ವಿರಾಜಪೇಟೆ: ಹಲವು ಸಂಸ್ಕೃತಿ, ಹಲವಾರು ಹಬ್ಬಗಳ ಆಚರಣೆಯಿಂದಾಗಿ ದೇಶದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಅವರು ಅಭಿಪ್ರಾಯಪಟ್ಟರು.
ಇಲ್ಲಿನ ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ವತಿಯಿಂದ ಆಯುಧ ಪೂಜೆಯ ಅಂಗವಾಗಿ ಖಾಸಗಿ ಬಸ್ ನಿಲ್ದಾಣದಲ್ಲಿ ಈಚೆಗೆ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದು. ನಮ್ಮಲ್ಲಿ ಬೇರೆಬೇರೆ ಜಾತಿ, ಧರ್ಮದವರಿದ್ದರೂ ಯಾವುದೇ ಭೇದ–ಭಾವವಿಲ್ಲದೆ ನಾವೆಲ್ಲರೂ ಭಾರತೀಯರು ಎನ್ನುವ ಭಾವನೆಯಿಂದ ಬಾಳುತ್ತಿದ್ದೇವೆ. ಕಾರ್ಮಿಕರು ಸಾರ್ವಜನಿಕ ವಲಯದ ಬೆನ್ನೆಲುಬು. ಇಂತಹ ಕಾರ್ಮಿಕ ವಲಯದ ಏಳಿಗೆಗೆ ಸರ್ಕಾರ ಬದ್ಧವಾಗಿದೆ ಎಂದರು.
ಸಮೀಪದ ಅರಮೇರಿಯ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಾಫಿ ಜುಮ್ಮಾ ಮಸೀದಿ ಖತೀಬರಾದ ಹ್ಯಾರಿಸ್ ಬಾಖವಿ, ಅಮ್ಮತ್ತಿಯ ಚರ್ಚ್‌ನ ಧರ್ಮಗುರು ಮದಲೈ ಮುತ್ತು ಹಾಗೂ ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷ ಅಲ್ಲಂಡ ಚೆಂಗಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರಂಭದಲ್ಲಿ ನಿಲ್ದಾಣದಲ್ಲಿ ನಿಲುಗಡೆಗೊಳಿಸಿದ್ದ ಬಸ್‌ಗಳಿಗೆ ಸಾಮೂಹಿಕ ಆಯುಧ ಪೂಜೆ ನಡೆಯಿತು. ಬಳಿಕ ವೇದಿಕೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಅನ್ನಸಂತರ್ಪಣೆ ನಡೆದ ಬಳಿಕ ಜಿಲ್ಲೆಯ ನುರಿತ ಬೈಕ್ ಸವಾರರಿಂದ ರೋಮಾಂಚಕ ಸಾಹಸ ಪ್ರದರ್ಶನ ನಡೆಯಿತು.
ಸಮಾರೋಪ ಸಮಾರಂಭ: ಸಮರೋಪ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿಯ ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕ ತೇಲಪಂಡ ಶಿವಕುಮಾರ್ ಅವರು ಖಾಸಗಿ ಬಸ್ ವಲಯ ಪ್ರಸ್ತುತ ಸಂಕಷ್ಟದಲ್ಲಿದೆ. ಇದನ್ನು ನಂಬಿಕೊಂಡು ಜೀವನ ಸಾಗಿಸುವ ಕಾರ್ಮಿಕರು ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದರು.
ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ವಾಟೇರಿರ ಬೋಪಣ್ಣ, ಆಲ್ವೀನ್ ಡಿಸೋಜ, ಕಾಫಿ ಬೆಳೆಗಾರರಾದ ಕುಂಡ್ರಂಡ ಅನಿಲ್ ಹಾಗೂ ಕೊಡಗು ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ ಕುಂಬೆಯಂಡ ಸುರೇಶ್ ದೇವಯ್ಯ ಮಾತನಾಡಿದರು.
ಖಾಸಗಿ ಬಸ್ ಹಿರಿಯ ಕಾರ್ಮಿಕರಾದ ಇಬ್ರಾಹಿಂ, ಹಾಕಿ ವೀಕ್ಷಕ ವಿವರಣೆಕಾರ ಮಾಳೇಟಿರ ಶ್ರೀನಿವಾಸ್, ವಿರಾಜಪೇಟೆ ಪುರಸಭೆಯ ಪೌರಕಾರ್ಮಿಕರಾದ ಎಚ್. ಸುಂದರ್, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಕೆ.ಜೆ. ಆಶಾ, ಅಲೀರ ಮಹಮ್ಮದ್ ಸಮದ್ ಮತ್ತು ಉದಯೋನ್ಮುಖ ಹಾಕಿ ಆಟಗಾರ ಸುಹಾಸ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ದೇಯಂಡ ಲೋಕೇಶ್ ಅಯ್ಯಪ್ಪ, ಜೀವನ್, ಗುತ್ತಿಗೆದಾರರಾದ ಕೋಡಿರ ವಿವೇಕ್ ಅವರು ಉಪಸ್ಥಿತರಿದ್ದರು. ಕೊನೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕರಾದ ಪ್ರೀತಂ, ರಶ್ಮಿ ಮಾರಾವಿ ಮತ್ತು ಕ್ಯಾಲಿಕಟ್‌ನ ಬಿಗ್ ಬ್ಯಾಂಡ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.