ADVERTISEMENT

ಕೊಡಗು ಜಿಲ್ಲೆಯಲ್ಲಿ ಹೆಚ್ಚಿದ ವರ್ಷಧಾರೆ: ಕಾಫಿಗೆ ಕುತ್ತು

ಕೆ.ಎಸ್.ಗಿರೀಶ್
Published 7 ಜುಲೈ 2025, 3:15 IST
Last Updated 7 ಜುಲೈ 2025, 3:15 IST
ಅಧಿಕ ಮಳೆಯಿಂದ ಮಡಿಕೇರಿ ತಾಲ್ಲೂಕಿನ ಹಲವೆಡೆ ಕಾಫಿ ಗಿಡದಿಂದ ಉದುರಿರುವುದು
ಅಧಿಕ ಮಳೆಯಿಂದ ಮಡಿಕೇರಿ ತಾಲ್ಲೂಕಿನ ಹಲವೆಡೆ ಕಾಫಿ ಗಿಡದಿಂದ ಉದುರಿರುವುದು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಈಗಾಗಲೇ ಅಲ್ಲಲ್ಲಿ ಗಿಡಗಳಿಂದ ಕಾಫಿ ಉದುರಲಾರಂಭಿಸಿದೆ. ಕೆಲವೆಡೆ ಕೊಳೆರೋಗ ಕಾಣಿಸಿಕೊಂಡಿದೆ. ಒಂದು ವೇಳೆ ಮಳೆ ಬಿಡುವು ನೀಡದೇ ಹೀಗೆಯೇ ಮುಂದುವರಿದರೆ ಕಾಫಿ ಇಳುವರಿ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುವ ಆತಂಕ ಎದುರಾಗಿದೆ.

ಕೊಡಗಿನಲ್ಲಿ ಜೂನ್ ತಿಂಗಳಿನಲ್ಲಿ ಶೇ 25ರಷ್ಟು ಹೆಚ್ಚು ಮಳೆಯಾಗಿದೆ. ಮುಂಗಾರು ಆರಂಭವಾದ ನಂತರ ಶೇ 16ರಷ್ಟು ಹೆಚ್ಚು ವರ್ಷಧಾರೆಯಾಗಿದೆ. ಮೇನಲ್ಲಿ ಶೇ 340ಕ್ಕೂ ಅಧಿಕ ಮಳೆಯಾಗಿದೆ. ಹೀಗಾಗಿ, ಇಡೀ ಜಿಲ್ಲೆಯ ವಾತಾವರಣ ಶೀತಮಯವಾಗಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕಾಫಿಗೆ ರೋಗ ಕಾಡುವ ಭೀತಿ ಎದುರಾಗಿದೆ.

ಮಡಿಕೇರಿ, ಶನಿವಾರಸಂತೆ, ಸೋಮವಾರಪೇಟೆಯ ಕೆಲವು ಭಾಗ, ದಕ್ಷಿಣ ಕೊಡಗಿನ ಬಿರುನಾಣಿ, ಟಿ.ಶೆಟ್ಟಿಗೇರಿ, ಹುದಿಕೇರಿ, ಶ್ರೀಮಂಗಲ, ಬಿ.ಶೆಟ್ಟಿಗೇರಿ ಸೇರಿದಂತೆ ಹಲವೆಡೆ ಕಾಫಿ ಉದುರುತ್ತಿದೆ. 

