ADVERTISEMENT

ಜಿಲ್ಲೆಗೆ ಅಗತ್ಯವಿದೆ ಪುಸ್ತಕ ಮಳಿಗೆ

ಮಡಿಕೇರಿಯಲ್ಲಿ ನಡೆದ ‘ಕನ್ನಡ ಹಬ್ಬ’ದಲ್ಲಿ ಎಲ್ಲರಿಂದ ಕೇಳಿ ಬಂದ ಕೂಗು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 6:05 IST
Last Updated 7 ನವೆಂಬರ್ 2022, 6:05 IST
ಲಯನ್ಸ್ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಸಮರ್ಥ ಕನ್ನಡಿಗರು ಕೊಡಗು ಘಟಕ ಏರ್ಪಡಿಸಿದ್ದ ‘ನಿಮ್ಮ ಪ್ರತಿಭೆ-ನಮ್ಮ ವೇದಿಕೆ-2022’ ಕನ್ನಡ ಹಬ್ಬದಲ್ಲಿ ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್ ಅವರು ಗಿಡಕ್ಕೆ ನೀರನ್ನೆರೆದರು. ಮುಂಬೈನ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷೆ ಜಯಂತಿ ಸಿ.ರಾವ್, ಸಮರ್ಥ ಕನ್ನಡಿಗ ಸಂಘಟನೆಯ ಸ್ಥಾಪಕ ಅಧ್ಯಕ್ಷ ಡಾ.ಲಿಂಗೇಶ್ ಹುಣಸೂರು, ರೋಟರಿ ಜಿಲ್ಲೆಯ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್, ಕಸಾಪ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಅಂಬೇಕಲ್ ನವೀನ್ ಕುಶಾಲಪ್ಪ, ಸಮರ್ಥ ಕನ್ನಡಿಗರು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮಿ, ಪ್ರಕಾಶಕರಾದ ಲಕ್ಷ್ಮಿ ಕೆ. ಲಿಂಗೇಶ್‌ ಇದ್ದಾರೆ
ಲಯನ್ಸ್ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಸಮರ್ಥ ಕನ್ನಡಿಗರು ಕೊಡಗು ಘಟಕ ಏರ್ಪಡಿಸಿದ್ದ ‘ನಿಮ್ಮ ಪ್ರತಿಭೆ-ನಮ್ಮ ವೇದಿಕೆ-2022’ ಕನ್ನಡ ಹಬ್ಬದಲ್ಲಿ ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್ ಅವರು ಗಿಡಕ್ಕೆ ನೀರನ್ನೆರೆದರು. ಮುಂಬೈನ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷೆ ಜಯಂತಿ ಸಿ.ರಾವ್, ಸಮರ್ಥ ಕನ್ನಡಿಗ ಸಂಘಟನೆಯ ಸ್ಥಾಪಕ ಅಧ್ಯಕ್ಷ ಡಾ.ಲಿಂಗೇಶ್ ಹುಣಸೂರು, ರೋಟರಿ ಜಿಲ್ಲೆಯ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್, ಕಸಾಪ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಅಂಬೇಕಲ್ ನವೀನ್ ಕುಶಾಲಪ್ಪ, ಸಮರ್ಥ ಕನ್ನಡಿಗರು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮಿ, ಪ್ರಕಾಶಕರಾದ ಲಕ್ಷ್ಮಿ ಕೆ. ಲಿಂಗೇಶ್‌ ಇದ್ದಾರೆ   

ಮಡಿಕೇರಿ: ಇಲ್ಲಿನ ಲಯನ್ಸ್ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಸಮರ್ಥ ಕನ್ನಡಿಗರು ಕೊಡಗು ಘಟಕ ಏರ್ಪಡಿಸಿದ್ದ ‘ನಿಮ್ಮ ಪ್ರತಿಭೆ-ನಮ್ಮ ವೇದಿಕೆ-2022’ ಕನ್ನಡ ಹಬ್ಬದಲ್ಲಿ ಕೊಡಗು ಜಿಲ್ಲೆಗೊಂದು ಪುಸ್ತಕ ಮಳಿಗೆ ಬೇಕು ಎಂಬ ಒತ್ತಾಯ ಕೇಳಿ ಬಂತು. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಈ ಕುರಿತ ಹಕ್ಕೋತ್ತಾಯ ಮಂಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲೆಯ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್, ಓದುವ ಸಂಸ್ಕೃತಿ ಬೆಳೆಸಲು ಜಿಲ್ಲೆಯಲ್ಲಿ ಪುಸ್ತಕ ಮಳಿಗೆ ತೆರೆಯುವುದು ಅನಿವಾರ್ಯ. ಈಗ ಓದುವ ಸಂಸ್ಕೃತಿ ಅಳಿಯುತ್ತಿದೆ. ಮೊಬೈಲ್‌ ಗೀಳು ಮಕ್ಕಳಲ್ಲಿ, ಯುವಕರಲ್ಲಿ ಹೆಚ್ಚಾಗಿದೆ. ಓದುವ ಸಂಸ್ಕೃತಿ ಹೆಚ್ಚಿಸಲು ಪುಸ್ತಕ ಮಳಿಗೆಗಳು ಬೇಕಿವೆ ಎಂದು ಪ್ರತಿಪಾದಿಸಿದರು.

