ADVERTISEMENT

ಕೊಡಗು: ಹಸಿವು ನೀಗಿಸಲು ಆಹಾರ ಇಲಾಖೆ ಶ್ರಮ

‌ಪಡಿತರ ವಿತರಣೆ: ಜಿಲ್ಲೆಯೂ ಮುಂಚೂಣಿ

ಅದಿತ್ಯ ಕೆ.ಎ.
Published 9 ಏಪ್ರಿಲ್ 2020, 19:45 IST
Last Updated 9 ಏಪ್ರಿಲ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಡಿಕೇರಿ: ಲಾಕ್‌ಡೌನ್‌ ಬಳಿಕ ಗುಡ್ಡಗಾಡು ಪ್ರದೇಶವಾದ ಕೊಡಗು ಜಿಲ್ಲೆಯಲ್ಲೂ ಕಾರ್ಮಿಕರು, ಬಡವರು ಹಾಗೂ ಮಧ್ಯಮ ವರ್ಗದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಅವರ ಹಸಿವು ನೀಗಿಸಲು ಜಿಲ್ಲೆಯ ಅಧಿಕಾರಿಗಳು ಟೊಂಕಕಟ್ಟಿ ನಿಂತಿದ್ದಾರೆ. ಅದರಲ್ಲೂ ಆಹಾರ ಇಲಾಖೆಯ ಅಧಿಕಾರಿಗಳು, ಹಳ್ಳಿ ಹಳ್ಳಿಗೆ ತಿರುಗಿ ಪಡಿತರ ವಿತರಣೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯ ಜನರ ಹಸಿವು ನೀಗಿಸಲು ಅಧಿಕಾರಿಗಳು ಹಾಗೂ ಸಂಘ/ಸಂಸ್ಥೆಯ ಮುಖಂಡರೂ ಹಗಲಿರುಳು ಶ್ರಮಿಸುತ್ತಿದ್ದಾರೆ. ಲಾಕ್‌ಡೌನ್‌ ವೇಳೆ ಜನರು ಮನೆಯಲ್ಲೇ ಉಳಿದರೆ, ಹಲವು ಇಲಾಖೆ ಅಧಿಕಾರಿಗಳು ಮಾತ್ರ ಎಲ್ಲೆಡೆ ಸಂಚರಿಸುತ್ತಿದ್ದಾರೆ.

ಆಹಾರ ಇಲಾಖೆಯ ಅಧಿಕಾರಿಗಳ ಕಾಳಜಿಯಿಂದ ಏಪ್ರಿಲ್‌ ಹಾಗೂ ಮೇ ತಿಂಗಳ ಪಡಿತರ ವಿತರಣೆಯಲ್ಲಿ ಕೊಡಗು ಜಿಲ್ಲೆಗೆ ಬುಧವಾರ 2ನೇ ಸ್ಥಾನ ಲಭಿಸಿತ್ತು. ಗುರುವಾರದ ವಿತರಣೆಯಲ್ಲಿ ಸ್ವಲ್ಪ ಏರುಪೇರಾಗಿದ್ದು, 3ನೇ (ಶೇ 68) ಸ್ಥಾನದಲ್ಲಿದೆ. ಮಂಡ್ಯ ಜಿಲ್ಲೆ 2ನೇ ಸ್ಥಾನಕ್ಕೇರಿದೆ (ಶೇ .1ರಲ್ಲಿ ಮುನ್ನಡೆಯಷ್ಟೇ). ‘ಇದೇ ವೇಗದಲ್ಲಿ ಸಾಗಿದರೆ ಇನ್ನೊಂದು ವಾರದಲ್ಲಿ ನಿಗದಿತ ಗುರಿ ತಲುಪುತ್ತೇವೆ’ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಬರೀ ವೇಗ ಮಾತ್ರ ಅಲ್ಲ. ಸಣ್ಣಪುಟ್ಟ ಪ್ರಕರಣ ಹೊರತು ಪಡಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿಯೂ ಗ್ರಾಹಕರು ಸಫಲರಾಗಿದ್ದಾರೆ ಎಂದು ಹೇಳುತ್ತಾರೆ ಅವರು.

ADVERTISEMENT

ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ಪಡಿತರ, ಅಗತ್ಯ ಸಾಮಗ್ರಿ ಪೂರೈಕೆಯೇ ಸವಾಲು. ಈ ಸವಾಲನ್ನು ಅಧಿಕಾರಿಗಳ ತಂಡವು ಸಾಧ್ಯವಾದಷ್ಟು ಮಟ್ಟಿಗೆ ಮೆಟ್ಟಿ ನಿಂತಿದೆ ಎಂದು ಜನರೂ ಶ್ಲಾಘಿಸುತ್ತಾರೆ.

ಎಷ್ಟು ಕಾರ್ಡ್‌ಗಳಿವೆ:ಜಿಲ್ಲೆಯಲ್ಲಿ ಎ.ಪಿ.ಎಲ್ 23 ಸಾವಿರ ಕಾರ್ಡ್‌, ಬಿ.ಪಿ.ಎಲ್‌ 93 ಸಾವಿರ ಕಾರ್ಡ್‌, ಅಂತ್ಯೋದ್ಯಯ 10 ಸಾವಿರ ಕಾರ್ಡ್‌ಗಳಿದ್ದು ಅವರಿಗೆ ಪಡಿತರ ಲಭ್ಯವಾಗುತ್ತಿದೆ.

