ADVERTISEMENT

ಕುಶಾಲನಗರ: 'ಪಟಾಕಿ ತ್ಯಜಿಸಿ, ದೀಪಾವಳಿ ಆಚರಿಸಿ'

ಕೂಡುಮಂಗಳೂರು: ಹಸಿರು ದೀಪಾವಳಿ ಆಚರಣೆ, ಜಾಗೃತಿ ಆಂದೋಲನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2023, 5:48 IST
Last Updated 12 ನವೆಂಬರ್ 2023, 5:48 IST
ಕುಶಾಲನಗರ ಸಮೀಪದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಇಕೊ ಕ್ಲಬ್, ಎನ್‌ಸ್ಸೆಸ್ ಆಶ್ರಯದಲ್ಲಿ ಹಸಿರು ದೀಪಾವಳಿ ಆಚರಣೆ ಸಂದರ್ಭದಲ್ಲಿ ದೀಪ ಬೆಳಗಿಸಿ ಜನಜಾಗೃತಿ ಮೂಡಿಸಲಾಯಿತು. ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಗ್ರಾ.ಪಂ.ಸದಸ್ಯ ಕೆ.ಕೆ.ಭೋಗಪ್ಪ, ಕೆ.ಕೆ.ಪವನ್ ಕುಮಾರ್, ಶಿಕ್ಷಕರಾದ ದಯಾನಂದ ಪ್ರಕಾಶ್, ಬಿ.ಡಿ.ರಮ್ಯಾ ಗೀತಾ, ಸೌಮ್ಯಾ, ರೇಖಾ ಇದ್ದರು.
ಕುಶಾಲನಗರ ಸಮೀಪದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಇಕೊ ಕ್ಲಬ್, ಎನ್‌ಸ್ಸೆಸ್ ಆಶ್ರಯದಲ್ಲಿ ಹಸಿರು ದೀಪಾವಳಿ ಆಚರಣೆ ಸಂದರ್ಭದಲ್ಲಿ ದೀಪ ಬೆಳಗಿಸಿ ಜನಜಾಗೃತಿ ಮೂಡಿಸಲಾಯಿತು. ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಗ್ರಾ.ಪಂ.ಸದಸ್ಯ ಕೆ.ಕೆ.ಭೋಗಪ್ಪ, ಕೆ.ಕೆ.ಪವನ್ ಕುಮಾರ್, ಶಿಕ್ಷಕರಾದ ದಯಾನಂದ ಪ್ರಕಾಶ್, ಬಿ.ಡಿ.ರಮ್ಯಾ ಗೀತಾ, ಸೌಮ್ಯಾ, ರೇಖಾ ಇದ್ದರು.   

ಕುಶಾಲನಗರ: ಮಾಲಿನ್ಯಮುಕ್ತ ದೀಪಾವಳಿ ಆಚರಿಸಿ, ಪಟಾಕಿ ತ್ಯಜಿಸಿ, ಹಣತೆ ಬೆಳಗಿ ... ಮೊದಲಾದ ಜಾಗೃತಿ ಸಂದೇಶಗಳು ಇಲ್ಲಿನ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮೊಳಗಿದವು.

ಇಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ವಿವಿಧ ಸಂಘ, ಸಂಸ್ಥೆಗಳ ವತಿಯಿಂದ ನಡೆದ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತು ಪರಿಸರ ಜಾಗೃತಿ ಆಂದೋಲನವು ಪರಿಸರ ಸ್ನೇಹಿ ದೀಪಾವಳಿ ಕುರಿತು ಜಾಗೃತಿ ಮೂಡಿಸಿತು.

ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್‌ನ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್‌ ಅವರು ಮಾಲಿನ್ಯಕಾರಿ ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳು ಹಾಗೂ ಮಾಲಿನ್ಯದ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ADVERTISEMENT

