ADVERTISEMENT

ಕೊಡಗು | ಸದ್ದಿಲ್ಲದೇ ಸೇವೆ ಸಲ್ಲಿಸುತ್ತಿದೆ ರೆಡ್‌ಕ್ರಾಸ್ ಸಂಸ್ಥೆ

ಕೆ.ಎಸ್.ಗಿರೀಶ್
Published 13 ಸೆಪ್ಟೆಂಬರ್ 2025, 5:56 IST
Last Updated 13 ಸೆಪ್ಟೆಂಬರ್ 2025, 5:56 IST
<div class="paragraphs"><p>ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಈಚೆಗೆ ನೀಡಲಾದ ಪ್ರಥಮಚಿಕಿತ್ಸೆಯ ಪ್ರಾತ್ಯಕ್ಷಿಕೆ.</p></div>

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಈಚೆಗೆ ನೀಡಲಾದ ಪ್ರಥಮಚಿಕಿತ್ಸೆಯ ಪ್ರಾತ್ಯಕ್ಷಿಕೆ.

   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರಥಮ ಚಿಕಿತ್ಸಾ ಶಿಬಿರಗಳು ಆಯೋಜನೆಗೊಳ್ಳುತ್ತಿದ್ದರೂ ಅದು ಇನ್ನಷ್ಟು ಹೆಚ್ಚಬೇಕಿದೆ. ಈ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಭಾರತೀಯ ರೆಡ್‌ಕ್ರಾಸ್‌ ಕೊಡಗು ಘಟಕವು ಈ ವರ್ಷ ಹೃದಯಾಘಾತ ಅಥವಾ ಹೃದಯಸ್ತಂಭನವಾದಾಗ ನೀಡಲಾಗುವ ಕಾರ್ಡಿಯೊ ಪಲ್ಮನರಿ ರಿಸಸಿಟೇಶನ್ (ಸಿಪಿಆರ್‌) ಶಿಬಿರವನ್ನು ಹೆಚ್ಚು ಹೆಚ್ಚು ಏರ್ಪಡಿಸಲು ನಿರ್ಧರಿಸಿದೆ.

ಅತ್ಯಂತ ಹೆಚ್ಚು ಪ್ರವಾಸಿಗರು ಭೇಟಿ ಕೊಡುವ ಕೊಡಗು ಜಿಲ್ಲೆಯಲ್ಲಿ ಪ್ರಥಮ ಚಿಕಿತ್ಸಾ ಶಿಬಿರಗಳು ನಿರೀಕ್ಷೆ ಹಾಗೂ ಅಗತ್ಯಕ್ಕೆ ತಕ್ಕಂತೆ ನಡೆಯುತ್ತಿಲ್ಲ. ಮುಖ್ಯವಾಗಿ, ಇಲ್ಲಿ ಪ್ರವಾಸಿಗರು ತಂಗುವ ಹೋಟೆಲ್‌ಗಳು, ರೆಸಾರ್ಟ್‌ಗಳು ಹಾಗೂ ಹೋಂಸ್ಟೇಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಪ್ರಥಮ ಚಿಕಿತ್ಸೆಯ ಅರಿವು ಇರಲೇಬೇಕು. ಇದನ್ನು ಪ್ರಾಥಮಿಕ ಆದ್ಯತೆಯನ್ನಾಗಿ ಪರಿಗಣಿಸಿ ಪ್ರವಾಸೋದ್ಯಮ ವಲಯದಲ್ಲಿ ಕಾರ್ಯನಿರ್ವಹಿಸುವವರಿಗೆ ತರಬೇತಿ ನೀಡಬೇಕಿದೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಕೊಡಗು ಜಿಲ್ಲಾ ಸಭಾಪತಿ ರವೀಂದ್ರ ರೈ, ‘ಈ ವರ್ಷ ಹೃದಯಾಘಾತ ಅಥವಾ ಹೃದಯಸ್ತಂಭನವಾದಾಗ ನೀಡಲಾಗುವ ಪ್ರಥಮ ಚಿಕಿತ್ಸೆ ಕಾರ್ಡಿಯೊ ಪಲ್ಮನರಿ ರಿಸಸಿಟೇಶನ್ (ಸಿಪಿಆರ್‌) ಕುರಿತು ಹೆಚ್ಚಿನ ಶಿಬಿರ ಏರ್ಪಡಿಸಲು ಚಿಂತಿಸಲಾಗಿದೆ. ಕೊಡಗು ವಿಶ್ವವಿದ್ಯಾಲಯ ವ್ಯಾಪ್ತಿಯ ಬಹುತೇಕ ಕಾಲೇಜುಗಳಲ್ಲಿ ಶಿಬಿರ ಆಯೋಜಿಸಲಾಗುವುದು’ ಎಂದು ಹೇಳಿದರು.

