ನಾಪೋಕ್ಲು: ಕಾವೇರಿ ತೀರದ ಪವಿತ್ರ ಯಾತ್ರಾ ಸ್ಥಳ ಬಲಮುರಿಯಲ್ಲಿ ಕಾವೇರಿ ಜಾತ್ರೆ ಶನಿವಾರ ಸಂಭ್ರಮದಿಂದ ಜರುಗಲಿದ್ದು, ಅಗತ್ಯ ಸಿದ್ಧತೆ ಪೂರ್ಣಗೊಂಡಿದೆ.
ಕಣ್ವ ಮುನೀಶ್ವರ ದೇವಾಲಯ ಹಾಗೂ ಅಗಸ್ತ್ಯೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಜರುಗಲಿದೆ. ಮಧ್ಯಾಹ್ನ 12 ಗಂಟೆಗೆ ಕಾವೇರಿ ನದಿಗೆ ಮಹಾ ಮಂಗಳಾರತಿ ನಡೆಯಲಿದೆ. ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಮಹಾಪೂಜೆ ಕೈಗೊಳ್ಳಲಾಗಿದ್ದು , ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಅಗಸ್ತ್ಯೇಶ್ವರ ದೇವಾಲಯ ಸಮಿತಿ ಹಾಗೂ ಮಹಾದೇವ ಸ್ಪೋರ್ಟ್ ಕ್ಲಬ್ ವತಿಯಿಂದ ಭಕ್ತಿಗೀತೆ ಗಾಯನ ನಡೆಯಲಿದೆ. ಕಣ್ವ ಮುನೀಶ್ವರ ದೇವಾಲಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ.
‘ಜಾತ್ರೆಗೆ ಸಂಬಂಧಿಸಿದಂತೆ ದೇವಾಲಯಗಳನ್ನು ಅಲಂಕರಿಸಲಾಗಿದೆ. ಸ್ನಾನ ಘಟ್ಟಕ್ಕೆ ತೆರಳುವ ಹಾದಿಯನ್ನು ಸ್ವಚ್ಚಗೊಳಿಸಲಾಗಿದೆ. ಉತ್ಸವ ವಿಜೃಂಭಣೆಯಿಂದ ನೆರವೇರಲು ಅಗತ್ಯ ಕ್ರಮಕೈಗೊಳ್ಳಲಾಗಿದೆ’ ಎಂದು ಅಗಸ್ತ್ಯೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೊಂಗೀರಂಡ ಸಾದು ತಮ್ಮಯ್ಯ ಹೇಳಿದರು. ‘ಮೂರ್ನಾಡು, ನಾಪೋಕ್ಲು, ಹೊದ್ದೂರು, ಕಬಡಕೇರಿ, ಪಾಲೂರು, ಪಾರಾಣೆ ಮತ್ತಿತರ ಭಾಗಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಪೂಜಾ ಕಾರ್ಯಗಳನ್ನು ನೆರವೇರಿಸಲಿದ್ದಾರೆ’ ಎಂದರು.
ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ತೆರಳಲು ಸಾಧ್ಯವಾಗದ ಭಕ್ತರು ಅಧಿಕ ಸಂಖ್ಯೆಯಲ್ಲಿ ಬಲಮುರಿಗೆ ಬಂದು ಕಾವೇರಿ ತೀರ್ಥಸ್ನಾನ ಮಾಡಿ ಪುನೀತರಾಗಿ ತೆರಳುವರು. ಪ್ರತಿವರ್ಷ ಕಾವೇರಿ ತೀರ್ಥೋದ್ಭವದ ಮರುದಿನ ಬಲಮುರಿ ಜಾತ್ರೆ ನಡೆಯುವುದು ರೂಢಿ. ತಲಕಾವೇರಿಯಂತೆ ಬಲಮುರಿ ಸಹ ಬಲು ಪಾವಿತ್ರ್ಯದ ಪುಣ್ಯಸ್ಥಳ. ಬಲಮುರಿಯಲ್ಲಿರುವ ಕಣ್ವೇಶ್ವರ ಹಾಗೂ ಅಗಸ್ತ್ಯೇಶ್ವರ ದೇವಾಲಯಗಳಿವೆ. ಕಾವೇರಿ ನದಿಯ ಎಡಭಾಗದಲ್ಲಿ ಕಣ್ವೇಶ್ವರ ಹಾಗೂ ಬಲಭಾಗದಲ್ಲಿ ಅಗಸ್ತ್ಯೇಶ್ವರ ದೇವಾಲಯಗಳಿದ್ದು , ಸುಂದರ ಪರಿಸರದಿಂದ ಕೂಡಿದೆ. ಇಲ್ಲಿ ಪಿಂಡ ಪ್ರದಾನ ಮಾಡಿದರೆ ತಲಕಾವೇರಿಯಲ್ಲಿ ಮಾಡಿದಷ್ಟೇ ಪುಣ್ಯ ಬರುತ್ತದೆ ಎಂಬುದು ಭಕ್ತ ಜನರ ನಂಬಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.