
ಮಡಿಕೇರಿ: ಕಾಫಿ ಬೆಳೆಗೆ ಸಂಬಂಧಿಸಿದಂತೆ ಈ ವರ್ಷ 2026ರಲ್ಲಿ 2 ಮಹತ್ವದ ವಿದ್ಯಮಾನಗಳು ಘಟಿಸುವ ಸಂಭವ ಇದೆ.
ಇಲ್ಲಿನ ಚೆಟ್ಟಳ್ಳಿಯಲ್ಲಿರುವ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ‘ಸೆಂಟ್ರರ್ ಫಾರ್ ಎಕ್ಸಲೆನ್ಸಿ’ ಕಾರ್ಯಕ್ರಮ ಹಾಗೂ ಕಾಫಿ ಮಂಡಳಿ ವತಿಯಿಂದ ‘ಕಾಫಿ ಕನೆಕ್ಟ್’ ಎಂಬ ವಿನೂತನ ಕಾರ್ಯಕ್ರಮಗಳನ್ನು ನಡೆಸಲು ಚಿಂತನೆ ನಡೆಸಲಾಗಿದೆ.
ಈಗಾಗಲೇ ಚೆಟ್ಟಳ್ಳಿಯಲ್ಲಿರುವ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ‘ಸೆಂಟ್ರರ್ ಫಾರ್ ಎಕ್ಸಲೆನ್ಸಿ’ ಕಾರ್ಯಕ್ರಮಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ಇಲ್ಲಿ ಸುಮಾರು 17.5 ಎಕರೆ ಪ್ರದೇಶದಲ್ಲಿ ಕಾಫಿ ಬೆಳೆಯುವ ವೈಜ್ಞಾನಿಕ ವಿಧಾನಗಳನ್ನು ಪರಿಚಯಿಸಲು ನಿರ್ಧರಿಸಲಾಗಿದೆ.
ಇಲ್ಲಿ ವೈಜ್ಞಾನಿಕವಾದ ನೀರಾವರಿ ವಿಧಾನಗಳು, ಕಾಫಿ ಬೆಳೆಯಲ್ಲಿ ಅತ್ಯಾಧುನಿಕ ಯಂತ್ರಗಳ ಬಳಕೆ, ವೈವಿಧ್ಯಮಯವಾದ ಕಾಫಿ ತಳಿಗಳು, ಅದಕ್ಕೆ ಪೂರಕವಾದ ಇತರ ತೋಟಗಾರಿಕಾ ಬೆಳೆಗಳು, ಅರಣ್ಯ ಕೃಷಿ, ಅಂಗಾಂಶ ತಂತ್ರಜ್ಞಾನ ಸೇರಿದಂತೆ ಇನ್ನೂ ಅನೇಕ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಈ ವರ್ಷ ಭರದ ಸಿದ್ಧತೆಗಳು ನಡೆದಿದ್ದು, ವರ್ಷಾಂತ್ಯ ಅಥವಾ ಅದಕ್ಕೂ ಮುನ್ನವೇ ಈ ಕಾರ್ಯಕ್ರಮ ನಡೆಯುವ ಅಂದಾಜು ಇದೆ ಎಂದು ಮೂಲಗಳು ತಿಳಿಸಿವೆ.
‘ಕಾಫಿ ಕನೆಕ್ಟ್’
ಭಾರತೀಯ ಕಾಫಿ ಮಂಡಳಿ ವತಿಯಿಂದ ‘ಕಾಫಿ ಕನೆಕ್ಟ್’ ಎಂಬ ವಿನೂತನ ಕಾರ್ಯಕ್ರಮವೂ ಈ ವರ್ಷದಲ್ಲಿ ನಡೆಯುವ ಸಾಧ್ಯತೆ ಇದೆ.
ಕಳೆದ ವರ್ಷ ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭದಲ್ಲಿ ಅನೇಕ ತಜ್ಞರು ವಿಶೇಷ ಉಪನ್ಯಾಸಗಳನ್ನು ನೀಡಿದರು. ಅನೇಕ ವಿಚಾರ ಮಂಥನಗಳು ನಡೆದವು. ಅದರ ಮುಂದುವರಿದ ಭಾಗವೇ ‘ಕಾಫಿ ಕನೆಕ್ಟ್’
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ‘ಕಾಫಿ ಮಂಡಳಿ ವತಿಯಿಂದ ಈಚೆಗೆ ಬಾಳೆಹೊನ್ನೂರಿನಲ್ಲಿ ನಡೆದ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆ(ಸಿಸಿಆರ್‌ಐ)ಯ ಶತಮಾನೋತ್ಸವ ಸಮಾರಂಭದಲ್ಲಿ 3 ದಿನಗಳ ಕಾಲ ನಡೆದ ಚಿಂತನ–ಮಂಥನದ ಫಲಶೃತಿ ಕಾಫಿ ಬೆಳೆಗಾರರಿಗೆ ದಕ್ಕಬೇಕು. ಈ ನಿಟ್ಟಿನಲ್ಲಿ ಈ ವರ್ಷ ‘ಕಾಫಿ ಕನೆಕ್ಟ್’ ಎಂಬ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗುತ್ತಿದೆ’ ಎಂದರು.
ಕಾಫಿಯ ಬಳಕೆದಾರರು, ವಿಜ್ಞಾನಿಗಳು, ತಂತ್ರಜ್ಞಾನ, ಕಾಫಿಯ ರಫ್ತುದಾರರು ಹಾಗೂ ಬೆಳೆಗಾರರನ್ನು ‘ಕನೆಕ್ಟ್’ ಮಾಡುವ ಚಿಂತನೆ ಇದೆ. ಇದರಿಂದ ಕಾಫಿ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು.
ಇನ್ನು ಮುಂಬರುವ 5 ವರ್ಷಕ್ಕೆ ಕಾಫಿ ಬೆಳೆ ಕುರಿತು ಮಾರ್ಗಸೂಚಿಗಳ ಕುರಿತ ಯೋಜನಾ ವರದಿ ಸಿದ್ಧಗೊಳ್ಳುತ್ತಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. 7 ಬೀಜಗಳಿಂದ ಆರಂಭವಾದ ಕಾಫಿ ಕೃಷಿಯನ್ನು 2047 ಕ್ಕೆ 7 ಲಕ್ಷ ಟನ್ ಕಾಫಿ ಉತ್ಪಾದಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಪ್ರಯತ್ನಗಳನ್ನು ನಡೆಸಲಾಗುವುದು ಎಂದರು.
ಕಾಫಿ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ‘ಕಾಫಿ ಕನೆಕ್ಟ್’ ಎಂಬ ಕಾರ್ಯಕ್ರಮವನ್ನು 2026ರಲ್ಲಿ ರೂಪಿಸುವ ಚಿಂತನೆ ನಡೆಸಲಾಗಿದೆ.ದಿನೇಶ್ ದೇವವೃಂದ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ.
ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ಕಾಫಿ ಸಂಶೋಧನಾ ಉಪ ಕೇಂದ್ರದಲ್ಲಿ ‘ಸೆಂಟರ್ ಫಾರ್ ಎಕ್ಸಲೆನ್ಸಿ’ ಎಂಬ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆಗಳು ನಡೆದಿವೆ .ಚಂದ್ರಶೇಖರ್ ಕಾಫಿ ಮಂಡಳಿ ಉಪನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.