
ಮಡಿಕೇರಿ: ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಮತ್ತು ತಂಡದ ಸದಸ್ಯರು ನಗರದ ನ್ಯಾಯಬೆಲೆ ಅಂಗಡಿ, ಆಹಾರ ಧಾನ್ಯ ಸಗಟು ಮಳಿಗೆ, ಅಂಗನವಾಡಿ ಕೇಂದ್ರ, ಮಧ್ಯಾಹ್ನದ ಉಪಾಹಾರ ಯೋಜನೆ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿರುವ ಎನ್‍ಆರ್‌ಸಿ ಘಟಕ ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಗುರುವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.
ರಾಜ್ಯ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾವ್, ಮಾರುತಿ ಎಂ.ದೊಡ್ಡಲಿಂಗನವರ್, ಎ.ರೋಹಿಣಿ ಪ್ರಿಯಾ, ಕೆ.ಎಸ್.ವಿಜಯಲಕ್ಷ್ಮಿ ಹಾಗೂ ಸದಸ್ಯ ಕಾರ್ಯದರ್ಶಿ ಸುಜಾತ ಡಿ. ಹೊಸಮನಿ ಅವರು ಪರಿಶೀಲನಾ ತಂಡದಲ್ಲಿದ್ದರು.
ಮೊದಲಿಗೆ ನಗರದ ಜನತಾ ಬಜಾರ್ ಸಂಖ್ಯೆ 59ಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆಹಾರ ದಾಸ್ತಾನುವಿನಲ್ಲಿ ವ್ಯತ್ಯಾಸ, ಜಾಗೃತಿ ನಾಮಫಲಕ ಪ್ರದರ್ಶನ ಹಾಗೂ ತೂಕ ನವೀಕರಣ ಪತ್ರ ಇಲ್ಲದಿರುವುದು ಸೇರಿದಂತೆ ಹಲವು ನ್ಯೂನತೆಗಳನ್ನು ಕಂಡುಬಂದಿದ್ದು, ಸಂಬಂಧಪಟ್ಟವರನ್ನು ಅಮಾನತು ಮಾಡುವಂತೆ ಆಹಾರ ಆಯೋಗದ ಅಧ್ಯಕ್ಷ ಕೃಷ್ಣ ಅವರು ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಸ್ಥಳದಲ್ಲಿಯೇ ಸೂಚಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಭೋದಕ ಆಸ್ಪತ್ರೆಯ ಅಡುಗೆ ಕೋಣೆಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಜಿಲ್ಲಾಸ್ಪತ್ರೆ ಎನ್‍ಆರ್‌ಸಿ ಘಟಕಕ್ಕೆ ಭೇಟಿ ನೀಡಿ ಕಡತ ನಿರ್ವಹಣೆ ಪರಿಶೀಲಿಸಿದ ಅವರು ಸಮರ್ಪಕ ನಿರ್ವಹಣೆ ಮಾಡದಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಗುಣಮಟ್ಟದ ಹಾಗೂ ಪೌಷ್ಟಿಕ ಆಹಾರ ವಿತರಿಸಬೇಕು. ಯಾವುದೇ ಕಾರಣಕ್ಕೂ ಮುಲಾಜಿಗೆ ಒಳಗಾಗಬಾರದು ಎಂದು ತಾಕೀತು ಮಾಡಿದರು.
ಸರ್ಕಾರಿ ಆಸ್ಪತ್ರೆಯನ್ನು ನಂಬಿ ಹಲವು ಬಡ ಕುಟುಂಬಗಳು ಚಿಕಿತ್ಸೆಗೆ ದಾಖಲಾಗುತ್ತಾರೆ. ಅವರಿಗೆ ಸರಿಯಾದ ಊಟೋಪಚಾರ ಮತ್ತು ವೈದ್ಯಕೀಯ ಚಿಕಿತ್ಸೆ ನೀಡುವುದು ಕರ್ತವ್ಯವಾಗಿದೆ ಎಂದು ಹೇಳಿದರು.
ಬಳಿಕ ದಾಸವಾಳ ಬಳಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಅವರು ಅಲ್ಲಿನ ಮಕ್ಕಳ ಹಾಜರಾತಿ, ತಾಯಿ ಕಾರ್ಡು ವಿತರಣೆ, ಗರ್ಭಿಣೀಯರು ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ಪೂರೈಕೆ, ಮೊಟ್ಟೆ, ಖಾರದಪುಡಿ, ಹೆಸರು ಕಾಳು, ಸಕ್ಕರೆ, ಅಕ್ಕಿ, ಗೋಧಿ ವಿತರಣೆ ಬಗ್ಗೆ ಸಂಬಂಧಪಟ್ಟವರಿಗೆ ಮೊಬೈಲ್ ಫೋನ್ ಮೂಲಕ ಕರೆ ಮಾಡಿ ಖಾತರಿಪಡಿಸಿಕೊಂಡರು.
