
ಸೋಮವಾರಪೇಟೆ: ಐಗೂರಿನ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸೋಮವಾರ ನಡೆದ 9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ, ವಿಚಾರಗೋಷ್ಠಿಗಳು ಸಾಹಿತ್ಯಾಸಕ್ತರ ಗಮನ ಸೆಳೆದವು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಕಾಜೂರು ಸತೀಶ್ ಅವರು, ‘ಕವಿಗಳು ಕೇವಲ ಹೊಗಳುಭಟ್ಟರಲ್ಲ ಅವರು ತಮ್ಮ ಕವನದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ’ ಎಂದರು.
‘ತಮ್ಮ ಸುತ್ತಲಿನ ಪರಿಸರದಲ್ಲಿ ಅಧ್ಯಯನಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಇಂದಿನ ಕವಿಗೋಷ್ಠಿಯಲ್ಲಿ ಉತ್ತಮ ಕವಿತೆಗಳನ್ನು ವಾಚಿಸುವ ಮೂಲಕ ಸಮಾಜದ ಕಣ್ಣು ತೆರೆಸುವ ಕೆಲಸವನ್ನು ಕವಿಗಳು ಮಾಡಿದ್ದಾರೆ’ ಎಂದರು.
ವಸಂತಿ ರವೀಂದ್ರ ‘ಮೌನ ಆವರಿಸಿದಾಗ’, ಹೇಮಂತ್ ಪಾರೇರ ‘ಸೌಂದರ್ಯ ಮಾಸುವುದು’, ಮಹೇಶ್ ತಿಮ್ಮಯ್ಯ ‘ವಿಲಾಸಿ ಜೀವನದಿಂದ ಸಾಲದ ಶೂಲ’, ಅನಸೂಯ ‘ನಮ್ಮೂರ ಕನ್ನಡಸಿರಿ’, ದೀಪಿಕಾ ಸುದರ್ಶನ್ ‘ಮಳೆಗೆ ಹಸಿರಾಗುವ ಎಲೆ’, ಲತಾ ಕೃಷ್ಣ ‘ತಮ್ಮ ಬದುಕೆಂಬ ಹೊತ್ತಿಗೆ’, ಪದ್ಮಾವತಿ ‘ಸಾಹಿತ್ಯದ ಅಮೃತ ಸಿಂಚನ’, ಸುಮನಾ ಗೌತಮ್ ‘ನಾವೆಷ್ಟು ಸಂತೋಷದಿಂದ ಇದ್ದೇವೆ, ನಮ್ಮ ಮಕ್ಕಳೆಷ್ಟು ಸಂತೋಷದಿಂದ ಇದ್ದಾರೆ’, ನಾಗರಾಜ್ ಅಚಾರ್ ‘ಆನೆ ಸಾಕಬೇಕಿದೆ ಕವನ ವಾಚಿಸಿ’ ಪ್ರೇಕ್ಷಕರ ಗಮನ ಸೆಳೆದರು. ಹಿರಿಯ ಸಾಹಿತಿಗಳಾದ ನ.ಲ ವಿಜಯ, ಎ.ಆರ್.ಮಮತಾ, ಶಾಂತಳ್ಳಿ ಗಣೇಶ್ ಭಾಗವಹಿಸಿದ್ದರು.
ಎಸ್‌ವೈಎಸ್ ಸಾಂತ್ವನ ಸಮಿತಿಯ ಉಪಾಧ್ಯಕ್ಷ ಶಾಫಿ ಸಅದಿ ಅಧ್ಯಕ್ಷತೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಹಲವು ವಿಚಾರ ಮಂಥನಗಳು ನಡೆದವು.
ಯಡೂರು ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಡಿ.ಹರ್ಷ ‘ಗ್ರಾಮೀಣ ಜನರ ಜನಪದ ಹಿನ್ನೆಲೆಯ ಸುಗ್ಗಿ ಹಬ್ಬಗಳು’, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ‘ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆ’, ರೈತಾಪಿ ವರ್ಗದವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ ಅವರು ವಿಷಯ ಮಂಡಿಸಿದರು. ರೈತ ಮುಖಂಡ ಕೀಜನ ಎಂ.ಲಕ್ಷ್ಮಣ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಕನ್ನಡದ ಉಳಿವಿಗೆ ಒತ್ತಾಯ
ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಡಿ.ವಿಜೇತ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸೋಮವಾರಪೇಟೆ ವಿರಕ್ತ ಮಠದ ನಿಶ್ಚಲನಿರಂಜನ್ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ‘ಹಿಂದಿ ಮತ್ತು ಇಂಗ್ಲೀಷ್ ಭಾಷಾ ವ್ಯಾಮೋಹಕ್ಕೆ ಬಲಿಯಾಗುತ್ತಿದ್ದೇವೆ. ಅನ್ಯಭಾಷಿಕರೊಂದಿಗೆ ನಾವು ವ್ಯವಹರಿಸುತ್ತಿದ್ದು, ಅವರಿಗೂ ನಮ್ಮ ಭಾಷೆಯನ್ನು ಕಲಿಸಬೇಕಿದೆ’ ಎಂದರು.
