ADVERTISEMENT

ಮಡಿಕೇರಿ: ಟಿಕೆಟ್‌ ಘೋಷಣೆಗೂ ಮೊದಲೇ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ!

ಸಮಾವೇಶದ ಮೂಲಕ ಮೊದಲ ಹೆಜ್ಜೆ ಇಟ್ಟ ಕಾಂಗ್ರೆಸ್‌ ಪಕ್ಷ, ಮುಖಂಡರು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 10:23 IST
Last Updated 24 ಫೆಬ್ರುವರಿ 2023, 10:23 IST
   

ಮಡಿಕೇರಿ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಸಮಾವೇಶ ಏರ್ಪಡಿಸುವ ಮೂಲಕ ಇತರೆ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಸಮಾವೇಶದಲ್ಲಿ ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿ ಹಾಗೂ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಅವರಿಗೆ ಬೆಂಬಲ ವ್ಯಕ್ತವಾಗಿರುವುದು ಅವರಿಗೆ ಇದು ‘ಪ್ಲಸ್ ಪಾಯಿಂಟ್’ ಎಂದೇ ವಿಶ್ಲೇಷಿಸಲಾಗುತ್ತಿದೆ.

‘ಬಿಜೆಪಿ ದೊಡ್ಡ ಸಮಾವೇಶ ಏರ್ಪಡಿಸುವ ಮುಂಚಿತವಾಗಿಯೇ ಜನಸ್ಪಂದನ ಹೆಸರಿನಲ್ಲಿ ವಿರಾಜಪೇಟೆಯಲ್ಲಿ ನಡೆದ ಸಮಾವೇಶವು ಪೊನ್ನಣ್ಣ ಅವರನ್ನೇ ಕೇಂದ್ರೀಕರಿಸಿತ್ತು. ಅವರ ಒಂದು ಶಕ್ತಿಪ್ರದರ್ಶನದ ಸಮಾವೇಶದಂತಿತ್ತು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮತ್ತೊಬ್ಬ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ವೀಣಾ ಅಚ್ಚಯ್ಯ ಅವರು ಸಮಾವೇಶದಲ್ಲಿ ಮಾತನಾಡದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಈ ಕುರಿತು ಅವರ ಬೆಂಬಲಿಗರೂ ತಮ್ಮ ಅಸಮಾಧಾನವನ್ನು ಹೈಕಮಾಂಡ್ ಬಳಿ ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಮಾವೇಶದ ವೇದಿಕೆಯಲ್ಲಿ ಕಾಂಗ್ರೆಸ್ ಸೇರಿದ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹಾಗೂ ರಾಜ್ಯ ವಕ್ತಾರ ಸಂಕೇತ್‌ ಪೂವಯ್ಯ
ಎ.ಎಸ್.ಪೊನ್ನಣ್ಣ ಅವರನ್ನು ಬೆಂಬಲಿಸಲೆಂದು ಹಾಗೂ ಜಾತ್ಯಾತೀತ ಶಕ್ತಿಗಳ ವಿಭಜನೆ ತಡೆಯಲು ಕಾಂಗ್ರೆಸ್ ಸೇರುತ್ತಿರುವುದಾಗಿ ಘೋಷಿಸಿದರು. ಜತೆಗೆ, ಪೊನ್ನಣ್ಣ ಅವರಂತಹ ಜನಪ್ರತಿನಿಧಿ ಬೇಕು ಎಂದು ಪ್ರತಿಪಾದಿಸಿದರು.

ಇವರ ಈ ಹೇಳಿಕೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಇದು ಇತರೆ ಆಕಾಂಕ್ಷಿಗಳಾದ ವಿಧಾನಪರಿಷತ್ತಿನ
ನಿಕಟಪೂರ್ವ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಮುಖಂಡ ಲತೀಫ್ ಅವರಿಗೆ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಸಹ ತಮ್ಮ ಭಾಷಣದಲ್ಲಿ ಯಾರಿಗೇ ಟಿಕೆಟ್ ಸಿಕ್ಕರೂ ಅಕ್ಕ, ತಮ್ಮನ ಹಾಗೆ ಒಟ್ಟಿಗೆ ಕೆಲಸ ಮಾಡಿ ಎಂಬ ಕಿವಿಮಾತೂ ಹೇಳಿದರು. ಸೂಚ್ಯವಾಗಿ ಬಂಡಾಯ ಬೇಡ ಎಂಬ ಅಂಶವನ್ನು ತಿಳಿಸುವ ಮೂಲಕ ಸಂಭಾವ್ಯ ಅಸಮಾಧಾನವನ್ನು ಸರಿಪಡಿಸುವ ಕೆಲಸ
ಮಾಡಿದರು.

ಮೂವರಿಂದ ಅರ್ಜಿ ಸಲ್ಲಿಕೆ: ಇತ್ತೀಚೆಗೆ ಮಡಿಕೇರಿಗೆ ಬಂದಿದ್ದ ವೀಕ್ಷಕರಾದ ಆರ್.ಧ್ರುವನಾರಾಯಣ ಹಾಗೂ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ವಿರಾಜಪೇಟೆ ಕ್ಷೇತ್ರದಿಂದ ಎ.ಎಸ್.ಪೊನ್ನಣ್ಣ, ವೀಣಾ ಅಚ್ಚಯ್ಯ ಹಾಗೂ ಲತೀಫ್ ಅವರು ಅರ್ಜಿ ಹಾಕಿದ್ದಾರೆ. ಸದ್ಯ, ಈವರೆಗೂ ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ.

ಕಾಂಗ್ರೆಸ್ ಅಲೆ ಎಬ್ಬಿಸಿದ ಸಮಾವೇಶ

ವಿರಾಜಪೇಟೆಯಲ್ಲಿ ನಡೆದ ಸಮಾವೇಶ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಶಕ್ತಿ ತುಂಬುವ ಕೆಲಸ ಮಾಡಿದೆ ಎಂದು ಪೊನ್ನಣ್ಣ ಬೆಂಬಲಿಗರು ಮಾತ್ರವಲ್ಲ ಇತರೆ ಪಕ್ಷದ ಕಾರ್ಯಕರ್ತರೂ ಹೇಳುತ್ತಾರೆ. ಎಲ್ಲರಿಗಿಂತ ಮುಂಚಿತವಾಗಿಯೇ ದೊಡ್ಡ ಸಮಾವೇಶ ನಡೆಸುವ ಮೂಲಕ ಕಾಂಗ್ರೆಸ್ ಶಕ್ತಿವರ್ಧನೆಗೆ ಮುಂದಾಗಿದೆ. ಇದು ಪಕ್ಷಕ್ಕೆ ಮುಂಬರುವ ದಿನಗಳಲ್ಲಿ ಲಾಭವಾಗಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

10ರಂದು ಬಿಜೆಪಿ ರಥಯಾತ್ರೆ

ಕಾಂಗ್ರೆಸ್ ಸಮಾವೇಶದ ಬೆನ್ನಲ್ಲೇ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಳ್ಳಲಿವೆ. ಬಿಜೆಪಿ ನಡೆಸುವ ರಥಯಾತ್ರೆಯು ಮಾರ್ಚ್ 10ರಂದು ಮಡಿಕೇರಿ ಹಾಗೂ ಗೋಣಿಕೊಪ್ಪಲಿಗೆ ಬರಲಿದೆ. ಆ ವೇಳೆ ಸಮಾವೇಶಗಳನ್ನು ನಡೆಸಲು ಬಿಜೆಪಿಯಲ್ಲೂ ಸಿದ್ಧತೆಗಳು ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.