ADVERTISEMENT

ಬಿಲ್ಲವ ಸಮಾಜ ಭವನ ಕಟ್ಟಲು ಎಲ್ಲರೂ ಕೈಜೋಡಿಸಿ: ಎ.ಎಸ್.ಪೊನ್ನಣ್ಣ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 4:55 IST
Last Updated 19 ಜನವರಿ 2026, 4:55 IST
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿದರು
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿದರು   

ಮಡಿಕೇರಿ: ‘ಸಮಾಜದಲ್ಲಿ ವಿವಿಧತೆ ಇದೆ. ಈ ವಿವಿಧತೆಯಲ್ಲಿ ಏಕತೆ ಉಳಿದರೆ ಮಾತ್ರ ಭಾರತ ಉಳಿಯುತ್ತದೆ’ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಪ್ರತಿಪಾದಿಸಿದರು.

ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ಭಾನುವಾರ ನಡೆದ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

ವಿವಿಧತೆಯೇ ಬೇರೆ, ಜಾತಿಪದ್ದತಿಯೇ ಬೇರೆ. ಈ ವಿವಿಧತೆಯ ಆಧಾರದ ಮೇಲೆ ಸಮಾಜದಲ್ಲಿ ಒಡಕು ತರುವುದನ್ನು ನಾವು ಒಪ್ಪಲು ಸಾಧ್ಯವೇ ಇಲ್ಲ. ಎಲ್ಲ ಸಮಾಜದ ಬೆಳವಣಿಗೆಗೆ ನಾವು ಅವಕಾಶ ಮಾಡಿಕೊಡಬೇಕು ಎಂದರು.

ADVERTISEMENT

‘ನಾನು ಶಾಸಕನಾಗಿ ಆಯ್ಕೆಯಾದ ನಂತರ ಬಿಲ್ಲವ ಸಮಾಜ ಸೇವಾ ಸಂಘದ ಮುಖಂಡರು ಭೇಟಿ ಮಾಡಿ 2003ರಿಂದಲೂ ಜಾಗಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಆದರೆ, ಇದುವರೆಗೂ ನಮಗೆ ಸಿಕ್ಕಿಲ್ಲ ಎಂದು ಮನವಿ ನೀಡಿದರು. ಆನಂತರ ನಾನು ಪ್ರಯತ್ನಪಟ್ಟೆ, ಆದರೆ ಅದನ್ನು ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಅಧಿಕಾರಿಗಳು 2 ಬಾರಿ ಕಡತವನ್ನು ವಾಪಸ್ ಕಳಿಸಿದರು. ಹಿಂದಿನ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮತ್ತೆ ಮತ್ತೆ ಕಡತ ಕಳಿಸಿದರು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಖಾತೆ ಸಚಿವ ಕೃಷ್ಣಬೈರೇಗೌಡ ಅವರನ್ನು ಭೇಟಿ ಮಾಡಿ ಚರ್ಚಿಸಿದೆ. ಅದರ ಫಲವಾಗಿ ನಗರದ ಹೃದಯ ಭಾಗದಲ್ಲಿ ಉತ್ತಮ ಜಾಗ ಸಮಾಜಕ್ಕೆ ಲಭಿಸಿತು’ ಎಂದು ಅವರು ಹೇಳಿದರು.

ಈಗ ಆ ಜಾಗವನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಅಲ್ಲಿ ಭವನ ನಿರ್ಮಿಸಲು ಎಲ್ಲರೂ ಕೈಜೋಡಿಸಿ ಎಂದರು.

ಪೊನ್ನಂಪೇಟೆಯಲ್ಲಿ ನಾರಾಯಣಗುರುಗಳ ಹೆಸರಿನಲ್ಲಿ ಭವನವೊಂದನ್ನು ನಿರ್ಮಿಸಲು ಜಾಗ ನಿಗದಿ ಮಾಡಿದ್ದು, ₹ 1 ಕೋಟಿ ಹಣ ಮೀಸಲಿರಿಸಲಾಗಿದೆ ಎಂದರು.

