ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕು ಸುಳುಗೋಡು- ದೇವನೂರಿನಲ್ಲಿ ಎರಡು ಜಾನುವಾರು ಮೇಲೆ ದಾಳಿ ನಡೆಸಿ ಕೊಂದ ಹುಲಿಯನ್ನು ಕಾಡಿಗಟ್ಟುವ ಕಾರ್ಯಾಚರಣೆ ಮುಂದುವರಿದಿದೆ.
ಮತ್ತಿಗೂಡು ಸಾಕಾನೆ ಶಿಬಿರದ ದಸರಾ ಆನೆ ಅಭಿಮನ್ಯು ಹಾಗೂ ಶ್ರೀಕಂಠ ಆನೆಗಳನ್ನು ಬಳಸಿಕೊಂಡು ಹುಲಿ ಪತ್ತೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ರಾಜ್ಯ ವನ್ಯ ಜೀವಿ ಸಂರಕ್ಷಣಾ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
‘ತಂಡ ಅರಣ್ಯದಂಚಿನ ಪ್ರದೇಶಗಳನ್ನು ಜಾಲಾಡುತ್ತಿದ್ದರೂ ಮಂಗಳವಾರ ಸಂಜೆವರೆಗೂ ಹುಲಿ ಸುಳಿವು ದೊರೆಯಲಿಲ್ಲ. ಪತ್ತೆಗೆ 8 ಕ್ಯಾಮರಾ ಅಳವಡಿಸಲಾಗಿದೆ’ ಎಂದು ಸಂಕೇತ್ ಪೋವಯ್ಯ ತಿಳಿಸಿದರು.
‘ಹಲವು ತಿಂಗಳ ಹಿಂದೆ ಇಲ್ಲಿ ಹುಲಿ ಸಮಸ್ಯೆ ಇತ್ತು. ಸಾಕಾನೆಗಳ ಸಹಾಯದಿಂದ ಯಶಸ್ವಿಯಾಗಿ ಹುಲಿಯನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ನಡೆದಿತ್ತು. ಈಗ ಮತ್ತೆ ಹುಲಿ ಹಾವಳಿ ಗೋಚರಿಸಿದೆ. ಸುಳುಗೋಡು ದೇವನೂರು ಭಾಗದಲ್ಲಿ ಒಂದು ಕಡೆ ಕಾಫಿ ತೋಟ ಇನ್ನೊಂದು ಬದಿಯಲ್ಲಿ ಅರಣ್ಯ ಇದೆ. ಅದರಿಂದ ಇನ್ನೂ ಎರಡು ದಿನಗಳಲ್ಲಿ ಹುಲಿ ಕಾಡಿಗೆ ಅಟ್ಟುವ ಕಾರ್ಯಾಚರಣೆ ಯಶಸ್ವಿಯಾಗುವ ವಿಶ್ವಾಸವಿದೆ’ ಎಂದು ಪೂವಯ್ಯ ಹೇಳಿದರು.
ಪೊನ್ನಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಮಾತನಾಡಿ,‘ಇದೀಗ ಕಾಫಿ ಕೊಯ್ಲು ಕೆಲಸ ನಡೆಯುತ್ತಿದ್ದು ಹುಲಿಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಆದಷ್ಟು ಬೇಗ ಮುಗಿಸಲಾಗುವುದು’ ಎಂದು ತಿಳಿಸಿದರು. ನಿಟ್ಟೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪೋರಂಗಡ ಪವನ್ ಹಾಜರಿದ್ದರು.
ಕಾರ್ಯಾಚರಣೆಗೆ 8 ಕ್ಯಾಮರಾ ಬಳಕೆ | ಆದಷ್ಟು ಶೀಘ್ರ ಹುಲಿ ಕಾಡಿಗಟ್ಟುವ ಭರವಸೆ | ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ನೇತೃತ್ವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.