ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶನಿವಾರ ಬೀಸಿದ ಬಿರುಗಾಳಿ ಹಾಗೂ ಸುರಿದ ಧಾರಾಕಾರ ಮಳೆಗೆ ಜನರು ತತ್ತರಿಸಿದರು. ಮಧ್ಯಾಹ್ನದಿಂದ ನಿರಂತರವಾಗಿ ಬೀಸುತ್ತಲೇ ಇರುವ ಬಿರುಗಾಳಿ ಅಕ್ಷರಶಃ ಜನರಲ್ಲಿ ಆತಂಕ ಮೂಡಿಸಿದೆ.
ನಗರದಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ಬ್ಯಾರಿಕೇಡ್‌ಗಳು, ಅಂಗಡಿಗಳ ನಾಮಫಲಕಗಳು ತರಗಲೆಗಳಂತೆ ತೂರಿ ಹೋಗಿ ಮಾರು ದೂರು ಬಿದ್ದವು. ಜನರ ಕೈಯಲ್ಲಿದ್ದ ಕೊಡೆಗಳೆಲ್ಲ ಮುರಿದು ತುಂಡಾದವು. ಖಾಸಗಿ ಬಸ್‌ನಿಲ್ದಾಣ ಸೇರಿದಂತೆ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿ ಭೀತಿ ಮೂಡಿಸಿದವು.
ಟಿ.ಜಾನ್ ಬಡಾವಣೆ, ಕಾವೇರಿ ಬಡಾವಣೆ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯಗೊಂಡಿತು. ರಸ್ತೆಯ ಮೇಲೆಲ್ಲ ವಾಹನಗಳು ಸಂಚರಿಸಲಾಗದಷ್ಟು ಪ್ರಮಾಣದಲ್ಲಿ ನೀರು ಹರಿಯಿತು. ನಗರದಲ್ಲಿರುವ ರಾಜಕಾಲುವೆಗಳು, ಚರಂಡಿಗಳೆಲ್ಲವೂ ತುಂಬಿ ಹರಿದವು. ನಗರದಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿತು.
ಗ್ರಾಮೀಣ ಭಾಗದಲ್ಲಿನ ಮನೆಗಳ ಹೆಂಚುಗಳು, ಶೀಟುಗಳು ಸಹ ತರಗಲೆಯಂತೆ ಗಾಳಿಗೆ ಹಾರಿ ಹೋದವು. ನರಿಯಂದಡ ಗ್ರಾಮದ ಚೆರುವಾಳಂಡ ತಮ್ಮಯ್ಯ ಅವರ ಮನೆಯ ಸುಮಾರು 200ಕ್ಕೂ ಅಧಿಕ ಹೆಂಚುಗಳು ಗಾಳಿಗೆ ಹಾರಿ ಹೋಗಿವೆ. ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯಗೊಂಡು, ಕತ್ತಲೆಯಲ್ಲಿ ಮುಳುಗಿತು.
ಭಾಗಮಂಡಲದಲ್ಲಿ ಸುರಿದ ಧಾರಾಕಾರ ಮಳೆಗೆ ಕಾವೇರಿ, ಕನ್ನಿಕೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮತ್ತೊಮ್ಮೆ ತ್ರಿವೇಣಿ ಸಂಗಮ ಜಲಾವೃತಗೊಂಡಿತು. ತಲಕಾವೇರಿಗೆ ಹೋಗುವ ರಸ್ತೆ ಸೇರಿದಂತೆ ಅನೇಕ ರಸ್ತೆಗಳಲ್ಲಿ ಮರಗಳು ಉರುಳಿ ಬಿದ್ದು, ಸಂಚಾರಕ್ಕೆ ಸಮಸ್ಯೆಯಾಯಿತು.
ಕುಸಿದ ಮನೆಗಳು
ಒಂದೇ ದಿನ ಹಲವೆಡೆ ಮನೆಗಳ ಮೇಲೆ ಮರಗಳು ಬಿದ್ದು, ಹಾನಿಯಾಗಿದೆ. ಅಮ್ಮತ್ತಿ ಹೋಬಳಿಯ ಬಿಳುಗುಂದ ಗ್ರಾಮದ ನಿವಾಸಿ ಎಚ್.ಟಿ.ಗಣೇಶ್ ಅವರ ಮನೆಯ ಹಿಂಬದಿಯ ಗೋಡೆ ಮತ್ತು ಚಾವಣಿ ಮಳೆಯಿಂದ ಕುಸಿದಿದೆ. ಕೆದಮಳ್ಳೂರು ಗ್ರಾಮದ ಚೂರಿಯಾಲದ ದೇವಸ್ಥಾನದ ಮೇಲೆ ಮರ ಬಿದ್ದು ದೇವಸ್ಥಾನವು ಅರ್ಧಕ್ಕಿಂತ ಹೆಚ್ಚು ಹಾನಿಯಾಗಿದೆ. ಶನಿವಾರಸಂತೆ ಹೋಬಳಿಯ ಕೊರಲಳ್ಳಿ ಗ್ರಾಮದ ಸುಕನ್ಯಾ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಸಂಪಾಜೆ ಹೋಬಳಿಯ ಮೇಕೇರಿ ಗ್ರಾಮದ ಸುಭಾಷ್‌ನಗರದಲ್ಲಿ ನಸೀಮಾ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಎಮ್ಮೆಮಾಡು ಗ್ರಾಮದ ಅಬ್ದುಲ್ ರಹೆಮಾನ್ ಅವರ ಮನೆಯ ಹಿಂಭಾಗದಲ್ಲಿ ಮರಬಿದ್ದು ಹಾನಿಯಾಗಿದೆ. ದೊಡ್ಡಕೂಡ್ಲಿ ಗ್ರಾಮದ ಕೃಷ್ಣಚಾರ್ಯ ಎಂಬುವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಬ್ಯಾಡಗೊಟ್ಟ ಗ್ರಾಮದ ಪಾಂಡುರಂಗ ಅವರ ಮನೆಗೆ ಮರ ಬಿದ್ದು ಮನೆಯ 2 ಶೀಟ್ ಹಾಗೂ ಮನೆಗೆ ಹೊಂದಿಕೊಂಡಂತೆ ಇರುವ ಕೊಟ್ಟಿಗೆ ಹಾನಿಯಾಗಿದೆ. ಕರಿಕೆ ಗ್ರಾಮದ ಸುಮತಿ ಅವರ ಮನೆಯ ಮೇಲೆ ಮರ ಬಿದ್ದು ಶೀಟ್‌ಗಳು ಹಾನಿಯಾಗಿವೆ. ಕೋಕೇರಿ ಗ್ರಾಮದ ಚೆರುವಾಳಂಡ ವಿಮಲ ಅವರ ಮನೆಯ ಹಿಂಭಾಗದ 2 ಕೋಣೆಗಳು ಸಂಪೂರ್ಣವಾಗಿ ಹಾನಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.