ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗೋ ಕಳವುಗಳು ಹೆಚ್ಚುತ್ತಿದ್ದರೂ ಸರ್ಕಾರ ಯಾವುದೇ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿಯ ಹಿರಿಯ ಮುಖಂಡ ಕೆ.ಜಿ.ಬೋಪಯ್ಯ ದೂರಿದರು.
‘ಕಾನೂನು ಸುವ್ಯವಸ್ಥೆ ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲೇ ಕುಸಿದಿದೆ. ಸರ್ಕಾರವನ್ನು ಪ್ರಶ್ನೆ ಮಾಡುವವರಿಗೆ ಧಮಕಿ ಹಾಕಲಾಗುತ್ತಿದೆ. ನೊಂದವರು ದೂರು ಕೊಡಲು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಕೊಡಗಿನಲ್ಲಿ ಇಸ್ಪೀಟ್ ದಂಧೆ ಅವ್ಯಾಹತವಾಗಿ ನಡೆದಿದೆ. ಅಕ್ರಮ ಮರಳು ಸಾಗಾಣಿಕೆ ಹಾಗೂ ಅಕ್ರಮ ಮದ್ಯ ಮಾರಾಟವೂ ಇದೆ ಎಂದು ಆರೋಪಿಸಿದರು.
‘ಪೊಲೀಸರು ಗಾಂಜಾ ಪ್ರಕರಣಗಳನ್ನು ಬೇಧಿಸುವಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ’ ಎಂದು ಶ್ಲಾಘಿಸಿದ ಅವರು, ‘ಇದೇ ಬಗೆಯಲ್ಲಿ ಗೋಕಳ್ಳರನ್ನೂ ಹಿಡಿಯಬೇಕು’ ಎಂದು ಒತ್ತಾಯಿಸಿದರು.
ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ಮಾತನಾಡಿ, ‘ಕೆ.ನಿಡುಗಣೆ ಗ್ರಾಮದಲ್ಲಿ ನನ್ನ ಮನೆಯಲ್ಲಿ ಗುರುವಾರ ನಸುಕಿನಲ್ಲಿ ಒಂದು ಹಸುವನ್ನು ಕಳ್ಳತನ ಮಾಡಿದ್ದಾರೆ. ಕಳವು ಮಾಡುವಾಗ ಎಚ್ಚರವಾಗಿ ನನ್ನ ಮಗ ಅವರನ್ನು ಅಟ್ಟಿಸಿಕೊಂಡು ಹೋಗುವ ಭರದಲ್ಲಿ ಬಿದ್ದು ಗಾಯಗೊಂಡರು. ಪೊಲೀಸರಿಗೆ ಹಾಗೂ ಸಹಾಯವಾಣಿಗೆ ಮಾಹಿತಿ ನೀಡಿದರೂ ಸಕಾಲಕ್ಕೆ ಬಾರದೇ ಸೂಕ್ತವಾಗಿ ಸ್ಪಂದಿಸಲಿಲ್ಲ’ ಎಂದು ಆರೋಪಿಸಿದರು.
ಆಸ್ಸಾಂ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾ ದೇಶದ ಅಕ್ರಮ ನುಸುಳುಕೋರರು ಕೊಡಗಿನಲ್ಲಿದ್ದಾರೆ ಎಂಬ ಆರೋಪದ ವಿರುದ್ಧ ಪೊಲೀಸರು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡ ರವಿ ಕಾಳಪ್ಪ ಮಾತನಾಡಿ, ‘ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗೋರಕ್ಷಕರ ವಿರುದ್ಧವೇ ಪ್ರಕರಣ ದಾಖಲಿಸುತ್ತಿದೆ. ಇದರಿಂದಾಗಿಯೇ ಗೋಕಳ್ಳತನ ಹೆಚ್ಚುತ್ತಿದೆ’ ಎಂದು ಕಿಡಿಕಾರಿದರು.
ಬಿಜೆಪಿ ಮುಖಂಡರಾದ ಮಹೇಶ್ ಜೈನಿ, ಅರುಣ್‌ಕುಮಾರ್, ರವೀಂದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.