ವಿರಾಜಪೇಟೆ: ಪಟ್ಟಣದ ಗಡಿಭಾಗದ ಗ್ರಾಮ ಐಮಂಗಲದಲ್ಲಿ ಕಾಡಾನೆಗಳು ಭತ್ತದ ಗದ್ದೆ ಹಾಗೂ ಕಾಫಿ ತೋಟದಲ್ಲಿ ದಾಂಧಲೆ ನಡೆಸಿದ ಪರಿಣಾಮ ಸಾಕಷ್ಟು ಫಸಲು ನಷ್ಟವಾಗಿದೆ.
ಸಮೀಪದ ಚೆಂಬೆಬೆಳ್ಳೂರು ಪಂಚಾಯತಿ ವ್ಯಾಪ್ತಿಯ ಈ ಗ್ರಾಮದ ಕುಂಡ್ರಂಡ ಮತ್ತು ಬೊಳ್ಳಚಂಡ ಕುಟುಂಬಗಳಿಗೆ ಸೇರಿದ ಗದ್ದೆ, ತೋಟಗಳಲ್ಲಿ ದಾಂಧಲೆ ನಡೆಸಿವೆ. ಗದ್ದೆಯಲ್ಲಿ ನಾಟಿ ಮಾಡಲು ಬೆಳೆಸಿದ್ದ ಭತ್ತದ ಪೈರು ಕಾಡಾನೆ ದಾಳಿಯಿಂದ ನಾಶವಾಗಿದೆ.
ಈ ಕುರಿತು ಮಾತನಾಡಿದ ಗ್ರಾಮಸ್ಥ ಕುಂಡ್ರಂಡ ಮುದ್ದಯ್ಯ,‘ಸಮೀಪದ ಮಲೆತಿರಿಕೆ ಬೆಟ್ಟದ ತಪ್ಪಲಿನ ಮತ್ತು ಬೆಟ್ಟಕ್ಕೆ ಹೊಂದಿಕೊಂಡಿರುವ ತೋಟಗಳಲ್ಲಿ ಕೆಲವು ತಿಂಗಳಿಂದ ಕಾಡಾನೆ ಬೀಡು ಬಿಟ್ಟಿವೆ. ಇವು ಮುಂಜಾನೆ ಬೆಟ್ಟದಿಂದ ಇಳಿದು ಸಂಜೆ ವೇಳೆಗೆ ಬೆಟ್ಟಕ್ಕೆ ಮರಳುತ್ತವೆ. ಮರಿ ಸಹಿತ ಮೂರು ಕಾಡಾನೆಗಳು ಗುಂಪಿನಲ್ಲಿವೆ. ಆನೆ ಇದ್ದರೆ ತೋಟಕ್ಕೆ ಮಾಲೀಕರಾಗಲಿ ಕಾರ್ಮಿಕರಾಗಲಿ ತೆರಳಲು ಸಾಧ್ಯವಾಗುತ್ತಿಲ್ಲ ಎಂದರು.
ತೋಟದ ಮಾಲೀಕ ಬೊಳ್ಳಚಂಡ ಪ್ರಕಾಶ್ ಮಾತನಾಡಿ,‘ಗ್ರಾಮದಲ್ಲಿ ಕಾಡಾನೆ ಹಾವಳಿಯಿಂದ ನಾಟಿಗೆ ಸಿದ್ಧವಾಗಿದ್ದ ಭತ್ತದ ಪೈರು ನಾಶವಾಗಿದೆ. ಗದ್ದೆಗಳನ್ನು ನಂಬಿ ಜೀವನ ಸಾಗಿಸುವ ರೈತರು ಆನೆ ಹಾವಳಿಯಿಂದ ಪಾಳು ಬಿಡುವಂತಾಗಿದೆ. ಕೇವಲ ಬೆರಳೆಣಿಕೆಯಷ್ಟು ರೈತರು ಗದ್ದೆ ಕೃಷಿ ಕೈಗೊಂಡಿದ್ದಾರೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರೆಲ್ಲಾ ಗದ್ದೆ ಪಾಳು ಬಿಡುವ ಸ್ಥಿತಿ ನಿರ್ಮಾಣವಾಗಲಿದೆ. ಕಾಡಾನೆ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಸರ್ಕಾರಗಳು ಕೂಡ ರೈತರು ಅನುಭವಿಸುತ್ತಿರುವ ಬವಣೆ ಕಂಡು ಕಾಣದಂತೆ ವರ್ತಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಾಂಧಲೆ ನಡೆಸಿದ ಸ್ಥಳಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸೋಮವಾರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ಇಲಾಖೆ ಶೀಘ್ರದಲ್ಲಿ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.