ಮಡಿಕೇರಿ: ತಾಲ್ಲೂಕಿನ ನಾಪೋಕ್ಲು ಸಮೀಪದ ಕಡಿಯತ್ತೂರು–ಕೂರುಳಿ ಬಳಿಯ ಕಾವೇರಿ ನದಿಯಲ್ಲಿ ದೋಣಿ ಮುಳುಗಿ ನಾಪತ್ತೆಯಾಗಿದ್ದ ಅಯ್ಯಪ್ಪ (18) ಅವರ ಮೃತದೇಹ ಮಂಗಳವಾರ ಪತ್ತೆಯಾಗಿದ್ದು, ಮೃತರ ಸಂಖ್ಯೆ 2ಕ್ಕೆ ಏರಿದೆ.
ಸಮೀಪದ ಚೇರಂಬಾಣೆ ಗ್ರಾಮದ ಗಿರೀಶ್ (16) ಹಾಗೂ ಅಯ್ಯಪ್ಪ (18) ಅವರು ದೋಣಿಯಲ್ಲಿ ಸಾಗುವಾಗ ದೋಣಿ ಮುಳುಗಿತ್ತು. ಅದರಲ್ಲಿ ಗಿರೀಶ್ ಮೃತದೇಹ ಸೋಮವಾರವೇ ಪತ್ತೆಯಾಗಿತ್ತು. ಅಯ್ಯಪ್ಪ ಅವರಿಗಾಗಿ ಹುಡುಕಾಟ ನಡೆದಿತ್ತು.
ನಾಪೋಕ್ಲು ಸಬ್‌ಇನ್‌ಸ್ಪೆಕ್ಟರ್ ಮಂಜುನಾಥ್ ಅವರು ‘ಲೈಫ್ ಜಾಕೆಟ್’ ಧರಿಸಿ ಸ್ವತಃ ಕಾರ್ಯಾಚರಣೆಯಲ್ಲಿ ಭಾಗಿಯಾದರು. ಅಗ್ನಿಶಾಮಕ ಪಡೆಯ ಸಿಬ್ಬಂದಿಯೊಂದಿಗೆ ಮಂಗಳವಾರ ಸಮೀಪದ ಎಮ್ಮೆಮಾಡಿನಿಂದ 6 ಮಂದಿ ಸ್ವಯಂಸೇವಕರು ಹಾಗೂ ಮುಳುಗು ತಜ್ಞ ಮುತ್ತಪ್ಪ ಅವರನ್ನೂ ಕರೆಸಲಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಮೃತದೇಹ ಸುಮಾರು 15ಕ್ಕೂ ಹೆಚ್ಚು ಆಳದಲ್ಲಿ ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
‘ಮಳೆಗಾಲದಲ್ಲಿ ಕಾವೇರಿ ನದಿ ಹೆಚ್ಚು ರಭಸವಾಗಿ ಹರಿಯುವುದರಿಂದ, ಸಮೀಪದ ದೋಣಿಕಾಡು ಗ್ರಾಮಕ್ಕೆ ತೆರಳಲು ಜನ ದೋಣಿಯನ್ನೇ ಅವಲಂಬಿಸಿದ್ದಾರೆ. ಒಟ್ಟು 8 ಸ್ನೇಹಿತರು ಸ್ನಾನಕ್ಕೆಂದು ಬಂದ ವೇಳೆ ದುರ್ಘಟನೆ ನಡೆದಿದೆ. ಗಿರೀಶ್ ಮತ್ತು ಅಯ್ಯಪ್ಪ ನದಿಯ ಮಧ್ಯಭಾಗಕ್ಕೆ ತೆರಳಿದ ವೇಳೆ, ನೀರಿನ ಸೆಳೆತ ಇದ್ದುದ್ದರಿಂದ ದೋಣಿ ಮುಳುಗಿದೆ. ಈಜು ಬಾರದ ಅವರನ್ನು ರಕ್ಷಿಸಲು ದೇವಿಪ್ರಸಾದ್ ಎಂಬುವವರು ಪ್ರಯತ್ನಪಟ್ಟರೂ ಸಫಲವಾಗಲಿಲ್ಲ’ ಎಂದು ಅವರು ಹೇಳಿದ್ದಾರೆ.
ಸೋಮವಾರ ಮಧ್ಯಾಹ್ನ 1 ಗಂಟೆಯಿಂದ ಆರಂಭವಾದ ಹುಡುಕಾಟ ರಾತ್ರಿ 8 ಗಂಟೆಗೆ ನಿಲ್ಲಿಸಲಾಗಿತ್ತು. ಮತ್ತೆ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಆರಂಭವಾದ ಹುಡುಕಾಟ ಮಧ್ಯಾಹ್ನ 12 ಗಂಟೆಗೆ ಮುಗಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.