
ಶನಿವಾರಸಂತೆ: ಶಾಲೆಗಳಲ್ಲಿ ಶೌಚಾಲಯದ ಸಮಸ್ಯೆ, ಶಾಲೆ ಸುತ್ತಮುತ್ತ ಬೆಳೆದಿರುವ ಗಿಡಗಂಟಿಗಳನ್ನು ಕಡಿದು ಸ್ವಚ್ಚಗೊಳಿಸಬೇಕು, ಶಾಲೆಗೆ ಬರಲು ವಾಹನದ ವ್ಯವಸ್ಥೆ ಇಲ್ಲ ಹೀಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯ ಮಕ್ಕಳ ಗ್ರಾಮಸಭೆಯಲ್ಲಿ ಸಾಲು ಸಾಲು ಸಮಸ್ಯೆಗಳು ಮಕ್ಕಳಿಂದ ಪ್ರಸ್ತಾಪವಾದವು.
ಕೊಡ್ಲಿಪೇಟೆ ಮತ್ತು ನಾವು ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ನಡೆಸಲಾದ ಮಕ್ಕಳ ಗ್ರಾಮಸಭೆಯಲ್ಲಿ ಕೊಡ್ಲಿಪೇಟೆ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಶೌಚಾಲಯ ಅವ್ಯವಸ್ಥೆಯಿಂದ ಕೂಡಿದೆ ಮತ್ತು ಶಾಲೆ ಸುತ್ತಮುತ್ತ ಗಿಡಗಂಟಿ ಬೆಳೆದಿದ್ದು ಈ ಸಂಬಂಧ ಗ್ರಾಮ ಪಂಚಾಯತಿಯವರು ಅವುಗಳನ್ನು ಕಡಿದು ಸ್ವಚ್ಛಗೊಳಿಸುವಂತೆ ವಿದ್ಯಾರ್ಥಿನಿ ಪ್ರತೀಕ್ಷಾ ಮನವಿ ಮಾಡಿದರು.
ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು ಇದರಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿ ಜಿನಾಥ್ ಸಭೆಯಲ್ಲಿ ಗಮನ ಸೆಳೆದರು.
ಕೆಳಕೊಡ್ಲಿ ಗ್ರಾಮದಿಂದ ಶಾಲೆಗೆ ಬರಲು ದೂರವಾಗುತ್ತಿದ್ದು, ಈ ನಿಟ್ಟಿನಲ್ಲಿ ನಮಗೆ ಶಾಲೆಗೆ ಬರಲು ವಾಹನದ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ವಿದ್ಯಾರ್ಥಿನಿ ಲಕ್ಷ್ಮಿ ಆಗ್ರಹಿಸಿದರು.
ಶಾಲಾ ಮುಂಭಾಗದಲ್ಲಿ ಸಂತೆ ನಡೆಯುವುದರಿಂದ ತ್ಯಾಜ್ಯಗಳು ಶಾಲಾ ಆವರಣಕ್ಕೆ ಬೀಳುತ್ತದೆ ಇದರಿಂದ ನಮಗೆ ತೊಂದರೆಯಾಗುತ್ತಿದೆ ಮರುದಿನ ತ್ಯಾಜ್ಯವನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿಕೊಂಡು ಸ್ವಚ್ಛಗೊಳಿಸಬೇಕಾಗುತ್ತದೆ ಗ್ರಾಮ ಪಂಚಾಯಿತಿಯವರು ಇದನ್ನು ಗಂಭೀರವಾಗಿ ತೆಗೆದುಕೊಂಡು ಇತ್ತ ಗಮನ ಹರಿಸುವಂತೆ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಮಕ್ಕಳು ಸಭೆಯಲ್ಲಿ ಪ್ರಸ್ತಾಪಿಸಿದರು.
ಸಭೆಗೆ ಸಂಬಂಧಿಸಿದ ಅಧಿಕಾರಿಗಳು ಬಂದಿಲ್ಲ ಎಂದು ಎಸ್‍ಡಿಎಂಸಿ ಅಧ್ಯಕ್ಷ ದಿನೇಶ್ ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ್ ಅವರು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸಭೆಗೆ ಬರುವಂತೆ ಕರೆ ಮಾಡಿದರು ನಂತರ ಸಭೆಗೆ ಹಾಜರಾದ ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಕೆಳಕೊಡ್ಲಿ ಗ್ರಾಮದ ಅಂಗನವಾಡಿ ಕಟ್ಟಡವು ಶಿಥಿಲವಾಗಿದೆ. ಹೊಸದಾಗಿ ಅಂಗನವಾಡಿ ಕಟ್ಟಡವನ್ನು ನಿರ್ಮಿಸಿಕೊಡುವಂತೆ ಶಿಕ್ಷಕಿಯೊಬ್ಬರು ಮನವಿ ಮಾಡಿದರು.
ಸಭೆಯಲ್ಲಿ ನಾವು ಪ್ರತಿಷ್ಠಾನ ಟ್ರಸ್ಟ್‌ನ ಗೌತಮ್ ಕಿರಗಂದೂರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.