ಮಡಿಕೇರಿಯಲ್ಲಿ ರೆಡ್‌ಕ್ರಾಸ್‌ನ ಜಿಲ್ಲಾ ಕೇಂದ್ರವಿದ್ದರೆ, ಕುಶಾಲನಗರ ಮತ್ತು ಪೊನ್ನಂಪೇಟೆಗಳಲ್ಲಿ ತಾಲ್ಲೂಕು ಶಾಖೆಗಳಿವೆ. ಈಚೆಗಷ್ಟೇ ಪೊನ್ನಂಪೇಟೆ ಶಾಖೆ ಆರಂಭಗೊಂಡದ. ಇನ್ನು ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕುಗಳಲ್ಲಿ
ಶಾಖೆಗಳನ್ನು ತೆರೆಯಬೇಕಿದೆ.

2023ರಲ್ಲಿ ರಾಜ್ಯದಲ್ಲೇ ಅತ್ಯುತ್ತಮ ಕಾರ್ಯನಿರ್ವಹಿಸುತ್ತಿರುವ ರೆಡ್‌ಕ್ರಾಸ್ ಘಟಕ ಎಂಬ ಪ್ರಶಸ್ತಿಯನ್ನು ರಾಜ್ಯಪಾಲರಿಂದ ಕೊಡಗು ಜಿಲ್ಲಾ ರೆಡ್‌ಕ್ರಾಸ್‌ ಘಟಕ ಪಡೆಯುವ ಮೂಲಕ ರಾಜ್ಯದ ಗಮನ ಸೆಳೆದಿತ್ತು.

ಕೇವಲ ರೆಡ್‌ಕ್ರಾಸ್‌ ಮಾತ್ರವಲ್ಲ ಕೊಡಗು ಜಿಲ್ಲೆಯಲ್ಲಿರುವ ಇತರ ಸಂಘ, ಸಂಸ್ಥೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ಪ್ರಥಮ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸುವ ಕಡೆಗೆ ಗಮನ ಕೊಡಬೇಕಿದೆ. ವಿಶೇಷವಾಗಿ, ವಿದ್ಯಾರ್ಥಿಗಳಿಗೆ ಬಾಲ್ಯದಲ್ಲೇ ಸೂಕ್ತ ತರಬೇತಿ ನೀಡಿದರೆ ಹಲವು ಅಮೂಲ್ಯ ಜೀವಗಳನ್ನು ಉಳಿಸಬಹುದು ಎಂದು ವೈದ್ಯರು ಹೇಳುತ್ತಾರೆ.

‌‘ಹೃದಯಘಾತವಾದಾಗ, ಹೃದಯ ಸ್ತಂಭನವಾದಾಗ ತಕ್ಷಣ ನೀಡುವಂತಹ ಕಾರ್ಡಿಯೊ ಪಲ್ಮನರಿ ರಿಸಸಿಟೇಶನ್ (ಸಿಪಿಆರ್‌) ಚಿಕಿತ್ಸೆಯ ಜೊತೆಗೆ ಎಲ್ಲ ಬಗೆಯ ಪ್ರಥಮ ಚಿಕಿತ್ಸೆಯ ಅರಿವು ಎಲ್ಲರಿಗೂ ಇರಬೇಕು. ಏನೇ ಅವಘಡ ಸಂಭವಿಸಿದರೂ ಮೊದಲು ಪ್ರಥಮ ಚಿಕಿತ್ಸೆ ನೀಡಿದರೆ ಸಾವಿನ ಪ್ರಮಾಣ ಕಡಿಮೆ ಮಾಡಬಹುದು’ ಎಂದು ವೈದ್ಯರು ಹೇಳುತ್ತಾರೆ.

