ಕುಶಾಲನಗರ: ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ವರ್ಗದ ಸರ್ಕಾರಿ ನಿವೃತ್ತಿ ನೌಕರರ ಸಂಘದ ವತಿಯಿಂದ ಬುಧವಾರ ಭೀಮಾ ಕೋರೆಗಾಂವ್ ಯುದ್ಧದ ವಿಜಯೋತ್ಸವ ಆಚರಣೆ ಮಾಡಲಾಯಿತು.
ಇಲ್ಲಿನ ಮಹಾಲಕ್ಷ್ಮಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೋರೆಗಾಂವ್ ವಿಜಯೋತ್ಸವ ಆಚರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಪನ್ಮೂಲ ವ್ಯಕ್ತಿ ಮೆ.ನಾ.ವೆಂಕಟನಾಯಕ್, ಜನವರಿ 1ರಂದು ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವವನ್ನು ದೇಶದಾದ್ಯಂತ ಶೋಷಿತ ಸಮುದಾಯಗಳು ಆಚರಣೆ ಮಾಡುತ್ತಿವೆ. ಇಂದಿಗೂ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗದವರ ಮೇಲೆ ಶೋಷಣೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಪ್ರತಿ ಗ್ರಾಮದಲ್ಲಿ ಭೀಮ ಕೋರೆಗಾಂವ್ ಯುದ್ಧದ ವಿಜಯೋತ್ಸವದ ಕುರಿತು ಯುವ ಜನರಿಗೆ ಮಾಹಿತಿ ನೀಡಬೇಕಿದೆ ಎಂದರು.
ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ವರ್ಗದ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಸ್‌ಸಿ–ಎಸ್‌ಟಿ ಹಿಂದುಳಿದ ಮತ್ತು ಶೋಷಿತರ ಶೌರ್ಯದ ಸಂಕೇತವೇ ಕೋರೆಗಾಂವ್ ಯುದ್ಧವಾಗಿದೆ. ಭೀಮಾ ನದಿ ದಡದಲ್ಲಿ ಪೇಶ್ವೆ ಸೇನೆ ಹಾಗೂ ಬ್ರಿಟಿಷ್ ಸೈನಿಕರ ಮಧ್ಯೆ ನಡೆದ ಯುದ್ದದಲ್ಲಿ 24 ಗಂಟೆಯಲ್ಲಿ 5 ಸಾವಿರ ಪೇಶ್ವೆಗಳ ಸೈನಿಕರನ್ನು ಐನೂರು ಮಹರ್ ಸೈನಿಕರು ಸೋಲಿಸಿ ಶೌರ್ಯ ಮೆರೆದಿದ್ದಾರೆ ಎಂದರು.
ಕೋರೆಗಾಂವ್ ಯುದ್ಧದ ಇತಿಹಾಸವನ್ನು ಈ ದೇಶದ ಮೇಲ್ವರ್ಗದ ಪರವಾಗಿರುವ ಇತಿಹಾಸಕಾರರು ಮರೆಮಾಚಿದ್ದರು. ಕೇಂಬ್ರಿಡ್ಜ್ ವಿವಿ ಮ್ಯೂಸಿಯಂನಲ್ಲಿ ಬರೆದು ಸಂಗ್ರಹಿಸಿದ್ದನ್ನು ಅಂಬೇಡ್ಕರ್ ಓದಿದರು. ಅವರು ಭಾರತಕ್ಕೆ ಮರಳಿ ಭೀಮಾ ನದಿ ದಡದಲ್ಲಿರುವ ಕೋರೆಗಾಂವ್ ಯುದ್ಧ ನಡೆದ ಸ್ಥಳವನ್ನು ಪರಿಶೀಲಿಸಿ ಉತ್ಖನನ ಮಾಡಿ ಮಹರ್ ಜನಾಂಗದ ಸೈನಿಕರ ಶೌರ್ಯ ಸ್ಥೂಪವನ್ನು ನಿರ್ಮಿಸಿ, ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಿದರು ಎಂದರು.
ಕೊಡಗು ಜಿಲ್ಲಾ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್.ಅಶೋಕ್, ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ವರ್ಗದ ಸರ್ಕಾರಿ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಬಿ.ಸಿ.ರಾಜು, ಕಾರ್ಯದರ್ಶಿ ಯು.ಟಿ.ರಾಮಯ್ಯ, ಖಜಾಂಜಿ ನಿಂಗರಾಜು ಹಾಗೂ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.