
ವಿರಾಜಪೇಟೆ: ಸಮೀಪದ ಅರಮೇರಿ ಗ್ರಾಮದಲ್ಲಿ ಬೆಪ್ಪುನಾಡ್ನ 11 ಊರುಗಳ ಸಾಂಪ್ರದಾಯಕ ವಾರ್ಷಿಕ ಹುತ್ತರಿ ಕೋಲಾಟ ಶನಿವಾರ ವಿಜೃಂಭಣೆಯಿಂದ ನಡೆಯಿತು.
ಕೋಲಾಟಕ್ಕೆ ಸಮುದಾಯದವರು ದುಡಿಕೊಟ್ಟ್ ಪಾಟ್ ಹಾಗೂ ಊರುತಕ್ಕರಾದ ಅಳಮಂಡ ಯು. ಪೂಣಚ್ಚ ಅವರು ಕೋಲ್ ಹಿಡಿದು ಶುಭಕೋರುವ ಮೂಲಕ ಚಾಲನೆ ನೀಡಿದರು.
ಅರಮೇರಿಯ ಊರು ಮಂದ್‌ನಿಂದ ಆರಂಭವಾದ ಮೆರವಣಿಗೆಯು ಮಾದಪಟ್ಟ ಕೋಲ್ ಮಂದ್ನಲ್ಲಿ ಅಂತ್ಯಗೊಂಡಿತು. ಅರಮೇರಿ ಗ್ರಾಮದ ಕೆಂಬಟ್ಟಿ ಸಮುದಾಯದವರು ಕಳಿ ಪಾಟ್ (ವಿವಿಧ ವೇಷ) ಧರಿಸಿ ದುಡಿಕೊಟ್ಟ್ ಪಾಟ್ ನುಡಿಸಿಕೊಂಡು ಮಂದ್ ಮೆರವಣಿಗೆಯಲ್ಲಿ ಭಾಗವಹಿಸಿದರು. ಮಾದಪಟ್ಟ ಮಂದ್‌ನಲ್ಲಿ ಕೊಡವ ಜನಾಂಗ ಬಾಂಧವರು ಆಲದ ಮರಕ್ಕೆ 6 ಬಾರಿ ಪ್ರದಕ್ಷಿಣೆ ಹಾಕುತ್ತ ಕೋಲಾಟ ಪ್ರದರ್ಶಿಸಿದರು.
ಬಳಿಕ ಮಂದ್‌ನಲ್ಲಿ ಸಾಂಪ್ರದಾಯಕ ಕೋಲಾಟ ಹಾಗೂ ಪರಿಯ ಕಳಿ ನಡೆಯಿತು. ಈ ಸಂದರ್ಭ ಸೀಮೆ ತಕ್ಕರಾದ ಮಾತಂಡ ಧೀರಜ್ ಚೆಂಗಪ್ಪ, ನಾಡ್ ತಕ್ಕರಾದ ಐಚ್ಚೇಟ್ಟಿರ ರಂಜಿ ಕುಟ್ಟಯ್ಯ ಹಾಗೂ ಕೆಂಬಟ್ಟಿ ಜನಾಂಗದ ಪ್ರಮುಖರಾದ ಕಾಳೆಕುಟ್ಟಡ ಮುತ್ತಣ್ಣ (ಬೋಜ) ಸೇರಿ ಅರಮೇರಿ, ಮೈತಾಡಿ, ಬೋಳ್ಳುಮಾಡ್ ಗ್ರಾಮಗಳಿಂದ ಆಗಮಿಸಿದ ಕೊಡವ ಜನಾಂಗ ಬಾಂಧವರು, ಸ್ಥಳೀಯರು, ಗ್ರಾಮಸ್ಥರು ಮೆರವಣಿಗೆ ಹಾಗೂ ಕಾರ್ಯಕ್ರಮಕ್ಕೆ ಮೆರೆಗು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.