್ಳುವ ಕುರಿತ ಯೋಜನೆಯ ಪ್ರಧಾನ ಸಂಶೋಧಕ ಡಾ.ಆರ್.ಎನ್.ಕೆಂಚಾರೆಡ್ಡಿ ಮಾತನಾಡಿ ‘ಈ ಯೋಜನೆಯಡಿ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯವು ನೆಸ್ಲೆ ಇಂಡಿಯಾ ಗುರುತಿಸುವ ಒಂದು ಸಾವಿರ ಮಂದಿ ರೈತರಿಗೆ ಉಚಿತ ತರಬೇತಿ ನೀಡಿ ಜೇನುಪೆಟ್ಟಿಗೆ ವಿತರಿಸುವ ಗುರಿ ಹೊಂದಿದೆ’ ಎಂದು ಹೇಳಿದರು.
ರೈತರಲ್ಲಿ ಜೇನುಹುಳಗಳಿಂದ ಪರಾಗಸ್ಪರ್ಶ ಕ್ರಿಯೆ ಹೆಚ್ಚಾಗಿ ಅವುಗಳಿಂದ ಇಳುವರಿ ಹೆಚ್ಚುತ್ತದೆ ಎಂಬ ಅರಿವು ಇತ್ತೀಚೆಗೆ ಮೂಡುತ್ತಿದೆ. ಅದರಿಂದಾಗಿಯೇ ಹೆಚ್ಚು ಹೆಚ್ಚು ರೈತರು ಜೇನು ಕೃಷಿಗೆ ಮುಂದಾಗುತ್ತಿದ್ದಾರೆ. ಆದರೆ ಅವರು ನಿರ್ವಹಣಾ ಕ್ರಮದಲ್ಲಿ ಸೋಲುತ್ತಿದ್ದಾರೆ. ಇನ್ನಷ್ಟು ಹೆಚ್ಚು ಆಳವಾದ ತರಬೇತಿ ಕೊಟ್ಟರೆ ಈ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು. ಅದಕ್ಕಾಗಿ ಈ ಯೋಜನೆ ರೂಪಿಸಲಾಗಿದೆ ಎಂದರು.
ನಂತರ ನಡೆದ ತಾಂತ್ರಿಕ ಸಮಾವೇಶದಲ್ಲಿ ಅವರು ‘ಜೇನು ಕುಟುಂಬದ ನಿರ್ವಹಣಾ ಕ್ರಮಗಳು ರೋಗಪೀಡೆಗಳ ನಿರ್ವಹಣೆಯ ಸಾಮಾನ್ಯ ಸಮಸ್ಯೆಗಳ ಕುರಿತು’ ಉಪನ್ಯಾಸ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.