ADVERTISEMENT

ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 16:18 IST
Last Updated 2 ಜೂನ್ 2025, 16:18 IST
ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಸದಸ್ಯರು ಸೋಮವಾರ ಮಾನವ ಸರಪಳಿ ರಚಿಸಿ, ಬೇಡಿಕೆಗಳನ್ನು ಮಂಡಿಸಿ ಗಮನ ಸೆಳೆದರು
ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಸದಸ್ಯರು ಸೋಮವಾರ ಮಾನವ ಸರಪಳಿ ರಚಿಸಿ, ಬೇಡಿಕೆಗಳನ್ನು ಮಂಡಿಸಿ ಗಮನ ಸೆಳೆದರು   

ಮಡಿಕೇರಿ: ರಾಷ್ಟ್ರೀಯ ಜನಗಣತಿ ವೇಳೆ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಅನ್ನು ಅಳವಡಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡಗು ಜಿಲ್ಲೆಯಲ್ಲಿ ನಡೆಸುತ್ತಿರುವ ಜನಜಾಗೃತಿ ಕಾರ್ಯಕ್ರಮ ಮುಂದುವರಿದಿದೆ.

ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆಯಲ್ಲಿ ಸಂಘಟನೆಯ ಸದಸ್ಯರು ಸೋಮವಾರ ಮಾನವ ಸರಪಳಿ ರಚಿಸಿ, ಬೇಡಿಕೆಗಳನ್ನು ಮಂಡಿಸಿ ಗಮನ ಸೆಳೆದರು.

ಈ ವೇಳೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ, ‘ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕೊಡವ ಲ್ಯಾಂಡ್ ಪ್ರದೇಶವನ್ನು ನಗರೀಕರಣ ಮಾಡಲು ಹೊರಗಿನ ಹೂಡಿಕೆದಾರರನ್ನು ಆಕರ್ಷಿಸುವ ಕೆಲಸ ನಡೆಯುತ್ತಿದೆ. ಇಲ್ಲಿ ನಾವು ಸುರಕ್ಷಿತವಾಗಬೇಕಾದರೆ ಕೊಡವ ಲ್ಯಾಂಡ್‌ಗೆ ಪೂರಕವಾದ ಜಾತಿಗಣತಿ ಸಹಕಾರಿ’ ಎಂದು ಅಭಿಪ್ರಾಯಪಟ್ಟರು.

‘ನಾವು ಹೊಸತೇನನ್ನೂ ಕೇಳುತ್ತಿಲ್ಲ. ಈ ಹಿಂದೆ 1871–72ರಿಂದ 1931ರವರೆಗೆ ನಡೆದ ಜನಗಣತಿಯು ಕೊಡವರನ್ನು ಕೊಡವಲ್ಯಾಂಡ್‌ನ ಏಕ-ಜನಾಂಗೀಯ, ಆನಿಮಿಸ್ಟಿಕ್, ಆದಿಮಸಂಜಾತ ಯೋಧ ಕುಲವೆಂದು ಗುರುತಿಸಿತು. ಈ ಮನ್ನಣೆ ಕೊಡವ ಸಮುದಾಯದ ಜನಾಂಗೀಯ ವಂಶಾವಳಿಯನ್ನು ದೃಢಪಡಿಸಿತು. ಇದು ಅತ್ಯಂತ ನಿಖರವೂ, ವೈಜ್ಞಾನಿಕವೂ ಆಗಿತ್ತು. ಇದೇ ಬಗೆಯಲ್ಲಿ ಮುಂಬರುವ ಜನಗಣತಿಯಲ್ಲೂ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

ಸಿಕ್ಕಿಂನಲ್ಲಿ ಬೌದ್ಧ ಬಿಕ್ಷುಗಳಿಗಾಗಿ ನೀಡಿರುವ ‘ಸಂಘ’ ಮತಕ್ಷೇತ್ರದಂತೆ 2026ರ ಕ್ಷೇತ್ರ ಪುನರ್ವಿಂಗಡಣೆಯ ಸಮಯದಲ್ಲಿ ಕೊಡವರಿಗೂ ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ನೀಡಬೇಕು ಎಂದು ಮನವಿ ಮಾಡಿದರು.

ಉಪರಾಷ್ಟ್ರಪತಿ ಜಗದೀಪ್‌ ಧನಕರ್ ಅವರು ದೆಹಲಿಯಲ್ಲಿ ಈಚೆಗೆ ಜನಗಣತಿ ಮತ್ತು ಜಾತಿವಾರು ಸಮೀಕ್ಷೆ ಸಂಬಂಧ ನಡೆದ ಪೂರ್ವ ತಯಾರಿ ಸಭೆಯಲ್ಲಿ ವಿಭಿನ್ನ ಸಂಸ್ಕೃತಿಯ ವೈವಿಧ್ಯಮಯ ಜನಾಂಗೀಯ ಹಿನ್ನೆಲೆಯನ್ನು ಹೊಂದಿರುವ ಈ ದೇಶದಲ್ಲಿ ಎಲ್ಲಾ ಜನಾಂಗವನ್ನು ಸರಿಯಾಗಿ ಸಮೀಕ್ಷೆ ಮಾಡಿ ಸಂವಿಧಾನ ಬದ್ಧತೆಯನ್ನು ಅನುಷ್ಠಾನ ಮಾಡಿ ಸಮ ಸಮಾಜವನ್ನು ನಿರ್ಮಾಣ ಮಾಡಲು ಜಾತಿಗಣತಿ ಅತೀ ಅವಶ್ಯಕ ಎಂದು ಹೇಳಿದ್ದಾರೆ. ಉಪರಾಷ್ಟ್ರಪತಿಯ ಈ ಮಹತ್ವದ ಹೇಳಿಕೆಯನ್ನು ಸ್ವಾಗತಿಸುವುದಾಗಿ ನಾಚಪ್ಪ ತಿಳಿಸಿದರು.

ಇಲ್ಲಿಯವರೆಗೆ ಈ ವಿಷಯ ಕುರಿತು ಬಿರುನಾಣಿ, ಕಡಂಗ, ಕಕ್ಕಬ್ಬೆ, ಟಿ.ಶೆಟ್ಟಿಗೇರಿ ಮತ್ತು ಬಾಳೆಲೆಯಲ್ಲಿ ಜನ ಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಸಲಾಗಿದೆ. ಮುಂದಿನ 6ನೇ ಮಾನವ ಸರಪಳಿ ಕಾರ್ಯಕ್ರಮವು ಜೂನ್ 23ರಂದು ಪೊನ್ನಂಪೇಟೆಯಲ್ಲಿ ನಡೆಯಲಿದೆ ಎಂದರು.

ಮಾಪಗಂಡ ಯಮುನ, ಕರ್ನಲ್ ಬಿ.ಎಂ.ಪಾರ್ವತಿ, ಕಾಂಡೇರ ಸುರೇಶ್, ಆದೇಂಗಡ ರಮೇಶ್, ಅಳ್ಮೆಂಗಡ ಬೋಸ್ ಮಂದಣ್ಣ, ಪಾರ್ವಂಗಡ ಬೋಸ್, ಕಾಡ್ಯಮಾಡ ಗಣಪತಿ, ಮಾಚಂಗಡ ಜಪ್ಪು, ಪುಳ್ಳಂಗಡ ಪೂಣಚ್ಚ, ಆದೇಂಗಡ ಬಬ್ಬು, ಅಳ್ಮೆಂಗಡ ಗೋಕುಲ, ಬಿದ್ದಮಾಡ ಪಾಪು, ಕೊಕ್ಕೆಂಗಡ ದಿಲೀಪ್, ಬಲ್ಯಮಿದೇರಿರ ಸಂತೋಷ್, ಮಚ್ಚಮಾಡ ದೊರೆ ಉತ್ತಯ್ಯ, ಮೇಚಂಡ ಅಪ್ಪಚ್ಚು, ಮಲ್ಚೀರ ದೇವಯ್ಯ, ಆದೇಂಗಡ ನಾಚಪ್ಪ, ಚೆಕ್ಕೇರ ಮಾದಪ್ಪ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.