ADVERTISEMENT

ಕೊಡಗಿನಲ್ಲಿ ಆಲಿಕಲ್ಲು ಮಳೆ: ಬೆಳೆಗಳಿಗೆ ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 20:48 IST
Last Updated 19 ಫೆಬ್ರುವರಿ 2021, 20:48 IST
ಕೊಡಗು ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಮಳೆ
ಕೊಡಗು ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಮಳೆ   

ಬೆಂಗಳೂರು: ರಾಜ್ಯದ ಹಲವೆಡೆ ಶುಕ್ರವಾರವೂ ಮಳೆ ಸುರಿದಿದೆ. ಇದರಿಂದ ತೋಟಗಾರಿಕೆ ಬೆಳೆಗಳಿಗೆ ಅಪಾರ ಹಾನಿಯಾಗಿದೆ.

ಮಾವಿನ ಹೂವು ಉದುರಿದ್ದು, ಎಲೆಕೋಸು, ಸೋರೆಕಾಯಿ, ಸೌತೆ, ಮೆಣಸಿನಕಾಯಿ ಬೆಳೆಗಳಿಗೆ ಹಾನಿಯಾಗಿದೆ. ಕೊಡಗು, ಹಾಸನ, ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಬಿರುಸಿನ ಆಲಿಕಲ್ಲು ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಆಲಿಕಲ್ಲು ಹೊಡೆತಕ್ಕೆ ಕಾಫಿ, ಬಾಳೆ, ಕಾಳು ಮೆಣಸಿನ ಬಳ್ಳಿ, ಹಸಿರು ಮೆಣಸಿನ ಕಾಯಿಗೆ ಅಪಾರ ಹಾನಿಯಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿದ ಮಳೆಯಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ. ರಾಗಿ ಒಕ್ಕಣೆಗೆ
ಅಡ್ಡಿಯಾಗಿದ್ದು, ಕೆಲವೆಡೆ ರಾಗಿ ಹುಲ್ಲುನೀರುಪಾಲಾಗಿದೆ. ಮೆಕ್ಕೆಜೋಳದ ಕಾಳುಗಳನ್ನು ತೆನೆಯಿಂದ ಬೇರ್ಪ
ಡಿಸುವ ಕಾರ್ಯಕ್ಕೂ ತೊಂದರೆಯಾಗಿದೆ.

ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಉತ್ತಮ ಮಳೆಯಾಗಿದೆ. ಆದರೆ, ಮಳೆಯಿಂದ ಜೋಳ ಕಪ್ಪಾಗುವ ಆತಂಕ
ಎದುರಾಗಿದೆ. ಕರಾವಳಿ, ಮಲೆನಾಡಿನ ಹಲವೆಡೆ ಉತ್ತಮ ಮಳೆಯಾಗಿದೆ.

ಮೇಲ್ಮೈ ಸುಳಿಗಾಳಿಯಿಂದ ಮಳೆ
ಮೈಸೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ, ಮೋಡಗಳು ಮತ್ತು ಗಾಳಿ ಪ್ರಮಾಣ ಹೆಚ್ಚಾಗಿ ಅಕಾಲಿಕ ಮಳೆ ಬೀಳುತ್ತಿದೆ.

ಫೆ.18ರವರೆಗೂ ಅರಬ್ಬಿ ಸಮುದ್ರದಲ್ಲಿ ಈ ಸ್ಥಿತಿ ಇತ್ತು. ಕರ್ನಾಟಕದಿಂದ ಗುಜರಾತಿನವರೆಗೂ ಗಾಳಿಯ ಒತ್ತಡ ಕಡಿಮೆ ಇದೆ. ಈಗ ದಿಢೀರನೇ ಆಗಿರುವ ಬದಲಾವಣೆಯಿಂದ ಫೆ. 21ರವರೆಗೂ ಗಾಳಿ ಸಹಿತ ಮಳೆ ಬೀಳಲಿದೆ. ಸಾಮಾನ್ಯವಾಗಿ ಫೆಬ್ರುವರಿ ತಿಂಗಳಲ್ಲಿ ಈ ರೀತಿಯ ಹವಾಮಾನ ಬದಲಾವಣೆ ನಿರೀಕ್ಷಿಸಿರಲಿಲ್ಲ ಎಂದು ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಹಿರಿಯ ಸಮಾಲೋಚಕ ಡಾ.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.