ಮಡಿಕೇರಿ: ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ‘ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ’ ಸಭೆಯಲ್ಲಿ ಸಮಿತಿಯ ಎಲ್ಲ ಸದಸ್ಯರೂ ಹಾಗೂ ಸಂಸದರು ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಾತ್ರವಲ್ಲ, ಹಲವು ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಗೈರಿಗೆ ಅತೃಪ್ತಿ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಜಲಜೀವನ್ ಮಿಷನ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜೂನ್ ಅಂತ್ಯಕ್ಕೆ ಬಹುತೇಕ ಎಲ್ಲ ಕಾಮಗಾರಿಗಳನ್ನು ಮುಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಭಾಸ್ಕರ್ ಅವರು ಒಟ್ಟು 457 ಕಾಮಗಾರಿಗಳ ಪೈಕಿ 348 ಪೂರ್ಣಗೊಂಡಿದ್ದು, 107 ಪ್ರಗತಿಯಲ್ಲಿವೆ ಎಂದು ನೀಡಿದ ವಿವರಣೆಗೆ ತೃಪ್ತರಾಗದ ಅವರು, ‘ನೀರಿನ ಸಂಪರ್ಕ ಎಲ್ಲೂ ಕೊಟ್ಟಿಲ್ಲ, ಗುಣಮಟ್ಟದ ಕೆಲಸ ಆಗುತ್ತಿಲ್ಲ ಎಂಬ ಆರೋಪಗಳಿವೆ. ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲೇಬೇಕು. ಗ್ರಾಮ ಪಂಚಾಯಿತಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದರು.
ಇದಕ್ಕೂ ಮುನ್ನ ಈ ಯೋಜನೆ ವಿರುದ್ಧ ಸಮಿತಿ ಸದಸ್ಯರೆಲ್ಲರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಾಗೇಶ್ ಕುಂದಲ್ಪಾಡಿ ಅವರಂತೂ ‘ಈ ಯೋಜನೆಗೆ ವ್ಯಯಿಸಿರುವ ಹಣದಲ್ಲಿ ಮನೆಗೊಂದು ಬಾವಿಯನ್ನೇ ಕೊಡಬಹುದಿತ್ತು. ಬಡವರು ನೆಮ್ಮದಿಯಾಗಿ ನೀರು ಕುಡಿದಿದ್ದರೆ ಈ ಯೋಜನೆ ಸಾರ್ಥಕವಾಗುತ್ತಿತ್ತು’ ಎಂದು ಹರಿಹಾಯ್ದರು.
ಜಿಲ್ಲೆಯಲ್ಲಿರುವ ಬಿಎನ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಕುರಿತು ಸಮಿತಿ ಸದಸ್ಯ ರಾಕೇಶ್ ಸೇರಿದಂತೆ ಹಲವು ಸದಸ್ಯರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಪ್ರಸ್ತಾಪಿಸಿದರು. ಸರಿಪಡಿಸುವಂತೆ ಯದುವೀರ್ ಸೂಚಿಸಿದರು.
ಆದಿವಾಸಿಗಳಿಗೆ ಹಕ್ಕುಪತ್ರ ಇಲ್ಲ; ಆರ್.ಕೆ.ಚಂದ್ರ ಆಕ್ಷೇಪ
ಸಮಿತಿ ಸದಸ್ಯ ಆರ್.ಕೆ.ಚಂದ್ರು ಮಾತನಾಡಿ, ಆದಿವಾಸಿ ಕುಟುಂಬಗಳಿಗೆ ಅರಣ್ಯ ಹಕ್ಕುಪತ್ರ ವಿತರಿಸಲಾಗಿದೆ. ಹಕ್ಕು ಪತ್ರ ವಿತರಿಸಿರುವವರಿಗೆ ಆರ್‌ಟಿಸಿ ವಿತರಿಸಬೇಕು, ಜೊತೆಗೆ ಹಕ್ಕುಪತ್ರ ವಿತರಿಸಲು ಇನ್ನೂ ಸಾಕಷ್ಟು ಕುಟುಂಬಗಳಿಗೆ ಬಾಕಿ ಇದೆ’ ಎಂದು ಗಮನ ಸೆಳೆದರು.
ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ‘ಅರಣ್ಯ ಹಕ್ಕು ಕಾಯ್ದೆಯಡಿ ಅರ್ಹರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಹಕ್ಕುಪತ್ರ ಪಡೆದಿರುವವರು ಕೃಷಿ ಚಟುವಟಿಕೆ ಮಾಡಬಹುದು’ ಎಂದು ಹೇಳಿದರು.
ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ ಪ‍್ರತಿಕ್ರಿಯಿಸಿ, ‘ಜಿಲ್ಲೆಯಲ್ಲಿ ಇದುವರೆಗೆ 2,400ಕ್ಕೂ ಹೆಚ್ಚು ಅರಣ್ಯ ಹಕ್ಕುಪತ್ರ ವಿತರಿಸಲಾಗಿದೆ’ ಎಂದು ತಿಳಿಸಿದರು.
ಸಭೆಗೂ ಮುನ್ನ ‘ಆಪರೇಷನ್ ಸಿಂಧೂರ’ ಕುರಿತು ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಲಾಯಿತು.
ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಭೂಮಿಪೂಜೆ!
ಮಡಿಕೇರಿಯ ಸ್ಟೋನ್ ಹಿಲ್‌ನಲ್ಲಿರುವ ಪಾರಂಪರಿಕ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಭೂಮಿಪೂಜೆ ನೆರವೇರಿಸಿರುವ ಸಂಗತಿ ಸಭೆಯಲ್ಲಿ ಪ್ರಸ್ತಾಪವಾಯಿತು.
ಕಸ ತೆಗೆಯಲು ಟೆಂಡರ್ ಪಡೆದವರಿಗೆ ಅರಣ್ಯ ಇಲಾಖೆ ಇನ್ನೂ ಅನುಮತಿ ನೀಡಿಲ್ಲ ಎಂದು ನಗರಸಭೆ ಪೌರಾಯುಕ್ತ ರಮೇಶ್ ಹೇಳುತ್ತಿದ್ದಂತೆ ಸಮಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ ಅವರು ಅರಣ್ಯ ಹಾಗೂ ಪರಿಸರ ಇಲಾಖೆಯಿಂದ ಅನುಮತಿ ಪಡೆಯದೆ, ಕಾಮಗಾರಿಗೆ ಚಾಲನೆ ನೀಡಿದ್ದಾದರೂ ಏಕೆ ಎಂದು ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ಮತ್ತೊಬ್ಬ ಸದಸ್ಯ ಡಾ.ನವೀನ್ ಕುಮಾರ್ ಅವರು ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಸಲಹೆ ನೀಡಿದರು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನೀಡುವುದಕ್ಕೆ ಯಾವುದೇ ಕಾಲಮಿತಿಯನ್ನು ಹೇಳಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.