
ಮಡಿಕೇರಿ: ಕೇಂದ್ರ ಬಜೆಟ್ ಮಂಡನೆಯ ದಿನಗಳು ಸಮೀಪಿಸುತ್ತಿದ್ದಂತೆ ಕೊಡಗು ಜಿಲ್ಲೆಯ ವಿವಿಧ ವಲಯಗಳಿಂದ ಭರಪೂರ ನಿರೀಕ್ಷೆಗಳು ಗರಿಗೆದರಿವೆ.
ಇಲ್ಲಿನ ಕಾಫಿ, ಪ್ರವಾಸೋದ್ಯಮ, ರಾಷ್ಟ್ರೀಯ ಹೆದ್ದಾರಿ, ವನ್ಯಜೀವಿ– ಮಾನವ ಸಂಘರ್ಷ ಸೇರಿದಂತೆ ಅನೇಕ ವಿಷಯಗಳು ನೇರವಾಗಿ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿರುವುದರಿಂದ ಇತರೆ ಎಲ್ಲ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆ ವಿಶೇಷವಾಗಿ ಕೇಂದ್ರ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ.
ಅವುಗಳಲ್ಲಿ ಕಾಫಿ ಬೆಳೆಗಾರರ ನಿರೀಕ್ಷೆಗಳು ಮುಖ್ಯವಾಗಿವೆ. ಈ ಬಾರಿ ಬೆಳೆಗಾರರು ಸಾಲು ಸಾಲು ಬೇಡಿಕೆಗಳಿರಲಿ, ಕನಿಷ್ಠ ಒಂದೆರಡು ಪ್ರಮುಖ ಬೇಡಿಕೆಗಳನ್ನಾದರೂ ಈಡೇರಿಸಿ ಎಂದು ಒತ್ತಾಯಿಸಿದ್ದಾರೆ.
ಅವರ ಬಹಳಷ್ಟು ಬೇಡಿಕೆಗಳ ಪೈಕಿ ಕಾಫಿ ಬೆಳೆಗಾರರನ್ನು ‘ಸರ್ಫೇಸಿ’ ಕಾಯ್ದೆಯಿಂದ ಹೊರಗಿಡುವುದು ಹಾಗೂ ಕಾಫಿ ಬೆಳೆಗೆ ಬೆಳೆ ವಿಮೆ ನೀಡುವುದು ಪ್ರಮುಖವಾಗಿವೆ. ಈ ಕುರಿತು ಈಗಾಗಲೆ ಕರ್ನಾಟಕ ಬೆಳೆಗಾರರ ಒಕ್ಕೂಟವು ಕೇಂದ್ರ ಸರ್ಕಾರಕ್ಕೆ ತನ್ನ ಮನವಿಯನ್ನು ಸಲ್ಲಿಸಿದ್ದು, ಬಜೆಟ್‌ನಲ್ಲಿ ಬೇಡಿಕೆಗಳು ಈಡೇರಬಹುದೇ ಎಂಬ ನಿರೀಕ್ಷೆಯಲ್ಲಿದೆ.
ಸರ್ಫೇಸಿ ಕಾಯ್ದೆಯು ಸಾಲ ಮರುಪಾವತಿಸದ ರೈತರ ತೋಟಗಳನ್ನು ಹರಾಜು ಮಾಡಲು ಅವಕಾಶ ಕೊಡುತ್ತದೆ. ಆದರೆ, ಈಗಾಗಲೆ ಹವಾಮಾನ ವೈಪರೀತ್ಯ, ವನ್ಯಜೀವಿಗಳ ಹಾವಳಿ, ಕಾರ್ಮಿಕರ ಕೊರತೆ, ಏರುತ್ತಿರುವ ತೋಟಗಳ ನಿರ್ವಹಣಾ ವೆಚ್ಚಗಳಿಂದ ಹೈರಾಣಾಗಿರುವ ಕಾಫಿ ಬೆಳೆಗಾರರು ಈಗ ಸರ್ಫೇಸಿ ಕಾಯ್ದೆಯಿಂದ ಮತ್ತಷ್ಟು ಪರಿತಪಿಸುವಂತಾಗಿದೆ.
ಒಂದು ವೇಳೆ ಸಾಲ ಮರುಪಾವತಿಸದೇ ಹೋದರೆ ಈ ಕಾಯ್ದೆಯಡಿ ತೋಟಗಳನ್ನು ಬ್ಯಾಂಕುಗಳು ಹರಾಜು ಹಾಕಿಬಿಡುತ್ತವೆ. ಇದರಿಂದ ಬೆಳೆಗಾರರು ಬದುಕು ಮೂರಾಬಟ್ಟೆಯಾಗಲಿದೆ.
ಈ ಕಾಯ್ದೆ ಬರುವುದಕ್ಕೂ ಮುನ್ನ ಇದ್ದ ‘ಡೆಡ್ ರಿಕವರಿ ಟ್ರಿಬ್ಯೂನ್ (ಡಿಆರ್‌ಟಿ) ಮೂಲಕ ಸಾಲ ವಸೂಲಾತಿ ನಡೆಯುತ್ತಿತ್ತು. ಇದರಲ್ಲಿ ಸಾಲ ಮರುಪಾವತಿಸಲು ಒಂದಿಷ್ಟು ಕಾಲಾವಕಾಶವಾದರೂ ಬೆಳೆಗಾರರಿಗೆ ಸಿಗುತ್ತಿತ್ತು. ಆದರೆ, ಸರ್ಫೇಸಿ ಕಾಯ್ದೆಯಿಂದ ಈ ಕಾಲಾವಕಾಶ ಇಲ್ಲವಾಗಿದೆ. ಹೀಗಾಗಿ, ಸಾಲ ಮರುಪಾವತಿಸದ ಬೆಳೆಗಾರರು ಸದಾ ಆತಂಕದಲ್ಲೇ ಇರುವ ಸ್ಥಿತಿ ಸೃಷ್ಟಿಯಾಗಿದೆ.
