ADVERTISEMENT

ನಾರಿ ಶಕ್ತಿಯ ಸಂಕೇತ ಚನ್ನಮ್ಮ: ಕೆ.ಆರ್.ಬಿಂದು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 5:10 IST
Last Updated 24 ಅಕ್ಟೋಬರ್ 2025, 5:10 IST
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಡಿಕೇರಿಯ ಗಾಂಧಿ ಭವನದಲ್ಲಿ ಗುರುವಾರ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಉದ್ಘಾಟಿಸಿದರು
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಡಿಕೇರಿಯ ಗಾಂಧಿ ಭವನದಲ್ಲಿ ಗುರುವಾರ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಉದ್ಘಾಟಿಸಿದರು   

ಮಡಿಕೇರಿ: ರಾಜ್ಯದ ಜನಪದ ನಾಯಕಿಯಾಗಿ ಧೈರ್ಯ ಮತ್ತು ದೇಶ ಪ್ರೇಮಕ್ಕೆ ಉದಾಹರಣೆಯಾದ ಚನ್ನಮ್ಮ ಕರ್ನಾಟಕದ ವೀರ ವನಿತೆ ಮಾತ್ರವಲ್ಲ ನಾರಿ ಶಕ್ತಿಯ ಸಂಕೇತ ಎಂದು ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕಿ ಕೆ.ಆರ್.ಬಿಂದು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ವನಿತೆ ಕಿತ್ತೂರು ರಾಣಿ ಚನ್ನಮ್ಮ ಪ್ರತಿಯೊಬ್ಬರಿಗೂ ಮಾದರಿ ಎಂದು ಶ್ಲಾಘಿಸಿದರು.

ADVERTISEMENT

ಬಾಲ್ಯದಲ್ಲಿಯೇ ಕತ್ತಿ ವರಸೆ, ಬಿಲ್ಲುಗಾರಿಕೆ, ಕುದುರೆ ಸವಾರಿ ಕಲಿತಿದ್ದ ಕಿತ್ತೂರು ರಾಣಿ ಚನ್ನಮ್ಮ ಅವರು 1857 ರ ಸ್ವಾತಂತ್ರ್ಯ ಹೋರಾಟಕ್ಕಿಂತ ಮೊದಲು ಬ್ರಿಟಿಷರ ವಿರುದ್ಧ ಹೋರಾಡಿದ್ದರು ಎಂದು ತಿಳಿಸಿದರು.

‘ಕಪ್ಪ ಕೊಡಬೇಕೆ, ಕಪ್ಪ? ಕೊಡಬೇಕೆ? ನಿಮಗೇಕೆ ಕೊಡಬೇಕು ಕಪ್ಪ? ನೀವು ಏನು ಒಡಹುಟ್ಟಿದವರೆ, ನೆಂಟರೆ, ಬಂಧುಗಳೇ, ನೀವೇನು ಇಲ್ಲಿ ಉತ್ತಿರ, ಬಿತ್ತಿರ.. ರೈತರು ಕೃಷಿಕರು ಈ ಕೆಲಸ ಮಾಡುತ್ತಾರೆ. ಕಬ್ಬು ತಿನ್ನಲು ಬಿಟ್ಟ ತಪ್ಪಿಗೆ ಕೂಲಿ ಕೊಡಬೇಕಾ, ಕಿತ್ತೂರು ಕಟ್ಟಿ ಬೆಳೆಸಿದ ಆಸ್ತಿ ಏನು, ನಿಮಗೇನು ಇದೆ ಕಪ್ಪ ಕೇಳಲು, ನಾವೇಕೆ ಕೊಡಬೇಕು ನಿಮಗೆ ಕಪ್ಪ ? ಎಂದು ಬ್ರಿಟಿಷರ ವಿರುದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರು ಕೆಂಡಕಾರಿದ್ದರು ಎಂದು ಅವರು ಹೇಳಿದರು.

ಕಠಿಣ ಪರಿಸ್ಥಿತಿಯಲ್ಲಿಯೂ ಹೋರಾಡಿ ಸ್ಫೂರ್ತಿಯನ್ನು ಚನ್ನಮ್ಮ ಅವರು ತೋರಿದ್ದರು. ರಾಣಿ ಲಕ್ಷ್ಮೀಬಾಯಿಗಿಂತ ಮೊದಲು 1824ರಲ್ಲಿ ರಾಜ್ಯದ ಒಂದು ಸಂಸ್ಥಾನದ ರಾಣಿ ಚನ್ನಮ್ಮ ನಡೆಸಿದ ಹೋರಾಟ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟ ಆಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಮಾತನಾಡಿ, ‘ಕಿತ್ತೂರು ರಾಣಿ ಚನ್ನಮ್ಮ ಅವರ ದೇಶ ಭಕ್ತಿ, ರಾಷ್ಟ್ರ ಪ್ರೇಮ ಮೆಚ್ಚುವಂತದ್ದು, ಸ್ವಾತಂತ್ರ್ಯಕ್ಕಾಗಿ ಅವರು ಹೋರಾಡಿದ್ದಾರೆ’ ಎಂದರು.

ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಸಾಕಷ್ಟು ಬದಲಾವಣೆಗಳು ಆಗಿದ್ದು, ಆ ನಿಟ್ಟಿನಲ್ಲಿ ನೆಲದ ಕಾನೂನನ್ನು ಪ್ರತಿಯೊಬ್ಬರೂ ಗೌರವಿಸಬೇಕು ಮತ್ತು ಪಾಲಿಸಬೇಕು. ಪ್ರಶ್ನೆ ಮಾಡುವ ಮನೋಭಾವ ಎಲ್ಲರಲ್ಲಿಯೂ ಇರಬೇಕು ಎಂದರು.

ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಮಾತನಾಡಿದರು. ಶಿಕ್ಷಕಿ ರಕ್ಷಿತ, ನಿವೃತ್ತ ಶಿಕ್ಷಕ ಬಿ.ಸಿ.ಶಂಕರಯ್ಯ ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ, ಬಿ.ಸಿ.ಶಂಕರಯ್ಯ, ಮಣಜೂರು ಮಂಜುನಾಥ್ ಭಾಗವಹಿಸಿದ್ದರು.

ವಿದ್ಯಾರ್ಥಿಗಳಲ್ಲಿ ಗುರಿ ಮತ್ತು ಉದ್ದೇಶ ಇರಬೇಕು.
– ಸಿದ್ಧರಾಜು ಬೆಳ್ಳಯ್ಯ ಮದೆ, ಮಹೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ
ಕಿತ್ತೂರು ರಾಣಿ ಚೆನ್ನಮ್ಮ ಅವರ ತ್ಯಾಗ ಬಲಿದಾನವನ್ನು ಸದಾ ಸ್ಮರಿಸಬೇಕು.
– ನಿತಿನ್ ಚಕ್ಕಿ, ಉಪ ವಿಭಾಗಾಧಿಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.