ಇಡೀ ರಾಜ್ಯದಲ್ಲೇ ಯೋಗ್ಯವಾದ ಒಂದೇ ಒಂದು ಪುಸ್ತಕ ಮಳಿಗೆ ಇಲ್ಲದ ಜಿಲ್ಲೆ ಎಂದರೆ ಅದು ಕೊಡಗು ಎಂದು ಅವರು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.

ADVERTISEMENT

ಅವರ ಪ್ರಸ್ತಾಪಕ್ಕೆ ಪೂರಕವಾಗಿ ಮಾತನಾಡಿದ ಸಮರ್ಥ ಕನ್ನಡಿಗ ಸಂಘಟನೆಯ ಸ್ಥಾಪಕ ಅಧ್ಯಕ್ಷ ಡಾ.ಲಿಂಗೇಶ್ ಹುಣಸೂರು, ಓದುಗರ ಬೇಡಿಕೆಗೆ ತಕ್ಕಂತೆ ಬೆಂಗಳೂರಿನಿಂದ ಪುಸ್ತಕಗಳನ್ನು ಸಂಸ್ಥೆಯ ಮೂಲಕ ಕೊಡಗಿನ ಓದುಗರಿಗೆ ತಲುಪಿಸುವ ಭರವಸೆ ನೀಡಿದರು.

ಮುಂಬೈನ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷೆ ಜಯಂತಿ ಸಿ.ರಾವ್ ಪ್ರತಿಕ್ರಿಯಿಸಿ, ‘ನನ್ನಲ್ಲಿರುವ ನೂರಾರು ಪುಸ್ತಕಗಳನ್ನು ಕೊಡುಗೆಯಾಗಿ ನೀಡುತ್ತೇನೆ’ ಎಂದರು.

ಇದಕ್ಕೆ ದನಿಗೂಡಿಸಿದ ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ‘ಮಡಿಕೇರಿಯಲ್ಲಿ ಪುಸ್ತಕ ಮಳಿಗೆಗೆ ಸೂಕ್ತ ಕೊಠಡಿ ಒದಗಿಸಲು ಪ್ರಯತ್ನ ಪಡುವುದಾಗಿ’ ಹೇಳಿದರು.

ಚಿಂತಕ ಅರವಿಂದ್ ಅಣ್ಣಪ್ಪ, ತನ್ನ ಮನೆಯಲ್ಲಿರುವ ಸಾಹಿತ್ಯದ ಕೖತಿಗಳನ್ನು ಇಂಥ ಮಳಿಗೆಗೆ ನೀಡುವುದಾಗಿ ತಿಳಿಸಿದರು.

ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಅಭಿಯಾನ ವೇಗ ಪಡೆದಿದೆ’ ಎಂದು ತಿಳಿಸಿದರು.

ಸಮರ್ಥ ಕನ್ನಡಿಗರು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮಿ ಮಾತನಾಡಿ, ‘ಜಿಲ್ಲೆಯ ಪ್ರತಿಭೆಗಳಿಗೆ ವೇದಿಕೆ ಒದಗಿಸಲು ಪ್ರತೀ ವರ್ಷ ಸಂಸ್ಥೆಯು ‘ನಿಮ್ಮ ಪ್ರತಿಭೆ - ನಮ್ಮ ವೇದಿಕೆ’ ಕಾರ್ಯಕ್ರಮವನ್ನು ಏರ್ಪಡಿಸುತ್ತಿದೆ. ಸಂಸ್ಥೆಯ ಸದಸ್ಯೆಯರೇ ಆರ್ಥಿಕ ಸಂಪನ್ಮೂಲ ಹೂಡಿ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಈ ವರ್ಷವೂ ಅತ್ಯಧಿಕ ಸಂಖ್ಯೆಯಲ್ಲಿ ಕಲಾವಿದರು, ಕಲಾತಂಡಗಳು ಪಾಲ್ಗೊಂಡಿರುವುದು ಸಮಾಧಾನ ತಂದಿದೆ’ ಎಂದರು.

ಸಂಸ್ಥೆಯ ಪ್ರಧಾನ ಸಂಚಾಲಕ ಆನಂದ ದೆಗ್ಗನಹಳ್ಳಿ, ಪ್ರಕಾಶಕರಾದ ಲಕ್ಷ್ಮಿ ಕೆ.ಲಿಂಗೇಶ್, ಮುಂಬೈನ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್‌ ಅಧ್ಯಕ್ಷೆ ಜಯಂತಿ ಸಿ.ರಾವ್ ಇದ್ದರು.

ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ಮಕ್ಕಳು, ಯುವಕ, ಯುವತಿಯರು, ಮಹಿಳೆಯರು ಛದ್ಮವೇಷ, ಸಮೂಹಗಾಯನ, ನೖತ್ಯ , ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.