ಪಟಾಕಿ ಸಿಡಿಸುವುದರಿಂದ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯದ ಜತೆಗೆ ಪಕ್ಷಿ-ಪ್ರಾಣಿ ಹಾಗೂ ಪರಿಸರಕ್ಕೆ ಧಕ್ಕೆಯುಂಟಾಗುತ್ತದೆ. ಈ ದಿಸೆಯಲ್ಲಿ ಸುಪ್ರೀಂಕೋರ್ಟ್‌ ಆದೇಶದಂತೆ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಶಾಲಾಭಿವೃದ್ಧಿ ಸಮಿತಿಯ ಸಲಹೆಗಾರ ಕೆ.ಕೆ.ಪವನ್ ಕುಮಾರ್ ಮಾತನಾಡಿ, ‘ಎಲ್ಲರೂ ಸೇರಿ ಇಂತಹ ಪರಿಸರ ಸ್ನೇಹಿ ಚಟುವಟಿಕೆಗಳ ಮೂಲಕ ಜನರಲ್ಲಿ ಪರಿಸರದ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ’ ಎಂದರು.

ಹಸಿರು ದೀಪಾವಳಿ ಆಚರಣೆಯ ‌ಮಹತ್ವ ಕುರಿತು ಮಾಹಿತಿ ನೀಡಿದ ಇಕೋ ಕ್ಲಬ್‌ನ ಉಸ್ತುವಾರಿ ಶಿಕ್ಷಕಿ ಬಿ.ಡಿ.ರಮ್ಯಾ, ದೀಪಾವಳಿ ಹಬ್ಬದ ಸಂದರ್ಭ ಮಾಲಿನ್ಯಕಾರಿ ಪಟಾಕಿ ತ್ಯಜಿಸಿ ಹಣತೆ ಬೆಳಗಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಕೆ.ಕೆ.ಭೋಗಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಎ.ಎಂ.ಜವರಯ್ಯ, ಶಾಲಾ ಶಿಕ್ಷಕರಾದ ಎಂ.ಟಿ.ದಯಾನಂದ ಪ್ರಕಾಶ್, ಬಿ.ಎನ್.ಸುಜಾತಾ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ, ಕೆ.ಟಿ.ಸೌಮ್ಯಾ ಸಿಬ್ಬಂದಿ ಎಂ.ಉಷಾ ಇದ್ದರು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ, ಶಾಲೆಯ ಇಕೋ ಕ್ಲಬ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ, ಎಸ್‌ಡಿಎಂಸಿ ಹಾಗೂ ವಿದ್ಯಾರ್ಥಿ ಸಂಘಗಳು ಸಹಯೋಗ ನೀಡಿದ್ದವು. ಗೋಗ್ರೀನ್ ಅಭಿಯಾನದಡಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತ ಪರಿಸರ ಜಾಗೃತಿ ಆಂದೋಲನವನ್ನು ಏರ್ಪಡಿಸಲಾಗಿತ್ತು.

ಹಸಿರು ದೀಪಾವಳಿ ಜಾಗೃತಿ ಅಭಿಯಾನ:

ಕೂಡ್ಲೂರು ಗ್ರಾಮದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಣತೆ ಹಚ್ಚೋಣ, ಹಸಿರು ದೀಪಾವಳಿ ಆಚರಿಸೋಣ, ಮಾಲಿನ್ಯ ಪಟಾಕಿ ತ್ಯಜಿಸೋಣ ಮಾಲಿನ್ಯ ತಡೆಯೋಣ, ಮಾಲಿನ್ಯ ಮುಕ್ತ ದೀಪಾವಳಿ ಆಚರಿಸೋಣ ಬನ್ನಿ, ಪರಿಸರ ಸಂರಕ್ಷಿಸೋಣ ಬನ್ನಿ, ಎಂಬಿತ್ಯಾದಿ ಘೋಷಣೆಗಳ ಭಿತ್ತಿ ಫಲಕಗಳನ್ನು ಹಿಡಿದು ಜನರಲ್ಲಿ ಹಸಿರು ದೀಪಾವಳಿ ಆಚರಿಸುವಂತೆ ಅಭಿಯಾನದ ಮೂಲಕ ಜನಜಾಗೃತಿ ಮೂಡಿಸಿದರು.

ಶಿಕ್ಷಕರು ಮಕ್ಕಳಿಗೆ ‘ಹಣತೆ ಹಚ್ಚೋಣ ಬನ್ನಿ, ಪರಿಸರಸ್ನೇಹಿ ದೀಪಾವಳಿ ಆಚರಿಸೋಣ ಬನ್ನಿ’ ಎಂದು ಪ್ರತಿಜ್ಞಾವಿಧಿ ಬೋಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.