ADVERTISEMENT

ಈ ಕುರಿತು ‘ಪ್ರಜಾವಾಣಿ’ ಕಾಫಿ ಮಂಡಳಿ ಉಪನಿರ್ದೇಶಕ ಚಂದ್ರಶೇಖರ್ ಅವರನ್ನು ಸಂಪರ್ಕಿಸಿದಾಗ ಅವರು, ‘ಮಡಿಕೇರಿ ತಾಲ್ಲೂಕಿನ ಕಾಲೂರು ಹಾಗೂ ಹಟ್ಟಿಹೊಳೆ ಭಾಗದ ಕೆಲವು ಕಡೆ ಕಾಫಿ ಉದುರುತ್ತಿರುವುದು ಕಂಡುಬಂದಿದೆ. ಕಾಫಿ ಮಂಡಳಿಯ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ, ಹೆಚ್ಚಾಗಿ ಉದುರುತ್ತಿಲ್ಲ. ಆದರೆ, ಮಳೆ ಕಡಿಮೆಯಾಗದೇ ಹೋದರೆ ಉದುರುವಿಕೆ ಹೆಚ್ಚಾಗಬಹುದು’ ಎಂದು ತಿಳಿಸಿದರು.

ಮುಂಚಿತವಾಗಿ ಮುಂಗಾರು ಆರಂಭವಾಗಿ ಮೇನಿಂದಲೇ ನಿರಂತರವಾಗಿ ಮಳೆಯಾಗಿದ್ದರಿಂದ ಕೆಲವು ಕಡೆ ಕಾಫಿ ಗಿಡಕ್ಕೆ ಮೊದಲ ಸುತ್ತಿನ ಗೊಬ್ಬರವನ್ನೇ ಕೊಡಲಾಗಿಲ್ಲ. ಜೂನ್‌ನಲ್ಲೂ ವರುಣನ ಆರ್ಭಟ ಇದ್ದುದರಿಂದ 2ನೇ ಸುತ್ತಿನ ಗೊಬ್ಬರವನ್ನು ಬಹಳಷ್ಟು ಕಡೆ ಹಾಕಿಲ್ಲ. ಇದೂ ರೈತರ ಚಿಂತೆಗೆ ಕಾರಣವಾಗಿದೆ.

ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಬೇತು ಗ್ರಾಮದ ತೋಟವೊಂದರಲ್ಲಿ ಹೆಚ್ಚಿನ ಮಳೆಯಿಂದ ಕಾಫಿ ಕಪ್ಪಾಗಿರುವುದು

ಪ್ರತಿ ನಿತ್ಯವೂ ಸಾಧಾರಣ ಇಲ್ಲವೇ ಭಾರಿ ಮಳೆಯಾಗುತ್ತಲೇ ಇದೆ. ಮಳೆ ನಿಂತು ಬಿಸಿಲು ಬಂದರೆ ಪರಿಸ್ಥಿತಿ ಸುಧಾರಿಸಲಿದೆ. ಜುಲೈ ಮತ್ತು ಆಗಸ್ಟ್‌ನಲ್ಲೂ ವರ್ಷಧಾರೆ ಮುಂದುವರಿದರೆ ನಷ್ಟ ಉಂಟಾಗುವ ಸಾಧ್ಯತೆಗಳೇ ಅಧಿಕ ಎಂದು ತಜ್ಞರು ಹೇಳುತ್ತಾರೆ.

