ADVERTISEMENT

ಕಾಫಿ ತೋಟದಲ್ಲಿ ಕಳೆದು ಹೋಗಿದ್ದ ಮಗು ಪತ್ತೆ ಮಾಡಿದ ಶ್ವಾನ; ಪೊಲೀಸರಿಗೇ ಶಾಕ್!

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 13:54 IST
Last Updated 1 ಡಿಸೆಂಬರ್ 2025, 13:54 IST
   

ಮಡಿಕೇರಿ: ಪೊನ್ನಂಪೇಟೆ ತಾಲ್ಲೂಕಿನ ಕೊಂಗಣ ಗ್ರಾಮದ ತೋಟವೊಂದರಲ್ಲಿ‌ ಶನಿವಾರ ಮಧ್ಯಾಹ್ನ ಕಾಣೆಯಾಗಿದ್ದ 2 ವರ್ಷದ ಹೆಣ್ಣು ಮಗುವೊಂದನ್ನು ಶ್ವಾನವೊಂದು ಸುಳಿವು ನೀಡಿ ಭಾನುವಾರ ಪತ್ತೆ ಮಾಡಿದೆ. ಸ್ವಲ್ಪವೂ ಅಳದೇ ರಾತ್ರಿ ಇಡೀ ಒಂದೂವರೆ ಕಿ.ಮೀ ಕ್ರಮಿಸಿದ್ದ ಮಗುವನ್ನು ಕಂಡ ಹೆತ್ತವರು ನಿಟ್ಟುಸಿರು ಬಿಟ್ಟಿದ್ದಾರೆ.

ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯಿಂದ ವಾರದ ಹಿಂದಷ್ಟೇ ಕೊಂಗಣ ಗ್ರಾಮದ ಕೆ.ಕೆ.ಗಣಪತಿ ಅವರ ಕಾಫಿ ತೋಟಕ್ಕೆ ಕೆಲಸಕ್ಕೆಂದು ಜೇನುಕುರುಬ ಸಮುದಾಯಕ್ಕೆ ಸೇರಿದ ಕೆಲವರು ಬಂದಿದ್ದರು. ಶನಿವಾರ ಬೆಳಿಗ್ಗೆಯಿಂದ ಕೆಲಸ ಮಾಡಿದ್ದ ಅವರು ಮಧ್ಯಾಹ್ನ ತೋಟದಲ್ಲಿ ನೆಟ್‌ವರ್ಕ್‌ ಸಿಗುತ್ತಿದ್ದ ಪ್ರದೇಶದಲ್ಲಿ ಮೊಬೈಲ್‌ ನೋಡುತ್ತಾ ಕುಳಿತಿದ್ದರು. ಈ ವೇಳೆ 2 ವರ್ಷದ ಮಗು ಶೌಚಕ್ಕೆಂದು ಕಾಫಿಗಿಡಗಳ ಮಧ್ಯೆ ತೆರಳಿದೆ. ಆದರೆ, ವಾಪಸ್ ಬರಲು ದಾರಿ ಗೊತ್ತಾಗದೇ ಮಗು ತೋಟದೊಳಗೆ ನಡೆಯುತ್ತಾ ಸಾಗಿದೆ. ಸಾಕಷ್ಟು ಹೊತ್ತಾದರೂ ಮಗು ಮರಳದೆ ಇದ್ದುದ್ದರಿಂದ ಆತಂಕಗೊಂಡ ಕೆಲಸಗಾರರು ಹುಲಿ ಕೊಂದಿರಬಹುದು ಎಂದು ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಪೊಲೀಸರಿಗೂ ದೂರು ನೀಡಿದ್ದಾರೆ.

ಅರಣ್ಯ ಇಲಾಖೆಯ 40ಕ್ಕೂ ಹೆಚ್ಚು ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರೂ ಸೇರಿದಂತೆ 70ರಿಂದ 80 ಮಂದಿ ನಿರಂತರವಾಗಿ ಹುಡುಕಾಟ ನಡೆಸಿದರೂ ಮಗುವಿನ ಸುಳಿವು ಪತ್ತೆಯಾಗಿರಲಿಲ್ಲ.

ADVERTISEMENT

ಮರುದಿನ ಭಾನುವಾರ ಸುಮಾರು ಒಂದೂವರೆ ಕಿ.ಮೀ ದೂರದಲ್ಲಿದ್ದ ಅನಿಲ್ ಎಂಬುವವರ ತೋಟದಲ್ಲಿ ಅವರು ಸಾಕಿದ್ದ ‘ಓರಿಯೋ’ ಹೆಸರಿನ ಸಾಕುನಾಯಿಯೊಂದು ಎತ್ತರದ ಪ್ರದೇಶದಲ್ಲಿ ಕಾಫಿ ಗಿಡಗಳ ಮಧ್ಯೆ ಇದ್ದ ಮಗುವನ್ನು ಕಂಡು ಬೊಗಳಿದೆ. ನಂತರ ಅನಿಲ್ ಹಾಗೂ ಸ್ಥಳೀಯರು ಮಗವನ್ನು ರಕ್ಷಿಸಿ ಪೋಷಕರಿಗೆ ತಲುಪಿಸಿದ್ದಾರೆ.

ಮಗು ಸ್ವಲ್ಪವೂ ಅಳದೆ ಇದ್ದುದ್ದರಿಂದ ಹುಡುಕಾಟ ನಡೆಸುವುದು ಕಷ್ಟಕರವಾಗಿತ್ತು. ಒಂದು ವೇಳೆ ಮಗು ಅತ್ತಿದ್ದರೆ ಬೇಗನೇ ಸಿಗುವ ಸಾಧ್ಯತೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.