ಎಷ್ಟು ವಿತರಣೆ?:ಬಿ.ಪಿ.ಎಲ್ ಕಾರ್ಡ್‌ ಹೊಂದಿರುವ ಆದ್ಯತಾ ಕುಟುಂಬದ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳಿಗೆ 5 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಕಾರ್ಡ್‌ ಹೊಂದಿದ ಕುಟುಂಬದಲ್ಲಿ 4 ಜನರು ಇದ್ದಲ್ಲಿ 20 ಕೆ.ಜಿ ಅಕ್ಕಿ ಮತ್ತು 2 ಕೆ.ಜಿ ಗೋಧಿ ವಿತರಿಸಲಾಗುತ್ತದೆ. ಎರಡು ತಿಂಗಳ ವಿತರಣೆ ಒಟ್ಟಿಗೆ ಮಾಡಬೇಕಾಗಿರುವುದರಿಂದ 40 ಕೆ.ಜಿ ಅಕ್ಕಿ ಮತ್ತು 4 ಕೆ.ಜಿ ಗೋಧಿ ವಿತರಿಸಲಾಗುತ್ತದೆ.

ಅಂತ್ಯೊದಯ ಅನ್ನಭಾಗ್ಯ ಯೋಜನೆ ಪಡಿತರ ಚೀಟಿದಾರರಿಗೆ ಯಾವುದೇ ಬದಲಾವಣೆ ಇಲ್ಲ. ಆ ಕುಟುಂಬಕ್ಕೆ ಗೋಧಿ ವಿತರಣೆ ಇಲ್ಲ. ಅಂತ್ಯೋದಯ ಕಾರ್ಡ್‌ ಹೊಂದಿದ ಪ್ರತಿ ಕುಟುಂಬಕ್ಕೆ 35 ಕೆ.ಜಿ ಅಕ್ಕಿ ವಿತರಿಸಲಾಗುತ್ತದೆ. ಅದರಂತೆ ಎರಡು ತಿಂಗಳಿಗೆ ಒಟ್ಟು 70 ಕೆ.ಜಿ ಅಕ್ಕಿ ವಿತರಿಸಲಾಗುತ್ತದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು.

ಎ.ಪಿ.ಎಲ್‌ (ಬಡತನ ರೇಖೆಗಿಂತ ಮೇಲಿನ ಕುಟುಂಬ) ಕಾರ್ಡ್‌ ಹೊಂದಿರುವ ಒಬ್ಬ ವ್ಯಕ್ತಿಗೆ 5 ಕೆ.ಜಿ ಅಕ್ಕಿ ನೀಡಲಾಗುವುದು. ಆ ಕುಟುಂಬದಲ್ಲಿ ಎರಡಕ್ಕಿಂತ ಹೆಚ್ಚಿನ ಮಂದಿ ವಾಸವಿದ್ದರೂ 10 ಕೆ.ಜಿಗೆ ಸೀಮಿತ. ಪ್ರತಿ ಕೆ.ಜಿ ಅಕ್ಕಿಗೆ ₹ 15 ಪಾವತಿ ಮಾಡಬೇಕು.

ಎಷ್ಟು ದಾಸ್ತಾನಿದೆ?: ಎರಡು ತಿಂಗಳ ಪಡಿತರ ವಿತರಣೆಗಾಗಿಯೇ ಜಿಲ್ಲೆಗೆ 35 ಸಾವಿರ ಕ್ವಿಂಟಲ್‌ ಅಕ್ಕಿ, 4,200 ಕ್ವಿಂಟಲ್‌ ಗೋಧಿ ಪೂರೈಕೆಯಾಗಿದೆ. ಸದ್ಯಕ್ಕೆ ಪಡಿತರದ ಕೊರತೆಯಾಗಿಲ್ಲ. ಜಿಲ್ಲೆಯ ಪ್ರತಿ ನ್ಯಾಯಬೆಲೆ ಅಂಗಡಿಗೂ ಅಕ್ಕಿ ಹಾಗೂ ಗೋಧಿ ಪೂರೈಕೆ ಮಾಡಲಾಗಿದ್ದು ಅಲ್ಲೂ ದಾಸ್ತಾನಿದೆ.

‘ಸದ್ಯಕ್ಕೆ ಅಡುಗೆ ಎಣ್ಣೆ ವಿತರಣೆ ಮಾಡಲಾಗುತ್ತಿಲ್ಲ. ಆದರೆ, ಮುಂದಿನ ತಿಂಗಳು ಪ್ರಧಾನ ಮಂತ್ರಿ ಗರೀಬ್‌ ಅನ್ನ ಯೋಜನಾ ಜಾರಿಗೆ ಬರುತ್ತಿದೆ. ಅದರ ಅಡಿ ಬೇಳೆ ವಿತರಣೆ ಮಾಡಲಾಗುವುದು. ಬಿಪಿಎಲ್, ಅಂತ್ಯೋದಯ ಕಾರ್ಡ್‌ ಹೊಂದಿರುವ ಕುಟುಂಬಕ್ಕೆ ಮಾತ್ರ ಬೇಳೆ ಲಭಿಸಲಿದೆ’ ಎಂದು ಗೌರವ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.