
ವಿರಾಜಪೇಟೆ ಸಮೀಪದ ಬಿಟ್ಟಂಗಾಲದ ವಿ. ಬಾಡಗದಲ್ಲಿ ಭಾನುವಾರ ನಡೆದ ಹೈಪ್ಲೈಯರ್ಸ್ ಕಪ್–2025ನಲ್ಲಿ ಅಪ್ಪಂಡೇರಂಡ ತಂಡ ಮುರುವಂಡ ತಂಡವನ್ನು ಮಣಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.
ವಿರಾಜಪೇಟೆ: ಹೈಪ್ಲೈಯರ್ಸ್ ಕಪ್–2025ರ ಮೊದಲ ದಿನ ಅಪ್ಪಂಡೇರಂಡ, ತೀತಿಮಾಡ, ಕೇಳಪಂಡ ಮತ್ತು ಕುಪ್ಪಂಡ ತಂಡಗಳು ಗೆಲುವು ದಾಖಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.
ಮೊದಲ ಪಂದ್ಯದಲ್ಲಿ ಅಪ್ಪಂಡೇರಂಡ ತಂಡ ಮುರುವಂಡ ತಂಡವನ್ನು 2–0 ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರರಾದ ಚೇತನ್ 13ನೇ ನಿಮಿಷದಲ್ಲಿ, ಆರ್ಯನ್ 34ನೇ ನಿಮಿಷದಲ್ಲಿ ಗೋಲು ಬಾರಿಸಿದರು.
2ನೇ ಪಂದ್ಯದಲ್ಲಿ ತೀತಿಮಾಡ ತಂಡವು ಕಂಜಿತಂಡ ತಂಡವನ್ನು ಟೈಬ್ರೇಕರ್‌ನಲ್ಲಿ ಒಟ್ಟು 14–13 ಗೋಲುಗಳಿಂದ ಸೋಲಿಸಿತು. ಪಂದ್ಯದ ದ್ವಿತೀಯಾರ್ಧ ಪೂರ್ಣಗೊಳ್ಳುವಾಗ ಉಭಯ ತಂಡಗಳು ಎರಡು ಗೋಲಿನ ಸಮಬಲ ಸಾಧಿಸಿತು. ವಿಜೇತ ತಂಡದ ಪರ 8ನೇ ಮತ್ತು 18ನೇ ನಿಮಿಷದಲ್ಲಿ ಯಶಸ್ ಗೋಲು ಬಾರಿಸಿದರೆ, ಕಂಜಿತಂಡ ತಂಡದ ಪರವಾಗಿ ಅತಿಥಿ ಆಟಗಾರ 34ನೇ ಮತ್ತು 40ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಬಳಿಕ ನಡೆದ ಟೈಬ್ರೇಕರ್‌ನಲ್ಲಿ ವಿಜೇತ ತಂಡದ ಪರವಾಗಿ 14 ಗೋಲು ದಾಖಲಾದರೆ, ಪರಾಜಿತ ತಂಡದ ಪರವಾಗಿ 13 ಗೋಲು ದಾಖಲಾಯಿತು. ತೀತಿಮಾಡ ತಂಡದ ಪರವಾಗಿ ಅಂತರರಾಷ್ಟ್ರೀಯ ಆಟಗಾರ ಮೇಕೇರೀರ ನಿಕ್ಕಿನ್ ತಿಮ್ಮಯ್ಯ ಆಡಿ ಗಮನ ಸೆಳೆದರು.
3ನೇ ಪಂದ್ಯದಲ್ಲಿ ಅಮ್ಮಣಿಚಂಡ ತಂಡವು ಟೂರ್ನಿಗೆ ಗೈರು ಹಾಜರಾದ ಕಾರಣ ಕೇಳಪಂಡ ತಂಡ ವಾಕ್ ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶಿಸಿತು. ದಿನದ ಕೊನೆಯ ಪಂದ್ಯದಲ್ಲಿ ಕುಪ್ಪಂಡ ತಂಡವು ಕೋಲತಂಡ ತಂಡವನ್ನು 5–0 ಗೋಲುಗಳಿಂದ ಪರಾಭವಗೊಳಿಸಿ ಮುನ್ನಡೆ ಸಾಧಿಸಿತು. ಕುಪ್ಪಂಡ ತಂಡದ ಪರವಾಗಿ ಅತಿಥಿ ಆಟಗಾರ ಪ್ರತೀಕ್ 4ನೇ ನಿಮಿಷದಲ್ಲಿ, ಮತ್ತೋರ್ವ ಅತಿಥಿ ಆಟಗಾರ ಅಪ್ಪಚೆಟ್ಟೋಳಂಡ ಅಯ್ಯಪ್ಪ 20ನೇ, 25ನೇ, 29ನೇ ನಿಮಿಷದಲ್ಲಿ ಮತ್ತು ಭವೀನ್ ಕುಶಾಲಪ್ಪ 23ನೇ ನಿಮಿಷದಲ್ಲಿ ಗೋಲು ದಾಖಲಿಸಿ ಅಂತರ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಟುರ್ನಿಯ ನಿರ್ದೇಶಕ ಕುಪ್ಪಂಡ ದಿಲನ್ ಬೋಪಣ್ಣ ಅವರ ನೇತೃತ್ವದಲ್ಲಿ ಕಳ್ಳಿಚಂಡ ಗೌತಮ್, ಕರವಂಡ ಅಪ್ಪಣ್ಣ, ಪಟ್ರಪಂಡ ಮ್ಯಾಂಡಿ ಮಂದಣ್ಣ, ಬೊಳ್ಳಚಂಡ ನಾಣಯ್ಯ ಹಾಗೂ ಮೂಕಚಂಡ ನಿರನ್ ನಾಚಪ್ಪ ಮೊದಲ ದಿನದ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.
ಇಂದಿನ(ಡಿ.22) ಪಂದ್ಯ
ಬೆಳಿಗ್ಗೆ 10– ತೀತಮಾಡ ಮತ್ತು ಚೇಂದಂಡ ಬೆಳಿಗ್ಗೆ 11– ಮಳವಂಡ ಮತ್ತು ಕೇಳಪಂಡಮಧ್ಯಾಹ್ನ 1– ಕಳ್ಳಿಚಂಡ ಮತ್ತು ಚಂದೂರ ಮಧ್ಯಾಹ್ನ 2– ಮೇಚಿಯಂಡ ಮತ್ತು ಚೇಂದಿರ ಮಧ್ಯಾಹ್ನ 3– ಕಡೇಮಾಡ ಮತ್ತು ಕೊಂಗಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.