ADVERTISEMENT

ಕೊಡಗು‌: ಕುಡಿಯುವ ನೀರಿಗಾಗಿ ಖಾಲಿ ಕೊಡ ಹಿಡಿದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:06 IST
Last Updated 3 ಜನವರಿ 2026, 6:06 IST
ಗುಹ್ಯ ಗ್ರಾಮದ ನೇತಾಜಿ ಲೇಔಟ್ ನಿವಾಸಿಗಳು  ಶುಕ್ರವಾರ ಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಗುಹ್ಯ ಗ್ರಾಮದ ನೇತಾಜಿ ಲೇಔಟ್ ನಿವಾಸಿಗಳು  ಶುಕ್ರವಾರ ಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.   

ಸಿದ್ದಾಪುರ: ಕುಡಿಯುವ ನೀರಿಗಾಗಿ ಕೊಳವೆ ಬಾವಿ ತೆಗೆದಿದ್ದರೂ, ವಿದ್ಯುತ್ ಸಂಪರ್ಕ ನೀಡದಿರುವ ಗ್ರಾಮ ಪಂಚಯಿತಿ ಆಡಳಿತದ ವಿರುದ್ಧ ಗುಹ್ಯ ಗ್ರಾಮಸ್ಥರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಗುಹ್ಯ ಗ್ರಾಮದ ನೇತಾಜಿ ಲೇಔಟ್‌ನಲ್ಲಿ ದಾನಿಯೊಬ್ಬರು ನೀಡಿದ ಜಾಗದಲ್ಲಿ ಪಂಚಾಯಿತಿ ಕೊಳವೆಬಾವಿ ಕೊರೆಯಿಸಿದ್ದು, ಹಲವು ತಿಂಗಳುಗಳೇ ಕಳೆದಿದ್ದರೂ ವಿದ್ಯುತ್ ಸಂಪರ್ಕ ನೀಡಿರಲಿಲ್ಲ. ಕುಡಿಯುವ ನೀರಿನ ಸಮಸ್ಯೆಯಿಂದಾಗಿ ನಿವಾಸಿಗಳು ಆಡಳಿತಕ್ಕೆ ಮನವಿ ಸಲ್ಲಿಸಿದ್ದರು. ಸ್ಪಂಧಿಸದ ಕಾರಣ ನಿವಾಸಿಗಳು ಪಂಚಾಯಿತಿ ಕಚೇರಿ ಎದುರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.

 ಗ್ರಾಮಸ್ಥ ಎನ್.ಕೆ ಅನಿಲ್ ಮಾತನಾಡಿ, ನೇತಾಜಿ ಲೇಔಟ್‌ನಲ್ಲಿ ಕೊಳವೆ ಬಾವಿ ಕೊರೆಯಿಸಿ, ನೀರಿನ ಸಂಪರ್ಕ ಒದಗಿಸಲು ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ. ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.  ಸದಸ್ಯರು  ಸ್ವ ಹಿತಾಸಕ್ತಿಯ ಕೆಲಸಗಳನ್ನು ಮಾತ್ರ ಮಾಡುತ್ತಿದ್ದಾರೆ. ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಶೀಘ್ರ ಸಮಸ್ಯೆ ಪರಿಹರಿಸದಿದ್ದಲ್ಲಿ  ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದರು.

ADVERTISEMENT

ಕಾರ್ಮಿಕ ಮುಖಂಡ ಎಚ್.ಬಿ ರಮೇಶ್ ಮಾತನಾಡಿ, 40 ಕ್ಕೂ ಹೆಚ್ಚು ಮನೆ ಇರುವ ನೇತಾಜಿ ಲೇಔಟ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕೊಳವೆಬಾವಿಗೆ ಅಳವಡಿಸಲು ತಂದಿದ್ದ ಪೈಪ್‌ಗಳನ್ನು  ರಾತ್ರೋರಾತ್ರಿ ವಾಪಾಸ್ಸು ತೆಗೆದುಕೊಂಡು ಹೋಗಲಾಗಿದೆ ಎಂದು ದೂರಿದರು.

ಕಾರ್ಮಿಕ ಮುಖಂಡ ‌ಎನ್.ಡಿ. ಕುಟ್ಟಪ್ಪನ್ ಮಾತನಾಡಿ, ಸಿದ್ದಾಪುರ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಕಸ ವಿಲೇವಾರಿಗೆ ಲಕ್ಷಾಂತರ ಮೊತ್ತ  ವ್ಯಯಿಸಲಾಗಿದೆ. ಆದರೇ ಕಸದ  ಸಮಸ್ಯೆ ಬಗೆಹರಿದಿಲ್ಲ. ಗುಹ್ಯ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಾಲಿಬಾಲ್ ಮೈದಾನ ಕಾಮಗಾರಿಯಲ್ಲಿ ಭ್ರಷ್ಟಾಚಾರದ ಶಂಕೆ ಇದ್ದು, ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದರು. ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಿಲ್ಲ. ಪೈಪ್ ಲೈನ್ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕು ಎಂದರು.

ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಪಿಡಿಒ ಆಶಾ ಕುಮಾರಿ, ‘ವಿದ್ಯುತ್ ಪರಿವರ್ತಕ ಅಳವಡಿಸಿ, 15 ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ನಿವಾಸಿಗಳಾದ ಉದಯ್, ಶೇಖರ್,ಪರಶುರಾಮ, ಯೇಸುರಾಜ್, ರಾಜನ್, ಮಣಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.