ADVERTISEMENT

ಸೋಮವಾರಪೇಟೆ | ಶುಂಠಿಗೆ ಕೊಳೆ ರೋಗ: ಸಂಕಷ್ಟದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 3:46 IST
Last Updated 1 ಸೆಪ್ಟೆಂಬರ್ 2025, 3:46 IST
<div class="paragraphs"><p>ಸೋಮವಾರಪೇಟೆ ತಾಲ್ಲೂಕಿನ ಗಾರ್ವಾಲೆ ಗ್ರಾಮದಲ್ಲಿ ಶುಂಟಿ ಬೆಳೆಗೆ ಕೊಳೆರೋಗ ಬಾಧಿಸಿರುವುದು</p></div>

ಸೋಮವಾರಪೇಟೆ ತಾಲ್ಲೂಕಿನ ಗಾರ್ವಾಲೆ ಗ್ರಾಮದಲ್ಲಿ ಶುಂಟಿ ಬೆಳೆಗೆ ಕೊಳೆರೋಗ ಬಾಧಿಸಿರುವುದು

   

ಸೋಮವಾರಪೇಟೆ: ಕಳೆದ 2 ವರ್ಷಗಳ ಹಿಂದೆ ಶುಂಠಿ ಬೆಳೆಗೆ ಸಿಕ್ಕಿದ್ದ ಬೆಲೆಯಿಂದ ಆಕರ್ಷಿತರಾದ ಬೆಳೆಗಾರರು ಎಲ್ಲೆಡೆ ಕೃಷಿ ಮಾಡಲು ಮುಂದಾಗಿದ್ದಾರೆ. ಆದರೆ, ಈ ಬಾರಿ ಬೆಳೆಗೆ ರೋಗ ಮತ್ತು ಹವಾಮಾನ ವೈಪರೀತ್ಯದಿಂದಾಗಿ ನಷ್ಟಕ್ಕೆ ಒಳಗಾಗಿದ್ದಾರೆ.

ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹತ್ತಾರು ರೈತರು ಒಂದೆರಡು ಎಕರೆಯಂತೆ ಶುಂಠಿ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಈ ಬಾರಿಯೂ ಸಾಕಷ್ಟು ಮಳೆಯಾಗಿದ್ದು, ಮೇ ತಿಂಗಳಿನಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಶೀತದ ಪ್ರಮಾಣ ಹೆಚ್ಚಾಗಿದೆ. ಇಂದರಿಂದಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೆಡೆ ಕೊಳೆರೋಗ ಬಂದಿದ್ದು, ಬೆಳೆ ನಷ್ಟವಾಗಿದೆ. ಇದರೊಂದಿಗೆ ಕಾಫಿ ತೋಟದಲ್ಲಿ ಬೆಳೆದಿರುವ ಶುಂಠಿಗೂ ಪ್ರಸಕ್ತ ಸಾಲಿನಲ್ಲಿ ರೋಗ ಕಾಣಿಸಿಕೊಂಡು, ಬಹುಪಾಲು ಕೊಳೆತು ಹೋಗಿದೆ.

ADVERTISEMENT

‘ನಮ್ಮ ಒಂದು ಎಕರೆ ಗದ್ದೆಯಲ್ಲಿ ಶುಂಠಿ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದೇವೆ. ₹ 1.50 ಲಕ್ಷ ಖರ್ಚು ಮಾಡಿ ಫಸಲಿನಿಂದ ₹ 20 ಸಾವಿರ ಬಂದಿದೆ. ಈ ಬಾರಿ ಈಗಾಗಲೇ ಹೆಚ್ಚು ಮಳೆ ಸುರಿದಿದೆ. ನಿರಂತರ ಮಳೆ ಬೀಳುತ್ತಿರುವುದರಿಂದ ಶೀತ ಹೆಚ್ಚಾಗಿದೆ. ಅಲ್ಲದೆ, ಮಂಜು ಮುಸುಕಿದ ವಾತಾವರಣ ಪ್ರಾರಂಭವಾಗಿದ್ದು, ಶೀತದ ಗಾಳಿ ಬೀಸುತ್ತಿರುವುದು ಶುಂಠಿ ಬೆಳೆಗೆ ರೋಗಬಾಧೆ ಹೆಚ್ಚಾಗಲು ಕಾರಣವಾಗಿದೆ. ಹಿಂದಿನ ಸಾಲಿನ ಮಳೆಯಿಂದಲೂ ಶುಂಠಿ ಬೆಳೆ ನಷ್ಟವಾಗಿತ್ತು. ಈ ಬಾರಿಯೂ ಅದು ಮುಂದುವರೆದಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ನೀಡಬೇಕು’ ಎಂದು ಗರ್ವಾಲೆ ಗ್ರಾಮದ ಗೀಜಿಗಂಡ ಲೋಕೇಶ್ ಮನವಿ ಮಾಡಿದರು.