‘ಬೇಸಿಗೆಯಲ್ಲೇ ಮುಂಗಾರು ಆರಂಭವಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ರೋಗ ತಡೆಯುವುದಕ್ಕೆ ಔಷಧ ಸಿಂಪಡಿಸಲು ಅವಕಾಶ ಸಿಗಲಿಲ್ಲ. ಈಗಲೂ ಮಳೆ ಬಿಡುವು ನೀಡದೇ ಇರುವುದರಿಂದ ಕಾಫಿ ಉದುರುತ್ತಿದೆ. ಹಲವೆಡೆ ಕೊಳೆರೋಗ ಕಾಣಿಸಿಕೊಂಡಿದೆ. ಏನು ಮಾಡಬೇಕು ಎಂದು ತೋಚುತ್ತಿಲ್ಲ’ ಎಂದು ಕೊಡಗು ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಹರೀಶ್ ಮಾದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮದಲ್ಲಿ ಮಳೆ ಹೆಚ್ಚಳದಿಂದಾಗಿ ಅರೇಬಿಕಾ ಕಾಫಿಗೆ ಕೊಳೆರೋಗ ಕಾಣಿಸಿಕೊಂಡು ಫಸಲು ಉದುರಿರುವುದನ್ನು ಬೆಳೆಗಾರರು ತೋರಿಸುತ್ತಿರುವುದು
ದಕ್ಷಿಣ ಕೊಡಗಿನಲ್ಲಿ ಮಳೆ ಹೆಚ್ಚಾಗಿ ಕಾಫಿ ಮಾತ್ರವಲ್ಲ ಅಡಿಕೆ ಕಾಳುಮೆಣಸುಗಳಿಗೆ ಹಲವೆಡೆ ಕೊಳೆ ರೋಗ ಕಾಣಿಸಿಕೊಂಡಿದೆ. ಏನು ಮಾಡಬೇಕೇಂದು ತೋಚುತ್ತಿಲ್ಲ. ಬೆಳೆಗಾರರು ಆತಂಕಗೊಂಡಿದ್ದಾರೆ
ಹರೀಶ್ ಮಾದಪ್ಪ ಕೊಡಗು ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ
ಈಗಾಗಲೇ ಕಾಳು ಮೆಣಸಿನ ಫಸಲಿನ ದಾರ ಬಂದಿದ್ದು ಸಾಕಷ್ಟು ನೆಲಕಚ್ಚಿವೆ. ಮುಂದಿನ ದಿನಗಳಲ್ಲಿ ಶೀತ ಹೆಚ್ಚಾದಲ್ಲಿ ಕಾಳು ಮೆಣಸಿನ ಹೊಸ ದಾರ ಬರುವುದಿಲ್ಲ. ಇರುವ ದಾರವೂ ಫಸಲು ಕಚ್ಚುವುದಿಲ್ಲ
ಮೋಹನ್ ಬೋಪಣ್ಣ ಬಿಳಿಗೇರಿ ಬೆಳೆಗಾರ
ಈ ವರ್ಷ ನಮ್ಮ ಭಾಗದಲ್ಲಿ ಒಳ್ಳೆಯ ಕಾಫಿ ನಿರೀಕ್ಷೆ ಮಾಡಿದ್ದೆವು. ಆದರೆ ಬಿಡುವಿಲ್ಲದೆ ಮಳೆ ಸುರಿಯುತಿರುವುದರಿಂದ ಗಿಡಗಳಲ್ಲಿ ಕೊಳೆರೋಗ ಬಂದಿದ್ದು ಶೀತ ಹೆಚ್ಚಾಗಿ ಕಾಫಿ ಉದುರುತ್ತಿದೆ
ಗೀಜಿಗಂಡ ಲೋಕೇಶ್ ಗರ್ವಾಲೆ ಗ್ರಾಮ
ನಿರಂತರವಾಗಿ ಮಳೆಯಿಂದ ಅತಿಯಾದ ತೇವಾಂಶ ಇರುವ ತಗ್ಗುಪ್ರದೇಶದ ಕೆಲವೆಡೆ ಕಾಫಿ ಉದುರುವಿಕೆ ಕಂಡು ಬಂದಿದೆ. ಕಾಫಿ ಮಂಡಳಿ ವತಿಯಿಂದ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ
ಚಂದ್ರಶೇಖರ್ ಕಾಫಿ ಮಂಡಳಿ ಉಪನಿರ್ದೇಶಕ

