ಕುಶಾಲನಗರ (ಕೊಡಗು ಜಿಲ್ಲೆ): ಕಾವೇರಿ ಕಣಿವೆಯ ಪ್ರಮುಖ ಜಲಾಶಯವಾದ ಹಾರಂಗಿ ಭರ್ತಿಯಾಗಿದ್ದು, ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಜಲಾಶಯಕ್ಕೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಅದಕ್ಕೂ ಮೊದಲು ಜಲಾಶಯದ ಉದ್ಯಾನದಲ್ಲಿರುವ ಕಾವೇರಿ ಮಾತೆಯ ಪ್ರತಿಮೆಗೂ ಪೂಜೆ ಸಲ್ಲಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರಕ್ಕೆ ಪ್ರಕೃತಿಯೂ ಆಶೀರ್ವಾದ ಮಾಡುತ್ತಿದೆ. ಎರಡು ವರ್ಷಗಳಿಂದ ರಾಜ್ಯದಲ್ಲಿ ಎಲ್ಲೂ ಬರದ ಛಾಯೆ ಆವರಿಸಿಲ್ಲ. ಆದರೆ, ಅತಿವೃಷ್ಟಿಯಿಂದ ಸ್ವಲ್ಪ ತೊಂದರೆ ಉಂಟಾಗಿದೆ. ಭಾರಿ ಮಳೆಯಿಂದ ತೊಂದರೆಗೆ ಒಳಗಾದವರಿಗೆ ಸೂಕ್ತ ಪರಿಹಾರವನ್ನೂ ನೀಡಲಾಗುತ್ತಿದೆ’ ಎಂದರು.
‘ಕೊಡಗು ಸೇರಿದಂತೆ ಕೆ.ಆರ್.ನಗರ, ಮೈಸೂರು, ಹಾಸನ, ಅರಕಲಗೂಡು, ಹುಣಸೂರಿನ 1.65 ಲಕ್ಷ ಹೆಕ್ಟೇರ್ ಪ್ರದೇಶಗಳಿಗೆ ಹಾರಂಗಿ ಜಲಾಶಯವು ನೀರು ಒದಗಿಸುತ್ತಿದೆ’ ಎಂದು ಮಾಹಿತಿ ನೀಡಿದರು.
ಕೊಡಗಿನಲ್ಲಿ ಒಂದು ವಾರ ಸುರಿದ ಭಾರಿ ಮಳೆ ಹಾಗೂ ಗಾಳಿಯಿಂದ ಅಂದಾಜು ₹ 1 ಕೋಟಿಯಷ್ಟು ನಷ್ಟವಾಗಿದೆ. ಮಡಿಕೇರಿ ತಾಲ್ಲೂಕಿನ ಅವಂದೂರಿನ ಹೊಳೆಯಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.