ADVERTISEMENT

ಕೊಡಗು ಜಿಲ್ಲೆ ಕೋವಿಡ್ 19: ಗುಣಮುಖ ವ್ಯಕ್ತಿ ಮತ್ತೆ ಆಸ್ಪತ್ರೆಗೆ ದಾಖಲು

ದುಬೈನಿಂದ ಕೊಡಗಿಗೆ ಬಂದಿದ್ದ ವ್ಯಕ್ತಿ: ವಾರದ ಬಳಿಕ ಕಾಣಿಸಿಕೊಂಡ ಜ್ವರ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 12:02 IST
Last Updated 15 ಏಪ್ರಿಲ್ 2020, 12:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಡಿಕೇರಿ: ಕೋವಿಡ್‌ 19 ದೃಢಪಟ್ಟು ಗುಣಮುಖನಾಗಿ ಜಿಲ್ಲಾ ಆಸ್ಪತ್ರೆಯಿಂದ ಮನೆಗೆ ತೆರಳಿದ್ದ ಕೊಡಗಿನ ವ್ಯಕ್ತಿಗೆ ಮತ್ತೆ ಜ್ವರ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಬುಧವಾರ ಮಧ್ಯಾಹ್ನ ಮನೆಯಿಂದ ಸ್ವಪ್ರೇರಣೆಯಿಂದ ಆಸ್ಪತ್ರೆಗೆ ಬಂದಿರುವ ಶಂಕಿತ ವ್ಯಕ್ತಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಇಟ್ಟು ನಿಗಾ ವಹಿಸಲಾಗುತ್ತಿದೆ. ಮತ್ತೊಮ್ಮೆ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಮೈಸೂರು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಗುರುವಾರ ಬೆಳಿಗ್ಗೆ ವೈದ್ಯಕೀಯ ವರದಿ ಬರುವ ನಿರೀಕ್ಷೆಯಿದೆ.

ಆಸ್ಪತ್ರೆಯಿಂದ ಏ.7ರಂದು ಬಿಡುಗಡೆಯಾಗಿದ್ದ ವ್ಯಕ್ತಿ ಹೋಂ ಕ್ವಾರಂಟೈನ್‌ನಲ್ಲೇ ಇದ್ದರು. ವಾರದ ಬಳಿಕ ಮತ್ತೆ ಜ್ವರ ಕಾಣಿಸಿಕೊಂಡಿದೆ. ಆ ವ್ಯಕ್ತಿ ಹೊರಗೆಲ್ಲೂ ಓಡಾಟ ನಡೆಸಿಲ್ಲ. ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಹೇಳಿದರು.

ADVERTISEMENT

ದುಬೈನಿಂದ ಇಂಡಿಗೋ ವಿಮಾನದಲ್ಲಿ ಮಾರ್ಚ್ 15ರಂದು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಮರು ದಿವಸ ಕೊಡಗಿನ ಕೊಂಡಂಗೇರಿ ಗ್ರಾಮದ ಕೇತುಮೊಟ್ಟೆಯ ನಿವಾಸಕ್ಕೆ ಬಂದು ವಾಸ್ತವ್ಯ ಮಾಡಿದ್ದರು. ಮಾರ್ಚ್‌ 17ರಂದು ಕೊರೊನಾ ಲಕ್ಷಣ ಕಾಣಿಸಿಕೊಂಡು ತಾವೇ ಜಿಲ್ಲಾ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಪ್ರಕರಣ ದೃಢಪಟ್ಟ ಮೇಲೆ ವ್ಯಕ್ತಿ ವಾಸವಿದ್ದ ಕೊಂಡಂಗೇರಿ ಗ್ರಾಮಕ್ಕೆ ನಿರ್ಬಂಧ ಹೇರಲಾಗಿತ್ತು. ಈಗ ಮತ್ತೆ ಆಸ್ಪತ್ರೆಗೆ ದಾಖಲಾಗಿರುವುದು ಆತಂಕ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.