ADVERTISEMENT

ವಿರೋಧದ ನಡುವೆಯೂ ಕೊಡಗಿನ ಐಷಾರಾಮಿ ರೆಸಾರ್ಟ್‌ಗೆ ಸಿಎಂ ಕುಮಾರಸ್ವಾಮಿ

ರೆಸಾರ್ಟ್‌ನಲ್ಲಿ ಎರಡು ದಿನ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 10 ಮೇ 2019, 17:34 IST
Last Updated 10 ಮೇ 2019, 17:34 IST
ಮಡಿಕೇರಿ ಸಮೀಪದ ಇಬ್ಬನಿ ರೆಸಾರ್ಟ್‌ಗೆ ಬಂದ ಸಿಎಂ ಕುಮಾರಸ್ವಾಮಿ
ಮಡಿಕೇರಿ ಸಮೀಪದ ಇಬ್ಬನಿ ರೆಸಾರ್ಟ್‌ಗೆ ಬಂದ ಸಿಎಂ ಕುಮಾರಸ್ವಾಮಿ   

ಮಡಿಕೇರಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ರಾತ್ರಿಯಿಂದ ರೆಸಾರ್ಟ್‌ ವಾಸ್ತವ್ಯ ಆರಂಭಿಸಿದರು. ರಾತ್ರಿ 7.45ರ ಸುಮಾರಿಗೆ ಸಮೀಪದ ಇಬ್ಬನಿ ರೆಸಾರ್ಟ್‌ಗೆ ಆಗಮಿಸಿದ ಕುಮಾರಸ್ವಾಮಿ, ಮಾಧ್ಯಮಕ್ಕೂ ಪ್ರತಿಕ್ರಿಯಿಸದೇ ಸಿಟ್ಟಿನಿಂದ ಒಳಹೋದರು.

ಮುಖ್ಯಮಂತ್ರಿ ಜತೆಗೆ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್‌ ಕುಮಾರಸ್ವಾಮಿ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಮಾಡಿದ್ದಾರೆ.

ಮುಖ್ಯಮಂತ್ರಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ವಿಶ್ರಾಂತಿಗೋಸ್ಕರ ರೆಸಾರ್ಟ್‌ಗೆ ಬಂದಿದ್ದಾರೆ ಎಂದು ಜೆಡಿಎಸ್‌ ಮುಖಂಡರು ಹೇಳುತ್ತಿದ್ದರೂ ‘ಮೈತ್ರಿ’ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಉಳಿದಿದ್ದ ರೆಸಾರ್ಟ್‌ನಲ್ಲೇ ವಾಸ್ತವ್ಯಕ್ಕೆ ಮೊರೆ ಹೋಗಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ADVERTISEMENT

ಸಿದ್ದರಾಮಯ್ಯ ಈ ರೆಸಾರ್ಟ್‌ಗೆ ಬಂದು ಹೋದ ಬಳಿಕ ‘ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಲಿ’ ಎಂದು ಕಾಂಗ್ರೆಸ್‌ ಶಾಸಕರು ಹೇಳಿದ್ದರು. ಇದರಿಂದ ಕುಮಾರಸ್ವಾಮಿ ಬೇಸರಗೊಂಡಿದ್ದರು ಎನ್ನಲಾಗಿದೆ. ಕುಮಾರಸ್ವಾಮಿ, ಇತ್ತೀಚೆಗಷ್ಟೇ ಉಡುಪಿಯ ಸಾಯಿರಾಧಾ ರೆಸಾರ್ಟ್‌ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ವಾಪಸ್‌ ಆಗಿದ್ದರು.