ಮಕ್ಕಳಿಗೆ ₹ 40 ಸಾವಿರ ಮೌಲ್ಯದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಚೇರಂಬಾಣೆಯ ಎಂ.ಟೆಕ್ ಚಿನ್ನದ ಪದಕ ವಿಜೇತೆ ಬಿ.ಬಿ.ಸೋನಾ, ಎಂ.ಫಾರ್ಮದ ಚಿನ್ನದ ಪದಕ ವಿಜೇತೆ ಬಿ.ವಿ.ಮಂಜುಶ್ರೀ, ಸಂಗೀತ ಪ್ರಶಸ್ತಿ ವಿಜೇತೆ ಚಿತ್ರಾ ಆರ್ಯನ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಬಳಿಕ, ಭರತನಾಟ್ಯ, ಗಾಯನ, ಸಮೂಹ ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮೆಸ್ಕಾಂ ಅಧ್ಯಕ್ಷ ಹರೀಶಕುಮಾರ್, ಮುಖಂಡರಾದ ರಮಾನಾಥ ಬೇಕಲ್, ಕೊಡಗು ಜಿಲ್ಲಾ ಬಿಲ್ಲವ ಸಮಾಜಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಿ.ಆರ್.ಲಿಂಗಪ್ಪ ಪೂಜಾರಿ, ಮಂಗಳೂರಿನ ಕಂಕನಾಡಿ ಗರಡಿಯ ಅಧ್ಯಕ್ಷ ಚಿತ್ತರಂಜನ್, ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ್ ಸುವರ್ಣ ಭಾಗವಹಿಸಿದ್ದರು.

ಸರ್ಕಾರದಿಂದ ನಮಗೆ ಜಾಗ ಸಿಕ್ಕಿದೆ. ಈ ಜಾಗದಲ್ಲಿ ಎರಡು ವರ್ಷದ ಒಳಗೆ ಕಟ್ಟಡ ಕಟ್ಟುವುದಕ್ಕೆ ಎಲ್ಲರೂ ಒಂದಾಗೋಣ’
ಬಿ.ಎಸ್.ಲೀಲಾವತಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷೆ.

‘ಸಮಾಜದ ಅಭಿವೃದ್ಧಿಗಾಗಿ ಅರ್ಪಣಾ ಮನೋಭಾವ ಇರಲಿ’

ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನ ಮಠದ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ ‘ಎಲ್ಲರೂ ತಮಗೆ ಸಿಗುವ ಸಮಯ ಮತ್ತು ಸಂಪಾದನೆಯಲ್ಲಿ ಸ್ವಲ್ಪಭಾಗವನ್ನು ಸಮಾಜದ ಅಭಿವೃದ್ಧಿಗಾಗಿ ಅರ್ಪಣೆ ಮಾಡಬೇಕು’ ಎಂದು ಹೇಳಿದರು. ‘ನಮ್ಮಿಂದ ಸಮಾಜಕ್ಕೆ ಏನಾದರೂ ಒಳಿತಾಗಬೇಕು ಎಂಬ ಮನೋಭಾವ ಇರಬೇಕು. ಎಲ್ಲರೂ ತಿಂಗಳ ಸಂಪಾದನೆಯಲ್ಲಿ ಒಂದಿಷ್ಟು ಹಣವನ್ನು ಸಂಘದ ಖಾತೆಗೆ ಹಾಕಬೇಕು. ಈ ಬಗೆಯ ಅರ್ಪಣಾ ಮನೋಭಾವದಿಂದ ಕಟ್ಟಡ ಕಟ್ಟುವ ಕಾರ್ಯ ಆರಂಭವಾಗಲಿ’ ಎಂದು ಹೇಳಿದರು. ‘ಎ.ಎಸ್.ಪೊನ್ನಣ್ಣ ಅವರು ಸಮಾಜಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅವರ ಕೊಡುಗೆಯನ್ನು ನಾವೆಂದೂ ಮರೆಯಬಾರದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.