
ಮಡಿಕೇರಿ: ಶಿಕ್ಷಕ ವೃತ್ತಿ ತೊರೆದು ಅಣಬೆ ಕ್ಷೇತ್ರಕ್ಕೆ ಅಡಿ ಇಟ್ಟವರು ಅಮ್ಮತ್ತಿಯ ದೀಪ್ನ್ ವಿವೇಕ್.
ಶಿಕ್ಷಕಿಯಾಗಿದ್ದ ಇವರು ಬೆಂಗಳೂರಿನಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ತರಬೇತಿ ಪಡೆದು ಅಣಬೆಯಿಂದ ಮೌಲ್ಯವರ್ಧಿತ ವಸ್ತುಗಳನ್ನು ತಯಾರಿಸಿ ಯಶಸ್ವಿಯ ಹಾದಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ.
ಬೇಗನೇ ಬಾಡಿ ಹೋಗುವ, ಹೆಚ್ಚು ದಿನ ಬಾಳಿಕೆ ಬಾರದ ಅಣಬೆಯನ್ನು ಒಣಗಿಸಿ ಅದರಿಂದ ಮೌಲ್ಯವರ್ಧಿತ ವಸ್ತುಗಳನ್ನು ತಯಾರಿಸುತ್ತಿರುವುದು ಇವರ ವಿಶೇಷ. ಇವರು ಅಣಬೆಯಿಂದ ರಸಂ ಪುಡಿ ಮತ್ತು ಉಪ್ಪಿನಕಾಯಿ ತಯಾರಿಸಿ, ತಮ್ಮದೇ ಬ್ರಾಂಡ್‌ನಡಿ ಮಾರಾಟವನ್ನೂ ಮಾಡುತ್ತಿದ್ದಾರೆ.
ಈ ಪುಡಿ ತಯಾರಿಕೆಗೆಂದೇ ಅವರು ಗುಜರಾತ್‌ನಿಂದ ಯಂತ್ರವನ್ನು ತರಿಸಿದ್ದು, ಅದರಲ್ಲಿ ಒಣಗಿಸಿದ ಅಣಬೆಯನ್ನು ಹಾಕಿ ಪುಡಿ ಮಾಡಿ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ತಂತ್ರಜ್ಞಾನದ ಆಧಾರದ ಮೇಲೆ ರಸಂಪುಡಿ ತಯಾರಿಸುತ್ತಿದ್ದಾರೆ. ‘ಈ ರಸಂಪುಡಿ ಸಂಪೂರ್ಣ ರಾಸಾಯನಿಕ ಮುಕ್ತವಾಗಿದೆ’ ಎಂದು ಅವರು ಹೇಳುತ್ತಾರೆ.
ಕೊಡಗಿನಲ್ಲಿ ಅಣಬೆ ಕೃಷಿ ತೀರಾ ಕಡಿಮೆ. ಅದರಲ್ಲೂ ಒಣಗಿಸಿದ ಅಣಬೆ ಇಲ್ಲಿ ಸಿಕ್ಕುವುದಿಲ್ಲ. ಹಸಿ ಅಣಬೆ ಸಾಕಷ್ಟು ದಿನ ಇರುವುದಿಲ್ಲ. ಹಾಗಾಗಿ, ಇವರು ಉತ್ತರ ಭಾರತದ ನಾಸಿಕ್‌ನಿಂದ ಈ ಅಣಬೆಯನ್ನು ತರಿಸುತ್ತಿದ್ದಾರೆ. ಇದನ್ನೇ ರಸಂಪುಡಿ ತಯಾರಿಕೆಗೆ ಬಳಕೆ ಮಾಡುತ್ತಿದ್ದಾರೆ.