ನಂತರ ನಗರದ ರೈತ ಸಂಪರ್ಕ ಕೇಂದ್ರ ಹಾಗೂ ಕೀಟನಾಟಕ ಔಷಧಿ ದಾಸ್ತಾನು ಮಳಿಗೆ ವೀಕ್ಷಿಸಿದ ಅಧ್ಯಕ್ಷರು ಮತ್ತು ತಂಡದವರು ಕೀಟನಾಶಕ ಔಷಧಿ ವಿತರಣೆ ಬಗ್ಗೆ ಪರಿಶೀಲಿಸಿ, ಮಾಹಿತಿ ಪಡೆದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಂಕಿತಾಧಿಕಾರಿ ಡಾ.ಅನಿಲ್ ಧಾವನ್ ಹಾಗೂ ಆಹಾರ ಇಲಾಖೆಯ ಉಪ ನಿರ್ದೇಶಕ ಭೀಮರಾಯ ಕಲ್ಲೂರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಸನ್ನ ಕುಮಾರ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಎ.ಜೆ.ಲೋಕೇಶ್, ಡಾ.ನಂಜುಂಡಯ್ಯ, ಡಾ.ಸೋಮಶೇಖರ್, ಡಾ.ಅಭಿನಂದನ್, ಡಾ.ಪುರುಷೋತ್ತಮ, ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಭಾಗವಹಿಸಿದ್ದರು.
ರಾಜ್ಯ ಆಹಾರ ಆಯೋಗದ ಸದಸ್ಯರ ತಂಡವು ಸೋಮವಾರಪೇಟೆ, ವಿರಾಜಪೇಟೆ, ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲ್ಲೂಕುಗಳಿಗೆ ಭೇಟಿ ಪರಿಶೀಲಿಸಿ, ಮಾಹಿತಿ ಪಡೆದರು.
ಬಿಸಿಯೂಟ ಯೋಜನೆ ಕುರಿತು ಮಾಹಿತಿ ಪಡೆದ ತಂಡದ ಸದಸ್ಯರು ಹಲವೆಡೆ ಆಹಾರದ ಗುಣಮಟ್ಟ ಪರಿಶೀಲನೆ ಲೋಪ ಕಂಡು ಬಂದಲ್ಲಿ ಶಿಸ್ತುಕ್ರಮ ಕೈಗೊಳ್ಳಲು ಸೂಚನೆ
ಸರ್ಕಾರದ ಯೋಜನೆ ವಿದ್ಯಾರ್ಥಿಗಳಿಗೆ ತಲುಪಲಿ’ ಮೊಟ್ಟೆ ಹೆಸರು ಕಾಳು ಸಕ್ಕರೆ ಅಕ್ಕಿ ಗೋದಿ ಮತ್ತಿತರ ಪೌಷ್ಟಿಕ ಆಹಾರ ವಿತರಿಸುತ್ತಿದ್ದಾರೆ ಎಂದು ಗರ್ಭಿಣಿಯೊಬ್ಬರು ಪ್ರತಿಕ್ರಿಯಿಸಿದರು. ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು ಮಧ್ಯಾಹ್ನದ ಬಿಸಿಯೂಟ ಯೋಜನೆ ಸಂಬಂಧಿಸಿದಂತೆ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಮತ್ತು ತಂಡದ ಸದಸ್ಯರು ಮಾಹಿತಿ ಪಡೆದರು. ಸರ್ಕಾರ ಮಧ್ಯಾಹ್ನದ ಬಿಸಿಯೂಟಕ್ಕಾಗಿ ಸಾಕಷ್ಟು ಹಣ ನೀಡುತ್ತಿದೆ. ಬಡ ಮಕ್ಕಳಿಗೆ ಸದ್ಬಳಕೆಯಾಗಬೇಕು. ಪೌಷ್ಟಿಕ ಆಹಾರದ ಜೊತೆಗೆ ವಿದ್ಯಾರ್ಜನೆಗೆ ಕಡೆಗೆ ಮಕ್ಕಳು ಗಮನ ನೀಡಬೇಕು. ಸರ್ಕಾರ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುತ್ತಿದ್ದು ಸರ್ಕಾರದ ಯೋಜನೆಗಳು ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ತಲುಪಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.