ADVERTISEMENT

ಸುಂಟಿಕೊಪ್ಪ: ಕಾಡಾನೆ ದಾಳಿ, ಅರಣ್ಯ ಇಲಾಖೆ ಸಿಬ್ಬಂದಿ ಸಾವು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2023, 13:16 IST
Last Updated 4 ಸೆಪ್ಟೆಂಬರ್ 2023, 13:16 IST
<div class="paragraphs"><p>ದಾಳಿ ನಡೆಸು‌ತ್ತಿರುವ ಕಾಡಾನೆ</p></div>

ದಾಳಿ ನಡೆಸು‌ತ್ತಿರುವ ಕಾಡಾನೆ

   

ಸುಂಟಿಕೊಪ್ಪ (ಕೊಡಗು ಜಿಲ್ಲೆ): ಜನರು ಮತ್ತು ವಾಹನಗಳ ಮೇಲೆ ನಿರಂತರವಾಗಿ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದ ಕಾಡಾನೆಯೊಂದನ್ನು ಕಾಡಿಗಟ್ಟುವ ವೇಳೆ ಆನೆ ದಾಳಿಗೆ ಸಿಲುಕಿ ಅರಣ್ಯ ಇಲಾಖೆಯ ಸಿಬ್ಬಂದಿ ಗಿರೀಶ್ (35) ಸೋಮವಾರ ಮೃತಪಟ್ಟರು.

ಕಳೆದ ಹಲವು ದಿನಗಳಿಂದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆದಕಲ್, ‘ಡಿ’ ಬ್ಲಾಕ್, ಕಾರೆಕೊಲ್ಲಿ ಸೇರಿದಂತೆ ಇತರೆಡೆ ಒಂಟಿಸಲಗವೊಂದು ಉಪಟಳ ನೀಡುತ್ತಿತ್ತು. ಸೋಮವಾರ ಬೆಳಿಗ್ಗೆಯಿಂದಲೇ ದಾಳಿ ಆರಂಭಿಸಿತ್ತು. ‘ಡಿ’ ಬ್ಲಾಕ್‌ಗೆ ಕೆಲಸಕ್ಕಾಗಿ ತೆರಳುತ್ತಿದ್ದ ಮುರುಗೇಶ್ ಅವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತು. ನಂತರ, ಹೊರೊರು ಗ್ರಾಮದ ನಿವಾಸಿ ಮಹೇಶ್ ಎಂಬುವವರ ಮೇಲೆ ದಾಳಿ ಮಾಡಲು ಮುಂದಾದಾಗ ಅವರು ಬೈಕ್‌ ಬಿಟ್ಟು ಕಾಡಿನೊಳಗೆ ಓಡಿ ತಪ್ಪಿಸಿಕೊಂಡರು. ಆನೆಯು ಬೈಕನ್ನು ತುಳಿದು, ಸಮೀಪದ ದೇವರಕಾಡಿನೊಳಗೆ ನುಗ್ಗಿತು.

ADVERTISEMENT

ವಿಷಯ ತಿಳಿದು ಸ್ಥಳಕ್ಕೆ ಬಂದ ಆನೆ ಕಾರ್ಯಪಡೆಯ 30 ಸಿಬ್ಬಂದಿ, ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ಆರಂಭಿಸಿದರು. ಅವರ ಮೇಲೂ ದಾಳಿ ನಡೆಸಿದ ಆನೆಯು ಗಿರೀಶ್‌ ಅವರನ್ನು ತೀವ್ರವಾಗಿ ಗಾಯಗೊಳಿಸಿತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಆನೆ ಕಾರ್ಯಪಡೆ ಡಿಸಿಎಫ್ ಪೂವಯ್ಯ ತಿಳಿಸಿದರು.

ಈ ಆನೆಯು ಕೆದಕಲ್ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದು, ಆ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.