ಈಗ ಈ ಎಲ್ಲವನ್ನೂ ಅವರು ಆಯಿಶ್ಚರ್ ಅಣಬೆಯಲ್ಲಿ ಮಾಡುತ್ತಿದ್ದಾರೆ. ‘ಮುಂದೆ ಔಷಧೀಯ ಮೌಲ್ಯಯುಳ್ಳ, ಸಾಕಷ್ಟು ರೋಗನಿರೋಧಕ ಶಕ್ತಿಯುಳ್ಳ ದುಬಾರಿ ಬೆಲೆಯ ಶಿತಾಕೆ ಅಣಬೆಯಲ್ಲಿ ಸೂಪ್‌ಪುಡಿ ತಯಾರಿಸುವ ಉದ್ದೇಶ ಹೊಂದಿರುವೆ. ಈ ಶಿತಾಕೆ ಅಣಬೆ ನಾಸಿಕ್‌ನಲ್ಲಿ ಕೆ.ಜಿಗೆ ₹ 2 ಸಾವಿರದವರೆಗೆ ಮಾರಾಟವಾಗುತ್ತಿದೆ’ ಎಂದು ಅವರು ಹೇಳುತ್ತಾರೆ.
ಕೇವಲ ಅಣಬೆ ಮಾತ್ರವಲ್ಲ, ಭಾರತದ ವಿವಿಧ ರಾಜ್ಯಗಳಲ್ಲಿ ಬೆಳೆಯುವಂತಹ ಹಣ್ಣುಗಳನ್ನೂ ತರಿಸಿ ಮಾರಾಟ ಮಾಡುತ್ತಿದ್ದಾರೆ. ಹಿಮಾಲಯದಲ್ಲಿ ಮಾತ್ರ ಸಿಗುವ ಶಿಲಾಜಿತ್ ಹಣ್ಣು ಸೇರಿದಂತೆ ವಿವಿಧ ರಾಜ್ಯಗಳ ಹಣ್ಣುಗಳು ಇವರ ಬಳಿ ಇವೆ. ಜೊತೆಗೆ, ಕ್ಯಾಲಿಫೋರ್ನಿಯಾ, ದುಬೈ ಸೇರಿದಂತೆ ವಿವಿಧ ದೇಶಗಳ ಹಣ್ಣುಗಳನ್ನೂ ಇವರು ಇಲ್ಲಿ ಮಾರಾಟ ಮಾಡುತ್ತಿದ್ದಾರೆ.
ಬೇರೆ ಬೇರೆ ಸಂಘ, ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಇವರು ಅಣಬೆ ಕೃಷಿ ಕುರಿತು ಉಪನ್ಯಾಸ ನೀಡುತ್ತಿದ್ದಾರೆ. ಈ ಮೂಲಕ ಇತರರೂ ಸ್ವಾವಲಂಬನೆಯ ಹಾದಿಯಲ್ಲಿ ಸಾಗಲು ನೆರವಾಗುತ್ತಿದ್ದಾರೆ.
ಪಿಎಂಎಫ್‌ಎಂಇ ಯೋಜನೆ ನೆರವು
‘ದೀಪ್ನ್ ವಿವೇಕ್ ಅವರು ಕ್ರಮಬದ್ಧವಾದ ತಾಂತ್ರಿಕ ಅರಿವು ಹಾಗೂ ತರಬೇತಿ ಪಡೆದು ಅಣಬೆಯಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಕೇವಲ ತಯಾರಿಕೆ ಮಾತ್ರವಲ್ಲ ಇವರ ಪ್ಯಾಕೇಜಿಂಗ್ ಬ್ರಾಂಡಿಂಗ್ ಮತ್ತು ಮಾರುಕಟ್ಟೆ ಸಹ ವಿಭಿನ್ನವಾಗಿದೆ. ಇವರಿಗೆ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣೆ ನಿಯಮ ಬದ್ಧಗೊಳಿಸುವಿಕೆ ಯೋಜನೆಯಡಿ (ಪಿಎಂಎಫ್‌ಎಂಇ) ನೆರವು ಸಿಕ್ಕಿದೆ. ಆಸಕ್ತರು ಈ ಯೋಜನೆಯ ನೆರವು ಪಡೆಯಲು ಮೊ: 8861422540 ಸಂಪರ್ಕಿಸಬಹುದು’ ಎಂದು ಪಿಎಂಎಫ್‌ಎಂಇ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಮತ್ತು ಜಿಲ್ಲಾ ತರಬೇತುದಾರರಾದ ನೀರಜಾ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.