ಮಡಿಕೇರಿ ಸಮೀಪದ ಇಬ್ಬನಿ ರೆಸಾರ್ಟ್‌ಗೆ ಬಂದ ಸಿಎಂ ಕುಮಾರಸ್ವಾಮಿ

ಮಡಿಕೇರಿ–ಮೈಸೂರು ಹೆದ್ದಾರಿಯಲ್ಲಿರುವ ಇಬ್ಬನಿ ರೆಸಾರ್ಟ್‌ ಜಿಲ್ಲೆಯ ಪ್ರತಿಷ್ಠಿತ ಹಾಗೂ ದುಬಾರಿ ರೆಸಾರ್ಟ್‌ಗಳಲ್ಲಿ ಒಂದಾಗಿದೆ. ಕಾಫಿ ತೋಟದ ಹಸಿರಿನ ನಡುವೆ ರೆಸಾರ್ಟ್‌ ವಿಸ್ತರಿಸಿಕೊಂಡಿದ್ದು ಪ್ರತ್ಯೇಕ ಈಜುಕೊಳದ ವ್ಯವಸ್ಥೆ, ಪ್ರತ್ಯೇಕ ಬಾಲ್ಕನಿ, ಬಾರ್, ಬೋಟಿಂಗ್‌ ವ್ಯವಸ್ಥೆ, ವಿಶೇಷ ಮಸಾಜ್‌ ಟಬ್‌ ವ್ಯವಸ್ಥೆಯಿದೆ.

ಸಾ.ರಾ. ಮಹೇಶ್‌ ಹೆಸರಿನಲ್ಲಿ ಒಟ್ಟು ಐದು ಕೊಠಡಿಗಳನ್ನು ಬುಕ್‌ ಮಾಡಲಾಗಿದೆ. ಪ್ರತಿ ರೂಂ ಬಾಡಿಗೆ ₹ 28 ಸಾವಿರದಿಂದ ಆರಂಭವಾಗಲಿದೆ. ಕೇರಳದ ಸೆಬಾಸ್ಟಿನ್‌ಗೆ ಸೇರಿದ ರೆಸಾರ್ಟ್‌ನಲ್ಲಿ ಕೊಡಗಿನ ವಿಶಿಷ್ಟ ಆಹಾರ ಖಾದ್ಯಗಳೂ ದೊರೆಯಲಿವೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ಮಧ್ಯಾಹ್ನ 11ರ ತನಕವೂ ಕೊಠಡಿ ಕಾಯ್ದಿರಿಸಲಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರ ಪರಿಸ್ಥಿತಿಯಿದೆ. ಕೊಡಗಿನಲ್ಲಿ ನೆರೆ ಸಂತ್ರಸ್ತರಿಗೆ ಇನ್ನೂ ಮನೆಗಳೂ ಹಸ್ತಾಂತರವಾಗಿಲ್ಲ. ಇದರ ನಡುವೆಯೂ ರೆಸಾರ್ಟ್‌ ವಾಸ್ತವ್ಯ ಮಾಡುತ್ತಿರುವುದಕ್ಕೆ ವಿರೋಧ ಪಕ್ಷದಿಂದ ಟೀಕೆ ವ್ಯಕ್ತವಾಗಿದೆ. ರೆಸಾರ್ಟ್‌ಗೆ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.

ರೆಸಾರ್ಟ್‌ ಎದುರು ಪೊಲೀಸ್‌ ಭದ್ರತೆ

ಎಂಟು ಮಂದಿಸ್ಥಳೀಯಸಿಬ್ಬಂದಿಗೆ ರಜೆ

ರೆಸಾರ್ಟ್‌ನ ಐದು ಕೊಠಡಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸ್ಥಳೀಯ ಎಂಟು ಸಿಬ್ಬಂದಿಗೆ ಮೂರು ದಿನಗಳ ಮಟ್ಟಿಗೆ ರಜೆ ನೀಡಲಾಗಿದೆ. ಅವರ ಜಾಗದಲ್ಲಿ ಉತ್ತರ ಪ್ರದೇಶದ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಲಾಗಿದೆ. ಯಾರೂ ಸಹ ಮೊಬೈಲ್‌ ಬಳಸುವಂತಿಲ್ಲ ಎಂದೂ ಸೂಚಿಸಲಾಗಿದೆ. ಭದ್ರತೆಯ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.