ಮಡಿಕೇರಿ: ಕಳೆದೊಂದು ವರ್ಷದ ನಂತರ ಹಾರಂಗಿ ನೀರಾವರಿ ಸಲಹಾ ಸಮಿತಿ ಸಭೆ ಜುಲೈ 17ರಂದು ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. ಇದಕ್ಕೆ ಆಕ್ಷೇಪಗಳೂ ಕೇಳಿ ಬಂದಿವೆ.
ಕಳೆದ ವರ್ಷದ ಜುಲೈ 22ರಂದು ಸಭೆ ನಡೆಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಒಂದೇ ಒಂದು ಸಭೆಯನ್ನೂ ಕರೆದಿಲ್ಲ. ಹಾಗಿದ್ದ ಮೇಲೆ ಸಲಹಾ ಸಮಿತಿಯ ಔಚಿತ್ಯವೇನು ಎಂದು ಸದಸ್ಯರು ಪ್ರಶ್ನಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸಲಹಾ ಸಮಿತಿ ಸದಸ್ಯ ಕೆ.ಎಸ್.ಗೋಪಾಲಕೃಷ್ಣ, ‘ವರ್ಷಕ್ಕೊಮ್ಮೆ ಸಭೆ ನಡೆಸುವುದಾದರೆ ಈ ಸಮಿತಿ ಇರುವುದಾದರೂ ಏಕೆ’ ಎಂದು ಪ್ರಶ್ನಿಸಿದರು.
ಹಾರಂಗಿ ಜಲಾಶಯ ಇರುವುದು ಕೊಡಗಿನಲ್ಲಿ. ಇಲ್ಲಿ ಸಾಕಷ್ಟು ವಿಶಾಲವಾದ ಸಭಾಂಗಣಗಳು ಇವೆ. ಇಲ್ಲಿಯೇ ಸಭೆ ನಡೆಸುವುದನ್ನು ಬಿಟ್ಟು ದೂರದ ಬೆಂಗಳೂರಿನಲ್ಲಿ ಸಭೆ ಕರೆದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಮಿತಿಗೆ ಸೋಮವಾರಪೇಟೆ, ಅರಕಲಗೂಡು, ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ ವಿಧಾನ ಸಭಾ ಸದಸ್ಯರು, ಮಂಡ್ಯ, ಹಾಸನ, ಕೊಡಗು–ಮೈಸೂರು ಸಂಸದೀಯ ಕ್ಷೇತ್ರದ ಸಂಸತ್ ಸದಸ್ಯರು, ಮಂಡ್ಯ, ಹಾಸನ, ಕೊಡಗು, ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರು, ಈ ಭಾಗದ ವಿಧಾನಪರಿಷತ್ತಿನ ಸದಸ್ಯರು ಹಾಗೂ 7 ಮಂದಿ ನಾಮಕರಣ ಸದಸ್ಯರು ಇದ್ದಾರೆ.
ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸದಸ್ಯರು ಇದ್ದಾಗ್ಯೂ ಸಭೆ ಕರೆಯದೇ ಇರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಜಲಾಶಯ ತುಂಬಿ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲವಾಯಿತು. ಆಗಿನಿಂದ ನಾಲೆಗಳಿಗೆ ನೀರು ಹರಿಸದೇ ಇರುವುದು ಆ ಭಾಗದ ರೈತರ ಕೋಪಕ್ಕೆ ಕಾರಣವಾಗಿದೆ. ಜಲಾಶಯ ತುಂಬಿದ ತಕ್ಷಣವೇ ಸಭೆ ಕರೆಯಬಹುದಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಬೇಸಿಗೆ ಸಂದರ್ಭದಲ್ಲಾದರೂ ಸಭೆ ಕರೆದಿದ್ದರೆ ರೈತರ ಬೇಸಿಗೆಯ ಬವಣೆ ತಪ್ಪಿಸುವಂತಹ ಸೂಕ್ತ ಸಲಹೆಗಳನ್ನು ಕೊಡಬಹುದಿತ್ತು. ಅಧಿಕಾರಿಗಳು ಸಲಹಾ ಸಮಿತಿಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಅವರು ದೂರಿದ್ದಾರೆ.
‘ಕಾಲುವೆಗಳಿಗೆ ನೀರು ಬಿಡುವಾಗ ಸಭೆ’
ಆರೋಪ ಕುರಿತು ‘ಪ್ರಜಾವಾಣಿ’ ಹಾರಂಗಿ ಜಲಾಶಯದ ಕಾರ್ಯಪಾಲಕ ಎಂಜಿಯರ್ ಪುಟ್ಟಸ್ವಾಮಿ ಅವರನ್ನು ಸಂಪರ್ಕಿಸಿದಾಗ ಅವರು ‘ಕೇವಲ ಹಾರಂಗಿ ಮಾತ್ರವಲ್ಲ ಎಲ್ಲ ಜಲಾಶಯಗಳ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕಾಲುವೆಗಳಿಗೆ ನೀರು ಹರಿಸುವ ಸಂಬಂಧ ನಿರ್ಧಾರ ಕೈಗೊಳ್ಳಲು ಕರೆಯಲಾಗುತ್ತದೆ’ ಎಂದು ತಿಳಿಸಿದರು. ಹಾರಂಗಿ ಜಲಾಶಯದಿಂದ ವರ್ಷಕ್ಕೆ ಒಮ್ಮೆ ಮಾತ್ರ ಕಾಲುವೆಗಳಿಗೆ ನೀರು ಬಿಡಲಾಗುತ್ತದೆ. ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಜಲಾಶಯ ತುಂಬುತ್ತದೆ. ಹಾಗಾಗಿ ಜಲಾಶಯದ ತುಂಬಿದ ಬಳಿಕ ಸಭೆ ಕರೆಯಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.