ADVERTISEMENT

ಮಡಿಕೇರಿ: ಕಳೆಗಟ್ಟುತ್ತಿರುವ ಸಾಂಸ್ಕೃತಿಕ ದಿಬ್ಬಣ

ಗಾಂಧಿ ಮೈದಾನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳ ರಸದೌತಣ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 10:58 IST
Last Updated 29 ಸೆಪ್ಟೆಂಬರ್ 2022, 10:58 IST
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಬುಧವಾರ ‘ಹೆಜ್ಜೆ ನಾದ’ ತಂಡದವರು ಜ್ಞಾನ ಐತಾಳ್ ಅವರ ನೇತೃತ್ವದಲ್ಲಿ ‘ನೃತ್ಯ ವೈವಿಧ್ಯ’ವನ್ನು ಪ್ರಸ್ತುತಪಡಿಸಿದರು
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಬುಧವಾರ ‘ಹೆಜ್ಜೆ ನಾದ’ ತಂಡದವರು ಜ್ಞಾನ ಐತಾಳ್ ಅವರ ನೇತೃತ್ವದಲ್ಲಿ ‘ನೃತ್ಯ ವೈವಿಧ್ಯ’ವನ್ನು ಪ್ರಸ್ತುತಪಡಿಸಿದರು   

ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ಮಡಿಕೇರಿ ನಗರ ದಸರಾ ಸಮಿತಿ ಆಯೋಜಿಸಿರುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಬುಧವಾರ ಕಳೆಗಟ್ಟಿತು. ಇಲ್ಲಿ ನಡೆದ ವೈವಿಧ್ಯಮಯ ಕಾರ್ಯಕ್ರಮಗಳು ಪ್ರೇಕ್ಷಕರ ಮನ ತಣಿಸಿದವು.

ಆರಂಭದಲ್ಲೇ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಿದ ಸಮಿತಿಯು ಮಡಿಕೇರಿಯ ಟೀಮ್‌ ಆ್ಯಟಿಟ್ಯೂಡ್‌ ಟೀಮ್‌ನ ಕಲಾವಿದರು ‘ಫ್ಯೂಶನ್‌ ಡ್ಯಾನ್ಸ್’ ಪ್ರಸ್ತುತಪಡಿಸಿದರು. ಇಲ್ಲಿನ ಸ್ನೇಹ ಮಧುಕರ್ ಶೇಟ್ ಮತ್ತು ತಂಡದವರು ‘ಸಂಗೀತ ಸುಧೆ’ಯನ್ನೇ ಹರಿಸಿದರು.

ವಿರಾಜಪೇಟೆಯ ಜಗನ್ಮೋಹನ ನಾಟ್ಯಾಲಯ ತಂಡದವರು ‘ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರ’ವನ್ನು ಪ್ರಸ್ತುತಪಡಿಸಿ ಭರಪೂರ ಕರತಾಡನ ಪಡೆದರು.

ADVERTISEMENT

‘ಹೆಜ್ಜೆ ನಾದ’ ತಂಡದವರು ಜ್ಞಾನ ಐತಾಳ್ ಅವರ ನೇತೃತ್ವದಲ್ಲಿ ಪ್ರಸ್ತುತಪಡಿಸಿದ ‘ನೃತ್ಯ ವೈವಿಧ್ಯ’ಗಳು ಹಲವು ಬಗೆಯ ನೃತ್ಯಗಳನ್ನು ಒಂದೇ ವೇದಿಕೆಯಲ್ಲಿ ಪ್ರೇಕ್ಷಕಿಗೆ ಉಣಬಡಿಸುವಲ್ಲಿ ಸಫಲವಾಯಿತು.

ಕುಶಾಲನಗರದ ನಟರಾಜ ಸಂಗೀತ ನೃತ್ಯ ಕಲಾವೃಂದದವರು ‘ನೃತ್ಯ ರೂಪಕ’ವನ್ನು ಹಾಗೂ ಕುಶಾಲನಗರದ ಉದಯ ನಂಜಪ್ಪ ಅವರು ‘ಭಾವಸಂಗೀತ’ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಹಲವು ಮಾಧುರ್ಯ ಭರಿತ ಗೀತೆಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತೆ ಮಾಡುವಲ್ಲಿ ಇವರ ಕಾರ್ಯಕ್ರಮ ಯಶಸ್ವಿಯಾಯಿತು.

ಮಂಗಳವಾರಕ್ಕೆ ಹೋಲಿಸಿದರೆ ಪ್ರೇಕ್ಷಕರ ಸಂಖ್ಯೆ ಬುಧವಾರ ಹೆಚ್ಚಾಗಿತ್ತು. ಮಡಿಕೇರಿ ಮಾತ್ರವಲ್ಲ ಸುತ್ತುಮತ್ತಲ ತಾಲ್ಲೂಕುಗಳು, ಹೋಬಳಿಗಳಿಂದಲೂ ಜನರು ವೀಕ್ಷಣೆಗಾಗಿ ಬಂದಿದ್ದರು.

ಇದಕ್ಕೂ ಮುನ್ನ 2ನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ, ‘ತಲೆತಲಾಂತರಗಳಿಂದ ಬಂದ ಸಂಸ್ಕೃತಿಯನ್ನು ಉಳಿಸಬೇಕು. ನೆಲದ ಸೊಗಡನ್ನು ಉಳಿಸುವ ಹಾಗೂ ಅದನ್ನು ಪಸರಿಸುವ ಕೆಲಸವನ್ನು ದಸರಾ ಸಾಂಸ್ಕೃತಿಕ ಸಮಿತಿ ಮಾಡಿದೆ’ ಎಂದು ಶ್ಲಾಘಿಸಿದರು.

ನಗರ ದಸರಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಸತೀಶ್ ಪೈ, ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ, ಗೌರವ ಅಧ್ಯಕ್ಷ ಬೈ ಶ್ರೀ ಪ್ರಕಾಶ್, ಗೌರವ ಸಲಹೆಗಾರ ಎಸ್.ಸಿ.ಸುಬ್ರಹ್ಮಣ್ಯ, ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಸಿ.ಕೆ.ಬಾಲಕೃಷ್ಣ, ನಗರ ದಸರಾ ಸಮಿತಿ ಗೌರವ ಅಧ್ಯಕ್ಷ ಪ್ರಕಾಶ್ ಆಚಾರ್ಯ, ನಗರಸಭೆ ಸದಸ್ಯ ಅರುಣ್‌ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.