ADVERTISEMENT

ಕೊಡಗು ಜಿಲ್ಲೆಯಲ್ಲಿ ಕೆರೆಗೆ ಬಿದ್ದ ಕಾಡಾನೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 14:09 IST
Last Updated 3 ಜೂನ್ 2023, 14:09 IST
   

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕರಡ ಗ್ರಾಮದ ಕೆರೆಯೊಂದರಲ್ಲಿ ಬಿದ್ದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ರಕ್ಷಿಸಿದ್ದಾರೆ.

ಇಲ್ಲಿನ ಎಸ್ಟೇಟ್‌ವೊಂದರಲ್ಲಿದ್ದ ಕೆರೆಗೆ ನೀರು ಕುಡಿಯಲು ಬಂದ ಸುಮಾರು 25 ವರ್ಷ ವಯಸ್ಸಿನ ಕಾಡಾನೆ ಕೆರೆಗೆ ಜಾರಿ ಬಿದ್ದು ದಡಕ್ಕೆ ಬರಲಾಗದೇ ಪರಿತಪಿಸುತ್ತಿತ್ತು. ಇದನ್ನು ಗಮನಿಸಿದ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು.

ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಮೂಲಕ ಹೊರ ಬರಲು ಆನೆಗೆ ದಾರಿ ಮಾಡಿದರು. ನಂತರ, ಆನೆಯು ಕೆರೆಯಿಂದ ಹೊರಕ್ಕೆ ಬಂದಿತು. ಗಾಬರಿಯಿಂದ ಓಡುವಾಗ ನಿಲ್ಲಿಸಿದ್ದ ಜೀಪಿನ ಮೇಲೆ ಆನೆ ದಾಳಿ ನಡೆಸಿದೆ. ಇದರಿಂದ ವಾಹನಕ್ಕೆ ಅಲ್ಪಪ್ರಮಾಣದ ಹಾನಿಯಾಗಿದೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಸಿಎಫ್ ಶರಣ ಬಸಪ್ಪ, ‘ಅರಣ್ಯ ಇಲಾಖೆಯ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆನೆಯನ್ನು ರಕ್ಷಿಸಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.