‘ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿವರ್ಷ ಹವಾಮಾನ ವೈಪರೀತ್ಯದಿಂದ ಹೆಚ್ಚಿನ ಕೃಷಿ ಬೆಳೆಗಳು ನಷ್ಟವಾಗುತ್ತಿದೆ. ಈ ಬಾರಿಯೂ ಶೀತದಿಂದಾಗಿ ಕಾಫಿ ಉದುರಿದೆ, ಕಾಳು ಮೆಣಸಿನ ಫಸಲಿಗೆ ಹಾನಿಯಾದರೆ, ಶುಂಠಿ ಬೆಳೆ ಸಂಪೂರ್ಣವಾಗಿ ನಷ್ಟವಾಗಿದೆ. ಪ್ರತಿ ವರ್ಷವೂ ಇದೇ ರೀತಿಯಲ್ಲಿ ನಷ್ಟವಾಗುತ್ತಿದ್ದರೆ, ಮುಂದಿನ ಸಾಲಿನಿಂದ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗುವುದಿಲ್ಲ. ಕೂಡಲೇ, ಅಧಿಕಾರಿಗಳು ರೈತರ ನೆರವಿಗೆ ಬರಬೇಕು’ ಎಂದು ಶಿರಂಗಳ್ಳಿಯ ಅಶೋಕ ಆಗ್ರಹಿಸಿದರು.

ಗರ್ವಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಕೃಷಿಯಿಂದ ನಷ್ಟ ಅನುಭವಿಸುತ್ತಿರುವುದರಿಂದ ಯುವಕರು ನಗರ ಪ್ರದೇಶಗಳಿಗೆ ತೆರಳಿ ಕೆಲಸ ಹುಡುಕಿಕೊಂಡಿದ್ದಾರೆ. ಇರುವ ಜಮೀನನ್ನು ಬಿಡಲು ಸಾಧ್ಯವಾಗದೆ, ಮನೆಯ ಹಿರಿಯರು ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಆದರೆ, ಇಲ್ಲಿ ಯಾವುದೇ ತೋಟಗಾರಿಕಾ ಬೆಳೆಗಳಿಂದ ಲಾಭವಾಗುತ್ತಿಲ್ಲ. ಹೆಚ್ಚಿನವರು ಬೇಸಿಗೆಯಲ್ಲಿ ತರಕಾರಿ ಬೆಳೆದು ಜೀವನ ಕಂಡು ಕೊಂಡಿದ್ದಾರೆ. ಸರ್ಕಾರ ಈ ಭಾಗದ ರೈತರಿಗೆ ಅಗತ್ಯ ನೆರವು ನೀಡಬೇಕು ಎಂದು ಶಿರಂಗಳ್ಳಿಯ ಸಾಬು ತಿಳಿಸಿದರು. 

ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮದ ಗೀಜಿಗಂಡ ಲೋಕೇಶ್ ತಾವು ಬೆಳೆದಿರುವ ಶುಂಠಿಗೆ ಕೊಳೆರೋಗ ಬಂದ ಹಿನ್ನೆಲೆಯಲ್ಲಿ ಅಳಿದುಳಿದ ಫಸಲನ್ನು ಹುಡುಕುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.