ಹಾಗಾಗಿ, ಕರ್ನಾಟಕ ಬೆಳೆಗಾರರ ಒಕ್ಕೂಟವೂ ಕಾಫಿ ಬೆಳೆಯನ್ನು ಈ ಸರ್ಫೇಸಿ ಕಾಯ್ದೆಯಿಂದ ಹೊರಗಿಡುವಂತೆ ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಮನವಿ ಸಲ್ಲಿಸಿದೆ. ಈ ಮನವಿ ಬಜೆಟ್‌ನಲ್ಲಿ ಈಡೇರುವುದೇ ಎಂಬುದನ್ನು ಕಾದು ನೋಡಬೇಕಿದೆ.
ಕಾಫಿಗೆ ನೀಡಿ ಬೆಳೆ ವಿಮೆ
ಈಗ ಕಾಫಿಗೆ ಯಾವುದೇ ಬೆಳೆ ವಿಮೆ ಇಲ್ಲ. ಇದರಿಂದ ಹವಾಮಾನ ವೈಪರೀತ್ಯ ಉಂಟಾದಾಗ ಸೂಕ್ತ ಪರಿಹಾರ ದಕ್ಕುವುದಿಲ್ಲ. ಹಾಗಾಗಿ ಕಾಫಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಕೊಡಿ ಎಂಬ ಬೇಡಿಕೆಯನ್ನೂ ಕರ್ನಾಟಕ ಬೆಳೆಗಾರರ ಒಕ್ಕೂಟ ಕೇಂದ್ರ ಸರ್ಕಾರದ ಮುಂದೆ ಮಂಡಿಸಿದೆ. ಈಗಾಗಲೇ ಸಾಕಷ್ಟು ಬೆಳೆಗಳಿಗೆ ಬೆಳೆ ವಿಮೆ ಇದೆ. ಹವಾಮಾನ ವೈಪರೀತ್ಯದಿಂದ ಉಂಟಾಗುವ ನಷ್ಟವನ್ನು ಸ್ವಲ್ಪವಾದರೂ ಈ ವಿಮಾ ಹಣ ತುಂಬು ಕೊಡುತ್ತದೆ. ಆದರೆ ಕಾಫಿ ಬೆಳೆಯನ್ನು ಇದರಿಂದ ಹೊರಗಿಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯವಂತೂ ಕಾಫಿ ಬೆಳೆಗಾರರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಬೇಸಿಗೆಯಲ್ಲಿ ಅತ್ಯಧಿಕ ಉಷ್ಣಾಂಶ ದಾಖಲಾಗುವುದು ಹೂಮಳೆ ಸರಿಯಾದ ಸಮಯದಲ್ಲಿ ಸುರಿಯದೇ ಇರುವುದು ಮಳೆಗಾಲದಲ್ಲಿ ಅತ್ಯಧಿಕ ಮಳೆ ಸುರಿಯುವುದು ಕಾಫಿ ಹಣ್ಣಾದ ನಂತರ ಕಾಫಿ ಕೊಯ್ಲಿನ ಸಮಯದಲ್ಲಿ ಮಳೆಯಾಗುವುದು ಹೀಗೆ ಹವಮಾನದ ಬದಲಾವಣೆಯಿಂದ ಸಾಕಷ್ಟು ನಷ್ಟವಾಗತ್ತಿದೆ. ಈ ನಷ್ಟವನ್ನು ತುಂಬಿಕೊಡಲು ಬೆಳೆ ವಿಮೆ ಕೊಡಬೇಕು ಎಂಬುದು ರೈತರ ಒತ್ತಾಯವಾಗಿದೆ.
ಕೇಂದ್ರ ಸರ್ಕಾರ ಬೇಡಿಕೆಗಳನ್ನು ಈಡೇರಿಸಲಿ
ನಾವೇನೂ ಸಾಲ ವಸೂಲಾತಿ ಬೇಡ ಎನ್ನುತ್ತಿಲ್ಲ. ಆದರೆ ಸಾಲ ವಸೂಲಾತಿಗೆ ‘ಸರ್ಫೇಸಿ’ ಕಾಯ್ದೆ ಬೇಡ ಎಂದಷ್ಟೇ ಹೇಳತ್ತಿದ್ದೇವೆ. ಹಾಗೆಯೇ ಕಾಫಿ ಬೆಳೆಗೆ ಬೆಳೆ ವಿಮೆ ಕೊಡಿ ಎಂದು ಸಹ ಕೇಳಿದ್ದೇವೆ. ಅತ್ಯಂತ ಪ್ರಮುಖವಾಗಿರುವ ಈ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕು ಕೆ.ಕೆ.ವಿಶ್ವನಾಥ್ ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ.