ADVERTISEMENT

ಮಡಿಕೇರಿಯಲ್ಲಿ ಮಹಾಶಿವರಾತ್ರಿ ಸಂಭ್ರಮ: ನೂರಾರು ಮಂದಿಯಿಂದ ಶಿವಭಜನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 4:25 IST
Last Updated 16 ಫೆಬ್ರುವರಿ 2026, 4:25 IST
ಮಹಾಶಿವರಾತ್ರಿ ಪ್ರಯುಕ್ತ ವಿವಿಧ ಭಜನಾ ತಂಡಗಳ ಸದಸ್ಯರು ಮಡಿಕೇರಿಯಲ್ಲಿ ನಗರ ಸಂಕೀರ್ತನೆ ನಡೆಸಿದರು
ಮಹಾಶಿವರಾತ್ರಿ ಪ್ರಯುಕ್ತ ವಿವಿಧ ಭಜನಾ ತಂಡಗಳ ಸದಸ್ಯರು ಮಡಿಕೇರಿಯಲ್ಲಿ ನಗರ ಸಂಕೀರ್ತನೆ ನಡೆಸಿದರು   

ಮಡಿಕೇರಿ: ಸೂರ್ಯ ಭಾನುವಾರ ಪಡುವಣದಲ್ಲಿ ಜಾರಿ, ಕೆಂಬಣ್ಣ ಆವರಿಸುತ್ತಿದ್ದಂತೆ ಇತ್ತ ಕೋದಂಡರಾಮ ದೇಗುಲದ ಮುಂಭಾಗ ನೂರಾರು ಮಂದಿ ಸೇರತೊಡಗಿದರು. ಕೈಯಲ್ಲಿ ತಾಳ ಹಿಡಿದು ದೇವರ ಭಜನೆ ಆರಂಭಿಸಿದರು. ನೋಡನೋಡುತ್ತಿದ್ದಂತೆ ಭಜನೆ ಹಾಡುವವರ ಸಾಲು ವೃದ್ಧಿಸಿತು. ಸೂರ್ಯಾಸ್ತವಾಗುತ್ತಿದ್ದಂತೆ ರಸ್ತೆಯಲ್ಲಿ ಭಜನೆ ಹಾಡುತ್ತಲೇ ಅವರು ನಡೆಯತೊಡಗಿದರು.

ಮಹಾಶಿವರಾತ್ರಿ ಪ್ರಯುಕ್ತ ಇಲ್ಲಿನ ರಾಮಾಂಜನೇಯ ಭಜನಾ ಮಂಡಳಿಯ ನೇತೃತ್ವದಲ್ಲಿ 25 ಭಜನಾ ತಂಡಗಳ ಸದಸ್ಯರು ಭಾನುವಾರ ಸಂಜೆ ನಡೆಸಿದ ನಗರ ಸಂಕೀರ್ತನೆ ಕಾರ್ಯಕ್ರಮದಲ್ಲಿ ಈ ದೃಶ್ಯಗಳು ಕಂಡು ಬಂದವು.

ಇವರಲ್ಲಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಇದ್ದರು. ಕೇವಲ ನಗರ ಮಾತ್ರವಲ್ಲ ಜಿಲ್ಲೆಯ ದೂರದ ಪ್ರದೇಶಗಳಿಂದ ಬಂದಿದ್ದ ಭಜನಾ ತಂಡಗಳ ಸದಸ್ಯರೂ ಅಲ್ಲಿದ್ದರು. ಸಂಜೆಯಾಗಿ, ಕತ್ತಲೆ ಆವರಿಸುತ್ತಿದ್ದಂತೆ ಭಜನಾ ತಂಡಗಳ ಸದಸ್ಯರು ಓಂಕಾರೇಶ್ವರ ದೇಗುಲ ತಲುಪಿದರು.

ADVERTISEMENT

ರಸ್ತೆಯುದ್ಧಕ್ಕೂ ಕೇಸರಿ ಧ್ವಜಗಳು ಹಾರಾಡಿದವು. ಹಲವು ಮಂದಿ ಕುಣಿತ ಭಜನೆ ಮಾಡಿದರು. ಓಂಕಾರೇಶ್ವರ ದೇಗುಲ ತಲುಪಿದ ಬಳಿಕ ಅಲ್ಲಿ ದೀಪ ಹೊತ್ತಿಸಿದ ಸದಸ್ಯರು ಮನಸಾರೆ ಶಿವಭಜನೆಗಳನ್ನು ಹಾಡಿದರು. ಕೆಲವರು ಮನತಣಿಯೇ ನರ್ತಿಸಿದರು.

ಇದಕ್ಕೂ ಮುನ್ನ ಕೋದಂಡರಾಮ ದೇಗುಲದ ಆವರಣದಲ್ಲಿ ನಗರ ಸಂಕೀರ್ತನೆಗೆ ನಗರಸಭೆ ಅಧ್ಯಕ್ಷೆ ಕಲಾವತಿ, ಸಮಾಜ ಸೇವಕ ಕೆ.ಎಂ.ಗಣೇಶ್, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಿಜಿರ ಅಯ್ಯಪ್ಪ, ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಸಂಚಾಲಕ ಮಹೇಶ್ ಕುಮಾರ್, ದಿನೇಶ್ ಕುಮಾರ್, ರಾಜರಾಜೇಶ್ವರಿ ದೇವಾಲಯದ ಧರ್ಮದರ್ಶಿ ಗೋವಿಂದಸ್ವಾಮಿ, ಶ್ರೀಕೋದಂಡರಾಮ ಟ್ರಸ್ಟ್‌ನ ಅಧ್ಯಕ್ಷ ಎಚ್.ಎನ್.ನಂಜುಂಡ ಚಾಲನೆ ನೀಡಿದರು.

25 ತಂಡಗಳು ಭಜನೆಯನ್ನು ಮಾಡುತ್ತ ಕೋದಂಡರಾಮ ದೇವಾಲಯದಿಂದ, ಮುತ್ತಪ್ಪ ದೇವಾಲಯ, ಬನ್ನಿ ಮಂಟಪ, ಮಹದೇವಪೇಟೆ, ಚೌಕಿ, ಹಳೆ ಖಾಸಗಿ ಬಸ್ ನಿಲ್ದಾಣ, ಪೊಲೀಸ್ ಠಾಣೆ, ಜನರಲ್ ತಿಮ್ಮಯ್ಯ ವೃತ್ತ ಬಳಿಕ ಅಲ್ಲಿಂದ ಆಂಜನೇಯ ದೇವಸ್ಥಾನದವರೆಗೆ ಸಾಗಿ ಅಲ್ಲಿಂದ ಓಂಕಾರೇಶ್ವರ ದೇವಾಲಯ ತಲುಪಿದವು.

ಮಡಿಕೇರಿಯ ರಾಮಾಂಜನೇಯ ಭಜನಾ ಮಂಡಳಿ, ಶೃತಿಲಯ ಭಜನ ಮಂಡಳಿ, ವಿಜಯವಿನಾಯಕ ಭಜನಾ ಮಂಡಳಿ, ಕೋದಂಡರಾಮ ಭಜನಾ ಮಂಡಳಿ, ಮುತ್ತಪ್ಪ ಭಜನಾ ಮಂಡಳಿ, ಚೌಡೇಶ್ವರಿ ಭಜನಾ ಮಂಡಳಿ, ಕನ್ನಿಕಾ ಪರನೇಶ್ವರಿ ಭಜನಾ ಮಂಡಳಿ, ವನಚಾಮುಂಡಿ ಭಜನಾ ಮಂಡಳಿ, ಪ್ರಸನ್ನ ಗಣಪತಿ ಭಜನಾ ಮಂಡಳಿ, ವೆಂಕಟೇಶ್ವರ ಕಲಾ ತಂಡ, ಸತ್ಯಸಾಯಿ ಭಜನೆ ಮಂಡಳಿ, ರಾಜರಾಜೇಶ್ವರಿ ಭಜನಾ ಮಂಡಳಿ, ಭಕ್ತಿ ಲಹರಿ ಭಜನಾ ತಂಡ, ಇಸ್ಕಾನ್, 2ನೇ ಮೊಣ್ಣಂಗೇರಿಯ ರಾಜರಾಜೇಶ್ವರಿ ಭಜನಾ ಮಂಡಳಿ, ದೇವರಕೊಲ್ಲಿಯ ಚಾಮುಂಡೇಶ್ವರಿ ಭಜನಾ ಮಂಡಳಿ, ಜೋಡುಪಾಲದ ಶ್ರೀದೇವಿ ಭಜನಾ ಮಂಡಳಿ, ಮದೆನಾಡುವಿನ ಮದೆಮಹೇಶ್ವರ ಭಜನಾ ಮಂಡಳಿ, ತಾಳತ್‌ಮನೆಯ ದುರ್ಗಾಭಗವತಿ ಭಜನಾ ಮಂಡಳಿ, ಕಗ್ಗೋಡ್ಲುವಿನ ಸನಾತನ ಭಜನಾ ಮಂಡಳಿ, ತೋಂಬತ್ತು ಮನೆಯ ವಿನಾಯಕ ಸೇವಾಸಮಿತಿ, ಉಡೋತ್‌ನ ಆದಿಶಕ್ತಿ ವಿನಾಯಕ ಭಜನಾ ಮಂಡಳಿ, ಕತ್ತಲೆಕಾಡುವಿನ ವಿನಾಯಕ ಸೇವಾ ಟ್ರಸ್ಟ್, ಪುಟಾಣಿ ನಗರದ ಉದ್ಭವ ವಿನಾಯಕ ಭಜನಾ ಮಂಡಳಿ, ಮರಗೋಡುವಿನ ಗಣಪತಿ ಭಜನಾ ಮಂಡಳಿಗಳ ಸದಸ್ಯರು ಭಜನಾ ತಂಡಗಳಲ್ಲಿದ್ದರು.

ಮಹಾಶಿವರಾತ್ರಿ ಪ್ರಯುಕ್ತ ವಿವಿಧ ಭಜನಾ ತಂಡಗಳ ಸದಸ್ಯರು ಮಡಿಕೇರಿಯಲ್ಲಿ ನಗರ ಸಂಕೀರ್ತನೆ ನಡೆಸಿದ ಬಳಿಕ ಓಂಕಾರೇಶ್ವರ ದೇಗುಲದ ಆವರಣದಲ್ಲಿ ಭಜನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.