ಮಾದಾಪುರದ ನಿರ್ಮಲ ಮಾತೆ ದೇವಾಲಯದ ಫಾದರ್ ಸೂಸೈ ಮಾತನಾಡಿ, ‘ಮನೆಯಲ್ಲಿಯೇ ನಾವು ಕನ್ನಡ ಬಳಸುವುದರೊಂದಿಗೆ ನಮ್ಮ ಮಕ್ಕಳಿಗೂ ಭಾಷಾಭಿಮಾನ ಮೂಡಿಸುವ ಕೆಲಸ ಪೋಷಕರು ಮಾಡಬೇಕು’ ಎಂದರು.
ಕೊಡಗು ಜಿಲ್ಲಾ ಎಸ್‌ವೈಎಸ್ ಸಾಂತ್ವನ ವಿಭಾಗದ ಉಪಾಧ್ಯಕ್ಷ ಶಾಫಿ ಸಹಧಿ ಮಾತನಾಡಿ, ‘ರಾಜ್ಯದಲ್ಲಿ ಕನ್ನಡ ಭಾಷೆ ಎಲ್ಲ ಧರ್ಮದವರ ಮಾತೃ ಭಾಷೆಯಾಗಿದೆ. ವಿಶಾಲ ಮತ್ತು ಸಾವಿರಾರು ವರ್ಷ ಇತಿಹಾಸ ಇರುವ ಕನ್ನಡ ಭಾಷೆ ಉಳಿಸಿ ಬೆಳೆಸಲು ರಾಜ್ಯದ ಎಲ್ಲ ಜನರೂ ಮುಂದಾಗಬೇಕು’ ಎಂದರು.
ಸಮ್ಮೆಳನಾಧ್ಯಕ್ಷೆ ಜಲಜಾ ಶೇಖರ್, ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕುಂಬೂರು ವಿಶ್ವ, ಕೊಡಗು ಜಿಲ್ಲಾ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಎನ್.ದೀಪಕ್, ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಕೆ.ಎ.ಪ್ರಕಾಶ್, ಸೃಷ್ಟಿಯ ಚಿಗುರು ಕವಿ ಬಳಗದ ಅಧ್ಯಕ್ಷ ಕೆ.ಪಿ.ಸುದರ್ಶನ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಶೀಲಾ ಡಿಸೋಜ ಭಾಗವಹಿಸಿದ್ದರು.
ಬಹಿರಂಗ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳು
ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳಗುಡಿ ಬೆಟ್ಟಕ್ಕೆ ಸ್ಕೈವಾಕ್ ಮತ್ತು ಮೂಲ ಸೌಕರ್ಯ ಕಲ್ಪಿಸಬೇಕು.
ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಳ್ಳಿ ಜಲಪಾತ ಮತ್ತು ಹೊನ್ನಮ್ಮನ ಕೆರೆ ಪ್ರವಾಸಿ ತಾಣಗಳಲ್ಲಿ ರೋಪ್‌ವೇ ನಿರ್ಮಿಸಬೇಕು.
ಹಾರಂಗಿ ಜಲಾಶಯ ಹಿನ್ನೀರಿನಲ್ಲಿ ದೋಣಿ ವಿಹಾರ ಅನುಷ್ಠಾನಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು
ಚನ್ನರಾಯಪಟ್ಟಣ ಅರಕಲಗೂಡು ಸೋಮವಾರಪೇಟೆ ಮಡಿಕೇರಿ ವಿರಾಜಪೇಟೆ ಕಣ್ಣೂರುರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕು.
ಗರ್ವಾಲೆ ಮತ್ತು ಬೆಟ್ಟದಳ್ಳಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು
ಮಾದಾಪುರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆರೆಯಬೇಕು
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಹುತೇಕ ಸಿಬ್ಬಂದಿಗಳು ತ್ರಿಭಾಷಾ ಸೂತ್ರದಂತೆ ಕನ್ನಡದಲ್ಲಿಯೇ ವ್ಯವಹರಿಸಬೇಕು
ಮಾದಾಪುರ ಗರ್ವಾಲೆ ಮತ್ತು ಹರದೂರು ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಂತೆ ಮಾದಾಪುರ ಕೇಂದ್ರವನ್ನಾಗಿಟ್ಟುಕೊಂಡು ಪ್ರತ್ಯೇಕ ಕಂದಾಯ ಹೋಬಳಿಯನ್ನಾಗಿ ಮಾಡಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.