ಅರೇಬಿಕಾ ಕಾಫಿಯಲ್ಲಿ ಕೊಳೆರೋಗ

ಡಿ.ಪಿ ಲೋಕೇಶ್‌

ಸೋಮವಾರಪೇಟೆ: ತಾಲ್ಲೂಕಿನಾದ್ಯಂತ ಹೆಚ್ಚಿನ ಮಳೆ ನಿರಂತರವಾಗಿ ಸುರಿದಿರುವುದರಿಂದ ಗರ್ವಾಲೆ ಗ್ರಾಮ ಪಂಚಾಯಿತಿ ಸೇರಿದಂತೆ ತಾಲ್ಲೂಕಿನ ಹಲವೆಡೆ ಅರೇಬಿಕಾ ಕಾಫಿಗೆ ಕೊಳೆರೋಗ ಕಾಣಿಸಿಕೊಂಡಿದೆ. ಕೊಡಗು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅರೇಬಿಕಾ ಕಾಫಿ ತಾಲ್ಲೂಕಿನಲ್ಲಿ ಬೆಳೆಯಲಾಗುತ್ತದೆ. ಬಹುತೇಕ ಬೆಳೆಗಾರರು ಮಳೆಯನ್ನೇ ನಂಬಿದ್ದಾರೆ. ನಾಲ್ಕೈದು ವರ್ಷಗಳಿಂದ ಅಕಾಲಿಕ ಮಳೆಯಿಂದ ಕಾಫಿ ಫಸಲು ಬೆಳೆಗಾರರ ಕೈ ಹಿಡಿಯಲಿಲ್ಲ.  ಅದರಲ್ಲೂ ಇತ್ತೀಚೆಗೆ ಜಿಲ್ಲೆಯಲ್ಲಿ ಮಳೆ ಬೀಳುವ ಪ್ರಮಾಣದಲ್ಲಿ ಆಗಿರುವ ಬದಲಾವಣೆಗಳಿಂದ ಹಲವು ಕಾಫಿ ತೋಟಗಳು ರೋಗಪೀಡಿತವಾಗಿವೆ.

ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ 405 ಸೆಂ.ಮೀ. ಮಳೆ ದಾಖಲಾಗಿದೆ. ಕಳೆದ ವರ್ಷ ಕೇವಲ 125ರಿಂದ 130 ಸೆಂ.ಮೀ. ಮಳೆಯಾಗಿತ್ತು. ಮೇನಿಂದಲೇ ಮಳೆ ಪ್ರಾರಂಭವಾಗಿದ್ದರಿಂದ ಶೀತ ಹೆಚ್ಚಾಗಿದ್ದು ಕಾಫಿ ತೋಟಗಳಲ್ಲಿ ಸರಿಯಾಗಿ ಕಾಲ ಕಾಲಕ್ಕೆ ಕೃಷಿ ಚಟುವಟಿಕೆ ಸಾಧ್ಯವಾಗಿಲ್ಲ. ಇಷ್ಟೊತ್ತಿಗೆ ಒಮ್ಮೆ ರಾಸಾಯನಿಕ ಗೊಬ್ಬರ ಹಾಕಿ ಒಂದೆರಡು ಸ್ಪ್ರೆ ಮಾಡಬೇಕಿತ್ತು. ಆದರೆ ನಿರಂತರ ಮಳೆಯಿಂದ ಅದು ಸಾಧ್ಯವಾಗಿಲ್ಲ. ಹಲವು ತೋಟಗಳಲ್ಲಿ ಇಂದಿಗೂ ನೆರಳನ್ನು ತೆರವುಗೊಳಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಹೆಚ್ಚಿನ ಕೆಲಸ ಬೇಡುವ ಅರೇಬಿಕಾ ಕೃಷಿಗೆ ಹೆಚ್ಚಿನ ಸಂಕಷ್ಟ ಉಂಟಾಗಿದೆ.

ಕೊಳೆರೋಗಕ್ಕೆ ಈಡಾಗಿರುವ ಗಿಡಗಳಲ್ಲಿ ಎಲೆ ಮತ್ತು ಫಸಲು ಉದುರಿದೆ. ಕಳೆದ ಎರಡು ತಿಂಗಳಿನಿಂದ ಪೂರ್ತಿ ಒಂದು ವಾರ ಬಿಸಿಲು ಕಾಣಲು ಸಾಧ್ಯವಾಗಿಲ್ಲ. ಭೂಮಿಯಲ್ಲಿನ ಶೀತದ ಪ್ರಮಾಣ ಹೆಚ್ಚಾಗಿದೆ. ಇದು ಕಾಯಿಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂಬುದು ಬೆಳೆಗಾರರ ಅನಿಸಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.