ADVERTISEMENT

ರಸ್ತೆ ಅಪಘಾತ: ಎಸ್‌.ಎಂ.ಕೃಷ್ಣ ವಿಶೇಷ ಕಾರ್ಯದರ್ಶಿಯಾಗಿದ್ದ ಅಪ್ಪಯ್ಯ ಸಾವು

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 13:23 IST
Last Updated 4 ಜೂನ್ 2019, 13:23 IST
ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜಾಗಿರುವುದು
ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜಾಗಿರುವುದು   

ಕುಶಾಲನಗರ (ಕೊಡಗು ಜಿಲ್ಲೆ): ಮಡಿಕೇರಿ– ಹಾಸನ ರಾಜ್ಯ ಹೆದ್ದಾರಿಯ ತೊರೆನೂರು ಬಳಿ ಮಂಗಳವಾರ ಲಾರಿ ಮತ್ತು ಕಾರು ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಂದಾಯ ಇಲಾಖೆ ನಿವೃತ್ತ ಸಹಾಯಕ ಆಯುಕ್ತ ಹಾಗೂ ರಾಜ್ಯದ ಮೂವರು ಮುಖ್ಯಮಂತ್ರಿಗಳ ವಿಶೇಷ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸಿದ್ದ ಡಾ.ಕೆ.ಎ. ಅಪ್ಪಯ್ಯ (63) ಮೃತಪಟ್ಟಿದ್ದಾರೆ.

ಮಡಿಕೇರಿ ತಾಲ್ಲೂಕಿನ ಮೂನಾರ್ಡು ಸಮೀಪದ ಕುಂಬಳದಾಳು ಗ್ರಾಮದ ಅಪ್ಪಯ್ಯ ನಿವೃತ್ತರಾದ ಬಳಿಕ ಬೆಂಗಳೂರಿನ ಹೆಬ್ಬಾಳದಲ್ಲಿ ನೆಲೆಸಿದ್ದರು. ನಾಗದೇವತೆ ಪೂಜೆಗೆಂದು ಪತ್ನಿ ಜತೆಗೆ ಸ್ವಂತ ಊರಿಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಎಸ್.ಎಂ.ಕೃಷ್ಣ, ಬಿ.ಎಸ್‌.ಯಡಿಯೂರಪ್ಪ ಹಾಗೂ ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಪ್ಪಯ್ಯ ವಿಶೇಷ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಕಂದಾಯ ಇಲಾಖೆಗೆ ಮರಳಿ ನಿವೃತ್ತರಾಗಿದ್ದರು.

ADVERTISEMENT
ಡಾ.ಅಪ್ಪಯ್ಯ

ಮುಖಾಮುಖಿ ಡಿಕ್ಕಿ ರಭಸಕ್ಕೆ ಲಾರಿಯು ಹಳ್ಳಕ್ಕೆ ಇಳಿದಿದೆ. ಕಾರು ರಸ್ತೆಯ ಎಡಬದಿ ತಡೆಗೋಡೆಗೆ ಹೊಡೆದು ಜಖಂಗೊಂಡಿದೆ. ಕಾರು ಚಲಾಯಿಸುತ್ತಿದ್ದ ಅಪ್ಪಯ್ಯ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿರುವ ಅವರ ಪತ್ನಿ ಮೀನಾಕ್ಷಿ ಅವರನ್ನು ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಲಾರಿ ಚಾಲಕ ಪ್ರಕಾಶ್‌ ಸಹ ಗಾಯಗೊಂಡಿದ್ದು, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಕು ನಾಯಿ ಪಾರು: ಅಪ್ಪಯ್ಯ ಜೊತೆ ಸಾಕು ನಾಯಿಯೂ ಕಾರಿನಲ್ಲಿ ಪ್ರಯಾಣಿಸುತಿತ್ತು. ಅಪಘಾತದ ವೇಳೆ ಕಾರಿನಿಂದ ಹೊರಬಂದ ಪ್ರೀತಿಯ ನಾಯಿ, ಬೊಗಳುತ್ತಾ ಅಪ್ಪಯ್ಯ ಅವರ ಮೃತದೇಹದ ಬಳಿಗೆ ತೆರಳಿ ಕಣ್ಣೀರು ಸುರಿಸಿತು. ಮೃತದೇಹವನ್ನು ಕುಶಾಲನಗರಕ್ಕೆ ಸಾಗಿಸುವಾಗ ನಾಯಿಯನ್ನು ಸಂಬಂಧಿಕರೊಬ್ಬರು ತಮ್ಮ ಕಾರಿಗೆ ಹತ್ತಿಸಿಕೊಳ್ಳಲು ಪ್ರಯತ್ನಿಸಿದರೂ ಯಜಮಾನನ ಕಾರಿನ ಹತ್ತಿರಕ್ಕೆ ಎಳೆದೊಯ್ಯುತ್ತಿದ್ದ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.