100ಕ್ಕೂ ತರಬೇತಿ ನೀಡಿರುವ ಡಾ.ರಾಮಚಂದ್ರ ಕಾಮತ್

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್ ಅವರು ರಾಜ್ಯದ ವಿವಿಧೆಡೆ ಸುಮಾರು 100ಕ್ಕೂ ಅಧಿಕ ಪ್ರಥಮ ಚಿಕಿತ್ಸಾ ಶಿಬಿರಗಳಲ್ಲಿ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಇನ್ನಷ್ಟು ತರಬೇತಿ ನೀಡಲು ಸಿದ್ಧನಿರುವೆ ಎಂದು ಅವರು ಹೇಳುತ್ತಾರೆ.

ರವೀಂದ್ರ ರೈ
ರಾಮಚಂದ್ರ ಕಾಮತ್
ಈ ವರ್ಷ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರಥಮ ಚಿಕಿತ್ಸಾ ಶಿಬಿರ ಆಯೋಜಿಸಲಾಗುವುದು. ‘ಸಿಪಿಆರ್‌’ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ರವೀಂದ್ರ ರೈ ಭಾರತೀಯ ರೆಡ್‌ಕ್ರಾಸ್‌ನ ಕೊಡಗು ಜಿಲ್ಲಾ ಸಭಾಪತಿ.

ಉತ್ಸವಗಳಲ್ಲಿ ಪ್ರಥಮ ಚಿಕಿತ್ಸಾ ತಂಡ ಇರಲೇಬೇಕು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್ ಮಾತನಾಡಿ ‘ಉತ್ಸವಗಳು ಮಹೋತ್ಸವಗಳು ಸಮಾವೇಶಗಳು ನಡೆಯುವ ಕಡೆ ಪ್ರಥಮ ಚಿಕಿತ್ಸಾ ತಂಡ ಇರಲೇಬೇಕು. ಹೆಚ್ಚು ಜನರು ಸೇರುವ ಕಡೆ ಯಾರಿಗೆ ಏನೇ ಆದರೂ ಅವರಿಗೆ ಪ್ರಥಮ ಚಿಕಿತ್ಸೆ ನೀಡಬೇಕಿದೆ. ಹಾಗಾಗಿ ಇದನ್ನು ಜರೂರು ಎಂದು ಪರಿಗಣಿಸಬೇಕು’ ಎಂದು ಹೇಳುತ್ತಾರೆ. ಉಳಿದಂತೆ ಹೋಟೆಲ್‌ಗಳು ರೆಸಾರ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಿಗೆ ಶಾಲಾ ಮತ್ತು ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಪೊಲೀಸರು ಮತ್ತು ಚಾಲಕರಿಗೆ ಪ್ರಥಮ ಚಿಕಿತ್ಸಾ ತರಬೇತಿ ನೀಡಬೇಕಿದೆ. ಪಠ್ಯಕ್ಕಿಂತ ಪ್ರಾಯೋಗಿಕ ತರಬೇತಿ ಮುಖ್ಯ. ಪ್ರಾತ್ಯಕ್ಷಿಕೆಗಳ ಮೂಲಕ ಅವರಿಗೆಲ್ಲ ಅರಿವು ಮೂಡಿಸಬೇಕಿದೆ ಎಂದರು. ಮಾತ್ರವಲ್ಲ  ಪ್ರಥಮ ಚಿಕಿತ್ಸಾ ಕಿಟ್‌ಗಳು ವಾಹನ ಶಾಲಾ ಕಾಲೇಜುಗಳಲ್ಲಿ ಮನೆಗಳಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಇರಲೇಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.